ಉದ್ಯೋಗ ಸೃಷ್ಟಿಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ: ಬಸವರಾಜ ಬೊಮ್ಮಾಯಿ

10:25 PM, Friday, September 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

CM Kalburgiಕಲಬುರಗಿ : ಮುಂದಿನ ಎರಡು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿಸ ಅವರು, ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಸಣ್ಣ, ಮದ್ಯಮ ಮತ್ತು ಭಾರಿ ಉದ್ಯಮಗಳ ಸೃಷ್ಟಿಗೆ ವಿಪುಲ ಅವಕಾಶಗಳಿವೆ ಎಂದರು.

ಮುರುಗೇಶ್ ನಿರಾಣಿಯವರ ನೇತೃತ್ವದಲ್ಲಿ ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೂಡಿಕೆದಾರರ ಸಭೆ ನಡೆಸಿ ಚರ್ಚಿಸಿ, ಅನುಮೋದನೆಗಳನ್ನು ನೀಡಿ, ಇಲ್ಲಿ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗುವುದು ಬಹಳ ಅಗತ್ಯವಿದೆ. ಇದರಿಂದ ಸಣ್ಣ ಉದ್ದಿಮೆಗಳೂ ಬೆಳೆಯುತ್ತವೆ. ಹಾಗೂ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಸಿಮೆಂಟ್ ಉದ್ಯಮ ಇಲ್ಲಿ ಬಹಳ ಇದೆ. ಆದರೆ ಇದರ ಲಾಭ ಸ್ಥಳೀಯರಿಗೆ ಆಗುತ್ತಾ ಇಲ್ಲ. ಆದ್ದರಿಂದ ಸಿಮೆಂಟ್ ತಯಾರಕರನ್ನು ಕರೆಸಿ, ಎಷ್ಟು ಜನ ಸ್ಥಳೀಯರಿಗೆ ಉದ್ಯೋಗ ನೀಡಿದ್ದೀರಿ ಎಂದು ಮಾಹಿತಿ ಪಡೆದುಕೊಳ್ಳಲಾಗುವುದು. ಕಾನೂನಾತ್ಮಕವಾಗಿ ಬರುವ ಲಾಭದಲ್ಲಿ ಸಿ.ಎಸ್.ಆರ್. ಅನುದಾನ ಕಲ್ಯಾಣ ಕರ್ನಾಟಕಕ್ಕೆ ದೊರೆಯಬೇಕು. ಆದರೆ ಇದು ಆಗುತ್ತಾ ಇಲ್ಲ. ಕೋವಿಡ್ ಸಂದರ್ಭದಲ್ಲಿಯೂ ನಿರೀಕ್ಷೆಗೆ ತಕ್ಕಂತೆ ನೆರವು ನೀಡಿಲ್ಲ. ಆದರೆ ಮುಂದೆ ಹೀಗೆ ನಡೆಯುವುದಿಲ್ಲ. ಯಾವ ಭೂಮಿಯಿಂದ ನೀವು ಲಾಭ ಪಡೆದಿದ್ದೀರೋ, ಆ ನೆಲಕ್ಕೆ, ಅಲ್ಲಿನ ಜನರಿಗೆ ಸಹಾಯ ಮಾಡಲೇಬೇಕು ಎಂದು ಮುಖ್ಯಮಂತ್ರಿಯವರು ಎಚ್ಚರಿಕೆ ನೀಡಿದರು.

ನಂಜುಂಡಪ್ಪ ವರದಿಗೆ ಹೊಸ ರೂಪ
ನಂಜುಂಡಪ್ಪ ವರದಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಮುಂದಿನ 5 ವರ್ಷಗಳಿಗೆ ವಿಸ್ತರಿಸಿ ಪ್ರಸ್ತುತ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಅದಕ್ಕೆ ಹೊಸ ರೂಪ ನೀಡಲಾಗುವುದು.

ಆಶೋತ್ತರಗಳ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳ ಮನೋಭಾವ ಬದಲಾಯಿಸಿ, ಆಯವ್ಯಯದಲ್ಲಿ ಎಲ್ಲಾ ಇಲಾಖೆಗಳ ಯೋಜನೆಗಳಿಗೂ ಸಂರ್ಪವಾದ ಅನುದಾನವನ್ನು ಒದಗಿಸಲಾಗುವುದು. ಅದಲ್ಲದೆ, ಪ್ರತಿ 3 ತಿಂಗಳಿಗೊಮ್ಮೆ ಕೆ.ಕೆ.ಡಿ.ಬಿ ಹಾಗೂ ನಂಜುಂಡಪ್ಪ ವರದಿ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಖುದ್ದು ತಾವೇ ಮಾಡುವುದಾಗಿ ತಿಳಿಸಿದರು.

ನೈಸರ್ಗಿಕ ಸಂಪತ್ತು, ನದಿಗಳನ್ನು ಕೃಷಿಗೆ ಬಳಕೆ ಮಾಡುವ ಯೋಜನೆಗಳು, ಕೃಷ್ಣಾ ಮೇಲ್ದಂಡೆ – 3 ನೇ ಹಂತದಲ್ಲಿ ಈ ಭಾಗದ ಯೋಜನೆಗಳನ್ನು ಪೂರ್ಣಗೊಳಿಸುವುದು.ಮತ್ತು ಈ ಭಾಗದ ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ , ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಬಳಿ ಚರ್ಚಿಸಲಾಗುವುದು ಎಂದರು.

ಹುದ್ದೆಗಳ ನೇಮಕಾತಿ:
ನೇಮಕಾತಿ ಎಂದಾಗ ಈ ಭಾಗದಲ್ಲಿ ನೇಮಕಾತಿಯನ್ನು ಮಾಡಬೇಕಾದ ಪ್ರಮಾಣದಲ್ಲಿ ಮಾಡಲಾಗಿಲ್ಲ. ಅದನ್ನು ಪೂರ್ಣಗೊಳಿಸುವ ಸಂಕಲ್ಪ ನಮ್ಮ ಸರ್ಕಾರದ್ದು. ಡಿ ವರ್ಗದಿಂದ ಹಿಡಿದು, ಸಿ. ಬಿ ಮತ್ತು ಎ ವರ್ಗದ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ನೇಮಕಾತಿ ಆಗಬೇಕಿದೆ. ಕಲ್ಯಾಣ ಕರ್ನಾಟಕ ಮಂಡಳಿಯನ್ನು ಬಲಪಡಿಸಿ, ಅದಕ್ಕೆ ಶಾಶ್ವತವಾಗಿ ಒಬ್ಬ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು. 372 ಜೆ ಅನುಷ್ಠಾನ ಮಾಡಲು ಇರುವ ಸೆಲ್ ಕಚೇರಿಯನ್ನು ಕಲಬುರಗಿಯಲ್ಲಿ ಸ್ಥಾಪನೆ ಮಾಡಲಾಗುವುದು. ಅದಾದರೆ 371 ಜೆ ಅನುಷ್ಠಾನದ ಸಂಪೂರ್ಣ ನಿಗಾ ವಹಿಸಬೇಕು. ಖರ್ಚಾಗಿರುವ ಹಣದ ಸಾರ್ಥಕತೆ ಎಷ್ಟು, ಎಷ್ಟು ವಿದ್ಯಾರ್ಥಿಗಳಿಗೆ ಲಾಭ ಆಗಿದೆ, ಮಾನವ ಸಂಪನ್ಮೂಲ ಅಭಿವೃದ್ಧಿ ಏನಾಗಿದೆ, ಆರೋಗ್ಯ ಕ್ಷೇತ್ರ, ಉದ್ಯೋಗ, ಕೈಗಾರಿಕೆಗಳು ಏನಾಗಿದೆ ಎಂಬ ಮೌಲ್ಯಮಾಪನ ಮಾಡಲಾಗುತ್ತಿದೆ. ಇದರ ಮೂಲಕ ಅಗತ್ಯ ಬದಲಾವಣೆಗಳನ್ನು ಮಾಡಿ ನೇರವಾಗಿ ಈ ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಮಾಪನ ಆಧಾರದ ಮೇಲೆ ಬದಲಾವಣೆಗಳನ್ನು ತರಲಾಗುತ್ತಿದೆ. ನಮ್ಮ ಚಿಂತನೆ, ಕಾರ್ಯಸರಣಿ, ಗುರಿ ಹಾಗೂ ಅನುಷ್ಠಾನದಲ್ಲಿ ಆಮೂಲಾಗ್ರ ಬದಲಾವಣೆ ತರುವ ಸಂಕಲ್ಪವನ್ನು ಮಾಡಿದ್ದೇವೆ. ಈ ಸರ್ಕಾರ ನಿಮ್ಮ ಪರವಾಗಿದೆ. ಈವರೆಗೆ ನಿರೀಕ್ಷೆ ಇಟ್ಟು ನಿರಾಶರಾಗಿರಬಹುದು. ಆದರೆ ಸ್ವಲ್ಪ ಸಮಯದಲ್ಲಿ ಇಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು ಎಂಬ ಭರವಸೆಯಿತ್ತರು. ಕಲ್ಯಾಣ ಕರ್ನಾಟಕ ಮಂಡಳಿಗೆ ಒದಗಿಸಲಾಗಿರುವ 8 ಸಾವಿರ ಕೋಟಿಗೂ ಹೆಚ್ವು ಅನುದಾನದಲ್ಲಿ ಕೇವಲ 6 ಸಾವಿರ ಕೋಟಿ ರೂ.ಗಳು ವೆಚ್ಚವಾಗಿದೆ. ಇನ್ನು 2 ಸಾವಿರ ಕೋಟಿ ಈ ವರ್ಷದಲ್ಲಿ ವೆಚ್ಚವಾಗಬೇಕಿದೆ. ಸುಮಾರು 13 ಸಾವಿರ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣವಾಗಬೇಕಿದೆ. ಈ ಭಾಗದ ಶಾಸಕರಿ ಹೆಚ್ವಿನ ಅನುದಾನ ಬೇಡಿಕೆ ಇಟ್ಟಾಗ, ಇರುವುದನ್ನು ಪೂರ್ಣವಾಗಿ ಖರ್ಚು ಮಾಡಿ, ಮುಂದಿನ ಆಯವ್ಯಯದಲ್ಲಿ 1500 ಕೋಟಿ ಖರ್ಚು ಮಾಡಿದರೆ ಹೆಚ್ಚಿನ ಅನುದಾನ ನೀಡುವ ಕರಾರು ಹಾಕಿದ್ದೇನೆ. ಅಷ್ಟು ಹಣವನ್ನು ಉಪಯೋಗಿಸಿದರೆ, 1500 ಕೋಟಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಆಸ್ತಿ ಸೃಜನೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ವ್ಯಯಿಸಿದರೆ, ಇನ್ನಷ್ಟು ಅನುದಾನ ನೀಡಲು ಸಿದ್ಧವಿರುವುದಾಗಿ ತಿಳಿಸಿದರು. ಈ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕು ಎಂದರು.

ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಕಲ್ಯಾಣ ಕರ್ನಾಟಕದ ಕೆಲಸಗಳು ಮುಂದಿನ ಜನಾಂಗಕ್ಕೂ ಒಳಿತಾಗುವ ನಿಟ್ಟಿನಲ್ಲಿ ನಮ್ಮ ಯೋಜನೆ ಮತ್ತು ಯೋಚನೆಗಳಿರಬೇಕು ಎಂದು ತಿಳಿಸಿದರು.

ಸರ್ದಾರ್ ಪಟೇಲರ ಕೊಡುಗೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛಾಶಕ್ತಿ, ದೂರದೃಷ್ಟಿ ಮತ್ತು ಭಾರತದ ಅಖಂಡತೆ ಮತ್ತು ಏಕತೆಯ ಬಗ್ಗೆ ಅವರು ಅಚಲ ವಿಶ್ವಾಸದಿಂದ ಹಲವಾರು ರಾಜ್ಯಗಳನ್ನು ಒಟ್ಟು ಸೇರಿಸಿ ಭಾರತ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಭಾರತ ಸಾರ್ವಭೌಮ ದೇಶವಾಗಿದ್ದರೆ ಅದರ ಹಿಂದಿರುವ ಬಹುದೊಡ್ಡ ಶಕ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದ್ದು. ತಾತ್ವಿಕ ಮತ್ತು ತಾರ್ಕಿಕ ಹೋರಾಟವನ್ನು ಮಾಡಿದರು. ಲೋಕ ಮಾನ್ಯ ತಿಲಕ್ ರಿಂದ ಹಿಡಿದು ಭಗತ್ ಸಿಂಗ್ ವರೆಗೆ ಅನೇಕ ದೇಶಭಕ್ತರನ್ನು , ಒಗ್ಗೂಡಿಸಿದರು. ರೈತರು ಮತ್ತು ಕಾರ್ಮಿಕರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿದರು. ಯಾವ ದೇಶದಲ್ಲಿ ರೈತರು ಮತ್ತು ಕಾರ್ಮಿಕರು ಒಗ್ಗೂಡಿ ನಿರ್ಣಯ ಮಾಡುತ್ತಾರೆ ಅಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಐತಿಹಾಸಿಕ ಬಾರ್ಡೋಲಿ ಮತ್ತು ಚಂಪಾರನ್ ಸತ್ಯಾಗ್ರಹ, ಸ್ವತಂತ್ರಕ್ಕೆ ದಾರಿಮಾಡಿಕೊಟ್ಟಿತು. ಒಂದು ಹನಿ ರಕ್ತವನ್ನೂ ಹರಿಸದೆ ಭಾರತವನ್ನು ಒಗ್ಗೂಡಿಸಿದ ಹಿರಿಮೆ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಸೇರುತ್ತದೆ. ಇಲ್ಲದಿದ್ದರೆ ಭಾರತದ ನಕ್ಷೆ ಬದಲಾಗುತ್ತಿತ್ತು. ಅದನ್ನು ನಾವೆಲ್ಲರೂ ಸದಾ ಕಾಲ ನೆನಪಿಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

371 ಜೆ
ಕರ್ನಾಟಕದ ಏಕೀಕರಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿರಿಯರ ಪಾತ್ರ ಬಹಳ ದೊಡ್ಡದು. ಹಿರಿಯರಿಗೆ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸಬೇಕು. ಏಕೀಕರಣದ ಲಾಭ ಈ ಭಾಗದ ಜನರಿಗೆ ದೊರೆಯಲಿಲ್ಲ. ಈ ಭಾಗಕ್ಕೆ ಸಂವಿಧಾನದಲ್ಲಿ 371 ಅಳವಡಿಸಲಾಗಿತ್ತು ಜೆ ವರೆಗೂ ವಿಸ್ತರಿಸಲಾಗಿದೆ. ಈ ನಿಟ್ಟಿನಲ್ಲಿ ವೈಜನಾಥ ಪಾಟೀಲರ ಕೊಡುಗೆ ಅಪಾರ. ನಮ್ಮ ನಾಯಕ ಬಿ.ಎಸ್ .ಯಡಿಯೂರಪ್ಪ ಅವರು 371 ಜೆ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಕೇವಲ ಸಂವಿಧಾನದ ತಿದ್ದುಪಡಿಯಾದರೆ ಸಾಲದು, 371 ಜೆ ನಂತರ ಎಲ್ಲರ ಬದುಕಿನಲ್ಲಿಯೂ ಬದಲಾವಣೆ ಆಗುತ್ತದೆ ಎಂಬ ಆಶಾಕಿರಣ ಮೂಡಿತ್ತು. ಆದರೆ, ಆಡಳಿತ ಮಾಡುವವರ ಮನಸ್ಥಿತಿ ಬದಲಾವಣೆಯಾಗದೆ ಈ ಭಾಗದ ಜನರ ಜೀವನ ಗುಣಮಟ್ಟದಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಕಟು ಸತ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆಮೂಲಾಗ್ರ ಬಡಲಾವಣೆಯಾಗಬೇಕಿದೆ. ಸಣ್ಣಪುಟ್ಟ ಕಾರ್ಯಕ್ರಮಗಳ ಮೂಲಕ ಬದಲಾವಣೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ರಾಜ್ಯದ ಪ್ರಮುಖ ಭಾಗವಾದ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದೆ , ಅಭಿವೃದ್ಧಿ ಚಿತ್ರಣ ಪೂರ್ಣವಾಗುವುದಿಲ್ಲ. ಕನ್ನಡ ಮಾತೆಯ ಮಕ್ಕಳ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ನಮ್ಮ ಹಿರಿಯರು ಮಾಡಿದ್ದು, ಅದರ ಸಾಕಾರವಾಗಬೇಕು. ನಾವು ಮುಂದೆ ಸಾಗಬೇಕಾಗಿರುವ ದಾರಿ ಹಾಗೂ ಆ ಸಂಕಲ್ಪದಿಂದ ಮುಂದುವರೆಯಬೇಕಾದದ್ದು ಬಹಳ ಮುಖ್ಯ ಎಂದು ತಿಳಿಸಿದರು.

ಆಶ್ವಾಸನೆಗಳು, ಘೋಷಣೆಗಳಿಂದ ಕಲ್ಯಾಣ ಕರ್ನಾಟಕದ ಕಟ್ಟಕಡೆಯ ಹಳ್ಳಿಯಲ್ಲಿರುವ ವ್ಯಕ್ತಿಯ, ರೈತ, ಮಹಿಳೆ, ಯುವಕನ ಬದುಕಿನಲ್ಲಿ ಬದಲಾವಣೆಯಾಗಬೇಕಾದರೆ, ನಾವು ಯಾವ ಕಾರ್ಯಕ್ರಮವನ್ನು ರೂಪಿಸುತ್ತೇವೆ, ಅದು ಅವರಿಗೆ ಮುಟ್ಟುವ ಕೆಲಸವಾಗಬೇಕು. ಯಾವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ ಅವುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಲಾಗುವುದು.

ಕಲಬುರಗಿಯಲ್ಲಿ ನಾಲ್ಕು ಕ್ಲಸ್ಟರ್ ಯೋಜನೆಗಳಿವೆ ಅದು ಜನರಿಗೆ ಉಪಯುಕ್ತವಾಗಬೇಕು. ಬೀದರ್ ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿದೆ. ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುವುದು. ಕಲ್ಯಾಣ ಕರ್ನಾಟಕದ ಹಲವಾರು ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ. ಶಿಕ್ಷಣಕ್ಕೆ ಬಂದರೆ, ಅತಿ ಹೆಚ್ಚು ಶಾಲೆ , ಕಾಲೇಜು ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ. ಅದಕ್ಕೆ ಅಗತ್ಯವಿರುವ ಸಂಸ್ಥೆ, ಶಿಕ್ಷಕರ ನೇಮಕಾತಿಯನ್ನು ಮಾಡಲಾಗುವುದು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English