ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳೇ ಶಿಕ್ಷಕರು: ಸಚಿವ ಡಾ.ಕೆ.ಸುಧಾಕರ್

11:03 AM, Monday, September 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

 

Teachers Day ಚಿಕ್ಕಬಳ್ಳಾಪುರ :  ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಕ್ಷಕ ವೃತ್ತಿಯು ಕೇವಲ ವೇತನಕ್ಕೆ ಕೆಲಸ ಮಾಡುವ ಉದ್ಯೋಗವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲಾಡಳಿತದಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಪೊಲೀಸರು, ವೈದ್ಯರ ಕೆಲಸ ವೇತನಕ್ಕಾಗಿ ಮಾಡುವುದಲ್ಲ. ಅದೇ ರೀತಿ ಶಿಕ್ಷಕ ವೃತ್ತಿ ಕೂಡ ಒಂದು ಸೇವೆ. ಶಿಕ್ಷಕರು ಸುಮಾರು 30-35 ವರ್ಷಗಳ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನೋಡುತ್ತಾರೆ. ಆ ವಿದ್ಯಾರ್ಥಿಗಳಲ್ಲಿ ಅನೇಕರು ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ. ಬೇರೆ ಯಾವ ವೃತ್ತಿಯಲ್ಲೂ ಈ ಬಗೆಯ ಮಾನಸಿಕ ತೃಪ್ತಿ, ಸಂತೋಷ ಸಿಗುವುದು ಕಷ್ಟ ಎಂದರು.

ಮಕ್ಕಳಿಗೆ ಪೋಷಕರ ನಂತರದ ಸ್ಥಾನವನ್ನು ಶಿಕ್ಷಕರು ತುಂಬುತ್ತಾರೆ. ಪಠ್ಯಪುಸ್ತಕದಲ್ಲಿ ಕಲಿಯುವುದಕ್ಕೂ, ಜೀವನದಲ್ಲಿ ಕಲಿಯುವುದಕ್ಕೂ ವ್ಯತ್ಯಾಸವಿದೆ. ನೈಜ ಜೀವನದ ಮೌಲ್ಯ, ದಯೆ, ಶಿಸ್ತನ್ನು ಶಿಕ್ಷಕರು ಕಲಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಲಿಂಗ ತಾರತಮ್ಯ ನಿವಾರಣೆಯಾಗಿ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದಾರೆ. ಶಿಕ್ಷಣದಲ್ಲಿ ಬಾಲಕಿಯರು ಮೇಲುಗೈ ಸಾಧಿಸುತ್ತಿರುವುದು ಬಹಳ ಆಶಾದಾಯಕ ಎಂದರು.

ಶಿಕ್ಷಕರು ಕೂಡ ಜೀವನದುದ್ದಕ್ಕೂ ಕಲಿಯುತ್ತಲೇ ಇರಬೇಕು. ಇದರಿಂದಾಗಿ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರನ್ನು ನೋಡಿ ಮಕ್ಕಳು ಅವರಂತೆ ಆಗಬೇಕು ಎಂದು ನಿರ್ಧರಿಸುವಂತಾಗಬೇಕು ಎಂದರು.

ರಾಜಕೀಯ ಶಿಕ್ಷಣ ಅಗತ್ಯ

ಉತ್ತಮ ರಾಜಕಾರಣಿಗಳು ವಯಸ್ಸಾದ ನಂತರ ನಿವೃತ್ತರಾಗದೆ ರಾಜಕೀಯ ಶಿಕ್ಷಣ ಬೋಧಿಸಬೇಕು. ಆಡಳಿತ, ಸಾರ್ವಜನಿಕ ನೀತಿಯ ಬಗ್ಗೆ ಯುವಜನರಿಗೆ ತಿಳಿಸಬೇಕು. ಇಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಈ ಬಗ್ಗೆ ಚಿಂತಿಸಬೇಕಿದೆ. ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಆಚರಿಸಬೇಕೆಂದಾಗ, ಅದರ ಬದಲು ‘ಶಿಕ್ಷಕರ ದಿನ’ ಆಚರಿಸಿ ಎಂದು ಅವರು ಹೇಳುತ್ತಾರೆ. ಇಂತಹ ನಾಯಕರು ನಮಗೆ ಸ್ಪೂರ್ತಿ ಎಂದರು.

ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದಾರೆ. ಇದರಿಂದ ಯಾವುದೇ ತಾರತಮ್ಯ ಇಲ್ಲದೆ ಸಮಾನ ಅವಕಾಶ ಲಭ್ಯವಾಗಲಿದೆ. ಹೊಸ ಕಲಿಕಾ ವಿಧಾನಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಸಿಗಲಿದೆ. ಈಗ ಆನ್ ಲೈನ್ ಶಿಕ್ಷಣವಿದ್ದರೂ, ಆಫ್ ಲೈನ್ ಶಿಕ್ಷಣವೇ ಉತ್ತಮ. ಈ ಹಿಂದಿನ ಕಲಿಕಾ ವಿಧಾನವೇ ಸಂಪೂರ್ಣವಾಗಿ ಬರಬೇಕಿದೆ. ಅದಕ್ಕಾಗಿ ಶಾಲಾ, ಕಾಲೇಜು ಆರಂಭಿಸಲಾಗಿದೆ. ಆದರೆ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಹಲವರಿಗೆ ಸೋಂಕು ಕಂಡುಬಂದಿದೆ. ಆದರೂ ಹೆಚ್ಚಿನ ಸಮಸ್ಯೆ ಆಗಿಲ್ಲ. ಮಕ್ಕಳು ಶಾಲೆಗೆ ಬಂದಾಗ ಎಚ್ಚರದಿಂದ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆತ್ಮಹತ್ಯೆ ಸಮಸ್ಯೆ

ಮಕ್ಕಳು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿ 22 ನಿಮಿಷಕ್ಕೊಮ್ಮೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2018-19 ರಲ್ಲಿ ಸುಮಾರು 9-10 ಸಾವಿರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಣ ವಿದ್ಯಾಭ್ಯಾಸ ಮಾತ್ರ ಅಲ್ಲ. ಹೆಚ್ಚು ಅಂಕ ಗಳಿಸಿದವರೇ ಸಫಲರಾಗುತ್ತಾರೆ ಎಂದರ್ಥವಲ್ಲ. ಆದ್ದರಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕು. ಪ್ರತಿ ವಿದ್ಯಾರ್ಥಿಯಲ್ಲಿ ಒಂದು ವಿಶಿಷ್ಟ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅಂಗವೈಕಲ್ಯ ಹೊಂದಿರುವವರು ಒಲಿಂಪಿಕ್ಸ್ ನಲ್ಲಿ ಹೆಚ್ಚು ಪದಕ ಗಳಿಸಿದ್ದಾರೆ. ಹೀಗಾಗಿ ಪ್ರತಿ ವಿದ್ಯಾರ್ಥಿಯ ಕೀಳರಿಮೆ ನಿವಾರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಶಿಕ್ಷಕರಿಗೆ ಗೌರವ ಸಲ್ಲಿಸಲು ಗುರುಭವನವನ್ನು ಸುಸಜ್ಜಿತವಾಗಿ ನಿರ್ಮಿಸಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ 2 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 1 ಕೋಟಿ ರೂ. ನೀಡಲಾಗುತ್ತದೆ. ಇನ್ನೂ 2 ಕೋಟಿ ರೂ. ಅನ್ನು ಸಂಗ್ರಹಿಸಲಾಗುವುದು. ಒಟ್ಟು 5 ಕೋಟಿ ರೂ. ನಲ್ಲಿ ಒಂದೇ ವರ್ಷದಲ್ಲಿ ಗುರುಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English