ಶ್ರೀ ಮಂಗಳಾದೇವಿ ಅಮ್ಮನ ಶರನ್ನವರಾತ್ರಿ ಮಹೋತ್ಸವ ಶುಭಾರಂಭ

9:28 PM, Thursday, October 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Mangaladevi Navaratri ಮಂಗಳೂರು : ಆಶ್ವಯುಜ ಶುಕ್ಲ ಪ್ರಥಮದಿನ ಪಾಡ್ಯದ ದಿನವಾದ ಗುರುವಾರ ಅಕ್ಟೊಬರ್ 7 ರಿಂದ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವವು ಪ್ರಾರಂಭವಾಗವುದರೊಡನೆ ಶ್ರೀ ಮಹಾಗಣಪತಿ ದೇವರ ಸಾನಿಧ್ಯ, ಮಹಾತಾಯಿಯ ಸನ್ನಿಧಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕೊಪ್ಪರಿಗೆ ಮುಹೂರ್ತವನ್ನಿಟ್ಟು ನವರಾತ್ರಿ ಉತ್ಸವವು ಉದ್ಘಾಟನೆಯಾಗಿ ಶ್ರೀ ಮಂಗಳಾದೇವಿಯ ಮಂಗಳೂರು ದಸರಾ ಶುಭಾರಂಭ’ಗೊಂಡಿತು.

ದಿನಾಂಕ 8’ರ ಶುಕ್ರವಾರದಂದು ಒಂದೇ ದಿನ ಬಿದಿಗೆ- ತದಿಗೆ ಎರಡೂ ತಿಥಿಗಳು ಬೀಳುವುದರಿಂದ ಶರನ್ನವರಾತ್ರಿಯು ಪ್ರಸ್ತುತವಾಗಿ 8′ ದಿನಗಳಿಗೆ ಸೀಮಿತವಾಗಿರುತ್ತದೆ

ಅಕ್ಟೋಬರ 8’ರ ಶುಕ್ರವಾರದ ಪ್ರಾತಃಕಾಲ 10.48 ಗಂಟೆಯವರೆಗೆ ದ್ವಿತೀಯ ತಿಥಿಯಿದ್ದು 10.50 ಗಂಟೆಯಿಂದ ತೃತೀಯಾವು ಪ್ರಾರಂಭವಾಗಿ 9’ರ ಶನಿವಾರ, ತದಿಗೆ (ತೃತೀಯಾ) ಬೆಳಿಗ್ಗೆ 7.48 ರವರೆಗೆ ಇರುತ್ತದೆ, ಬಳಿಕ ಚತುರ್ಥಿಯು ಆರಂಭವಾಗುತ್ತದೆ. ಹಾಗೂ ಇದು ಮರುದಿನ ಅಕ್ಟೋಬರ ದಿನಾಂಕ 10’ರ ಭಾನುವಾರ ಬೆಳಿಗ್ಗೆ 5 ಗಂಟೆಯ ವರೆಗೆ ಇರುತ್ತದೆ. ಹೀಗಾಗಿ ಅಕ್ಟೋಬರ 8’ರ ಶುಕ್ರವಾರದಂದು ದ್ವಿತೀಯ ಹಾಗೂ ತೃತೀಯ ತಿಥಿಗಳನ್ನು ಒಂದೇ ದಿನಗಳೆಂದು ಪರಿಗಣಿಸಲಾಗಿದ್ದು ಆರ್ಯಾ- ಭಗವತಿ ಎರಡೂ ಅಲಂಕಾರವನ್ನು ಒಂದು ಅಲಂಕಾರವೆಂದು ನಡೆಸಿ ಶ್ರೀ ಮಂಗಳಾದೇವಿ ಅಮ್ಮನಿಗೆ ನವರಾತ್ರಿಯ ಆರ್ಯಾ- ಭಗವತಿ ಅಲಂಕಾರಯುಕ್ತ ನವರಾತ್ರಿಯ ಆರಾಧನೆಯನ್ನು ಸಮರ್ಪಿಸಲಾಗುತ್ತದೆ.

Mangaladevi Navaratri ರಾತ್ರಿಯ ಉತ್ಸವ ಕಾಲದಲ್ಲಿ ಪ್ರತಿದಿನ ‘ಪಾಲಕಿ ಉತ್ಸವ’ವು ದೇವಳದ ರಾಜಾಂಗಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ರಜತ ಹಾಗು ಮರದ ಪಾಲಕಿಯಲ್ಲಿಟ್ಟು ಸರ್ವವಾದ್ಯಾದಿಗಳ ಸಮೇತ ಮೂರು ಸುತ್ತು ಬಲಿಯೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ.

ಮುಂದೆ ಐದನೇ ದಿನದ ‘ಮೂಲಾನಕ್ಷತ್ರ’ದ ಆರಂಭದ ದಿನಾಂಕ 11’ರ ಸೋಮವಾರ ದ ‘ಷಷ್ಠಿಯಂದು’ ಮೂಲ ನಕ್ಷತ್ರವು ವಿಶೇಷವಾಗಿದ್ದು ಅಂದಿನಿಂದ ರಾತ್ರಿ ಉತ್ಸವಾದಿಗಳು ಮೊದಲ್ಗೊಳ್ಳುವುದು.

ರಾತ್ರಿ ಉತ್ಸವವಾದ ಬಲಿ ಉತ್ಸವಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ನಾಗ ಸ್ವರದ ಧ್ವನಿಗೆ ತಕ್ಕಂತೆ ‘ಮೂರ್ತಿಭಟ್ಟರು’ ‘ರಜತ ಪ್ರಭಾವಳಿಯೊಂದಿಗೆ ಸಂಪೂರ್ಣ ಸ್ವರ್ಣ ಕವಚ ಖಚಿತವಾಗಿರುವ ಪುಷ್ಪ ಕನ್ನಡಿ ,ಹಿಂಬದಿಯ ಪಾರ್ಶ್ವ ಹಸ್ತದಲ್ಲಿ ತ್ರಿಶೂಲ ಹಾಗೂ ವಾಮ ಹಸ್ತದಲ್ಲಿ ಪರಶು ಧರೆಯಾಗಿ, ಅಭಯ-ವರ ಮುದ್ರೆ ಹಸ್ತಗಳೊಡನೆ ಚತುರ್ಭುಜ ಯುತವಾದ ಸುಂದರವಾದ ಪುಟ್ಟ ದೇವಿಯ ಉತ್ಸವ ಮೂರ್ತಿಯನ್ನು ಶಿರದಲ್ಲಿರಿಸಿ ಶಾಸ್ತ್ರೀಯ ನೃತ್ಯ ಪ್ರಕಾರದಂತೆ ಬಲಿಗೆ ಮುಂದಾಗುವ ಸನ್ನಿವೇಶ ನಮ್ಮೆಲ್ಲರಿಗೆ ತನ್ಮಯತೆಯ ಆನಂದವನ್ನುಂಟು ಮಾಡುತ್ತದೆ. ಛತ್ರ ಬಿರುದು-ಬಾವಲಿಯ ಸಹಿತ ಎರಡೂ ಬದಿಯ ಚಾಮರ, ದೀವಟಿಕೆಗಳ ಬೆಳಕಿನಲ್ಲಿ, ತನ್ನ ಭಕ್ತರ ಸಂಗಡ, ತನ್ನ ದೇವಾಲಯದಲ್ಲಿ ತಾಯಿಯು ರಾಜ ಗಾಂಭೀರ್ಯದಿಂದ ಪಂಚವಾದ್ಯಗಳ ಸವಿನಾದಕ್ಕೆ ತಕ್ಕಂತೆ ಬಲಿ ಉತ್ಸವದ ಸೇವೆಯಿಂದ ಸಂಪ್ರೀತಳಾಗುವಳು. ಶ್ರೀ ದೇವಿಯು ಉತ್ಸವ ಪ್ರಿಯಳಾದ್ದರಿಂದ ಆಕೆಗೆ ಇನ್ನಷ್ಟು ಸೇವೆಯನ್ನು ನಡೆಸುವುದು ನಮ್ಮ ಭಾಗ್ಯವೇ ಸರಿ.

Mangaladevi Navaratri ಇದೇ ಮೂಲಾ ನಕ್ಷತ್ರದಂದು ಸರಸ್ವತೀ ಸ್ಥಾಪನೆಯೊಂದಿಗೆ, ಶಾರದಾ ಪೂಜೆ’ ಯನ್ನು ಮಾಡಿ ದೇವಳದ ಚಂದ್ರಶಾಲೆ (ಹೊರ ಗರ್ಭಗೃಹ)ಯಲ್ಲಿ ಅರ್ಚಿಸಲಾಗುತ್ತದೆ. ವಿಶೇಷವಾಗಿ ಪೂಜೆಯು ಸಲ್ಲುವುದು ಪ್ರಾಚೀನ ಕಾಲದಿಂದ ಪೂಜಿಸಿಕೊಂಡು ಬಂದ ಸಂಸ್ಕೃತ ಸಾಹಿತ್ಯ ಪ್ರಧಾನವಾದ ದೇವಳದ ಸರಸ್ವತೀ ಗ್ರಂಥಕ್ಕೆ.ಸಕಲ ಬುದ್ಧಿ ಭಾವ ರಸಗಳ ವಿಶುದ್ಧ ರೂಪಿಯೇ ಸರಸ್ವತಿ. ಇದರಲ್ಲಿ ಬ್ರಹ್ಮ ಜ್ಞಾನದ ಎಲ್ಲಾ ಸಾರಸತ್ವ ಅಡಗಿವೆ ಎಂಬ ನಂಬಿಕೆ. ಆದರಿಂದ ಸಾಕ್ಷಾತ್ ಸರಸ್ವತಿ ದೇವಿಯನ್ನೇ ಗ್ರಂಥ ರೂಪದಲ್ಲಿ ಪೂಜಿಸಲಾಗುತ್ತದೆ.

ಉತ್ಸವದ ಸಮಯದಲ್ಲಿ ಅಪರಾಹ್ನ 1’ಗಂಟೆಗೆ ಹಾಗೂ ರಾತ್ರಿ 10.30 ‘ರ ರ ಸುಮಾರಿಗೆ ಮಹಾಪೂಜೆ ಜರುಗಲಿದೆ.

ಮುಂದೆ ಬರುವುದೇ ಒಂಭತ್ತನೇಯ ದಿನವಾದ ಮಹಾನವಮಿ. ಅಂದು ಗುರುವಾರ 14  ರಂದು ಬೆಳಗ್ಗೆ ‘ ಚಂಡಿಕಾಯಾಗ’ ವು ದೇವಳದಲ್ಲಿ ನಡೆಯಲಿದ್ದು, ರಾತ್ರಿ ದೇವಿಗೆ ‘ ದೊಡ್ಡರಂಗಪೂಜೆ’ (ಮಹಾರಂಗಪೂಜೆ) ಹಾಗು ಹೊರ ಪ್ರಾಕಾರದಲ್ಲಿ ‘ ಸಣ್ಣ ಭಂಡಿ ಉತ್ಸವ’ವೂ ನಡೆಯಲಿರುವುದು.

ತದನಂತರ ಮಾರನೇಯದಿನ ಬರುವ ನವರಾತ್ರಿಯ ಬಹುದೊಡ್ಡ ಸಂಭ್ರಮದ ದಿನ ‘ ವಿಜಯದಶಮಿ’. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ವಿಜಯ ದಶಮಿಯ ವೈಶಿಷ್ಟ್ಯ. ಅಂದು ಶುಕ್ರವಾರ 15 ರಂದು ಮಂಗಳಮ್ಮನಿಗೆ ಮಹಾ ರಥೋತ್ಸವ. ಈ ದಿನದ ಮಗದೊಂದು ವಿಶೇಷವೇನೆಂದರೆ ಮಂಗಳಾದೇವಿ ಸುಗ್ರಾಮದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ‘ಹೊಸ ಅಕ್ಕಿ ಊಟ’ ಅಥವ ‘ನವ ಭೋಜನ’. ಸವಿಯೂಟ ಸವಿದು ಸಂತೋಷಿಸುವುದು ವಾಡಿಕೆ ಅಂದು ಪ್ರಾತಃಕಾಲ ನಾಗನ ಕಟ್ಟೆಯಲ್ಲಿ ಧಾನ್ಯ ಲಕ್ಷ್ಮೀ ಪೂಜೆಯನ್ನುಮಾಡಿ ಕೊರಳು(ಹಸಿರು ಅಕ್ಕಿಯ ತೆನೆ/ಪೈರು)ತರುವ ಉತ್ಸವವಿದ್ದು, ಅದನ್ನು ಪಲ್ಲಕ್ಕಿಯಲ್ಲಿಟ್ಟು ಪೂಜಿಸಿ ,ಆ ಬಳಿಕ ಕೊರಳುಗಳನ್ನು ದೇವಿಯ ಚರಣಾರವಿಂದದಲ್ಲಿಟ್ಟು ಪೂಜೆಗೊಳಿಸಿದ ತರುವಾಯ ಭಕ್ತರೆಲ್ಲರೂ ಅವುಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಮನೆ ತುಂಬಿಸುವ ರೂಢಿ ಇಂದಿಗೂ ನಡೆದುಕೊಂಡು ಬಂದಿದ್ದು ವರ್ಷಪೂರ್ತಿ ಸಮೃದ್ಧಿಗಾಗಿ ಮಹಾತಾಯಿಯನ್ನು ಪ್ರಾರ್ಥಿಸುತ್ತಾರೆ.

ಅಲ್ಲದೆ ಇದೇ ದಿನದಂದು ದೇವಳದಲ್ಲಿ ‘ ವಿದ್ಯಾರಂಭವೂ’ ನಡೆಯಲಿದೆ. ಮಂಗಳೆ ಜ್ಞಾನದಾಯಿಕೆ..ಈಕೆಯ ಸನ್ನಿಧಾನದಲ್ಲಿ ವಿದ್ಯಾರಂಭವನ್ನು ನಡೆಸುವುದರಿಂದ ಜ್ಞಾನಾಪೇಕ್ಷೆಯ ಮಕ್ಕಳಿಗೆ ವಿದ್ಯೆಯು ಬಹುಬೇಗ ಕರತಲಾಮಲಕವಾಗಿ ಸರ್ವವಿದ್ಯಾಪಾರಂಗತರಾಗಿ ಶ್ರೇಯಸ್ಸು ಪ್ರಾಪ್ತವಾಗುವುದೆಂಬ ಉದ್ದೇಶದಿಂದ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಅಲ್ಲದೆ ಅಂದು ತುಲಾಭಾರ ಸೇವೆಯೂ ನಡೆಯಲಿದೆ. ಸನ್ನಿಧಿಯಲ್ಲಿ ವರ್ಷಂಪ್ರತಿ ಭಕ್ತರು ಕಾರ್ಯಸಿದ್ಧಿಗಾಗಿ ಶರೀರ ಗೇಣಿಯನ್ನು ತುಲಾಭಾರದ ಮೂಲಕ ಅರ್ಪಿಸುತ್ತಾರೆ.

ನಂತರ ಅಪರಾಹ್ನ ಮಹಾಪೂಜೆಯ ಬಳಿಕ ಬಲಿಹೊರಟು,ರಥದ ಶುದ್ಧೀಕರಣವಾಗಿ, ಅಷ್ಟ ದಿಕ್ಪಾಲಕರಿಗೆ ‘ಚರು’ಸಹಿತ ಬಲಿ ಸಮರ್ಪಣೆಯಾಗಿ ಮುಗಿಲು ಮುಟ್ಟುವ ಜಯಘೋಷದೊಡನೆ ದೇವಿಗೆ ಅಕ್ಷತೆ, ಅರಳನ್ನು ಭಕ್ತಿಯಿಂದೆಸೆದು ರಥ ಬಲಿಯೊಂದಿಗೆ ದೇವಿಯ ರಥಾರೋಹಣವಾಗುವುದು. ಬಳಿಕ ರಥಾ ರೂಢಳಾದ ದೇವಿಗೆ ಆರತಿಯು ನಡೆದು ರಥ ಪ್ರಸಾದ ರೂಪದಲ್ಲಿ ನಾಣ್ಯವೃಷ್ಟಿ, ಫಲವೃಷ್ಟಿ ಯಾಗುವುದು.

Mangaladevi Nvaratri

Mangaladevi Nvaratri ರಾತ್ರೆ ರಥೋತ್ಸವವು ನಡೆಯಲಿದ್ದು ರಥಾ ರೂಢಳಾಗುವ ನಲ್ಮೆಯ ತಾಯಿಯನ್ನು ಭಕ್ತಿಭಾವದಲ್ಲಿ ಕಂಡು ಶರಣೆನುವ ಆ ಸಂದರ್ಭವು ಮಾತಿಗೆ ನಿಲುಕದು..ರಾಜ ಗಾಂಭೀರ್ಯದಲ್ಲಿ ರಥಾರೂಢಳಾಗಿ ಸಾಗುವ ದೇವಿಯ ರಥ ಸವಾರಿಯ, ದಾರಿಯುದ್ದಕ್ಕೂ ರಾಜಬೀದಿಯು ಝಗಮಗಿಸುವ ವಿದ್ಯುದ್ದೀಪಗಳಿಂದ ನಳನಳಿಸುತ್ತಿರುತ್ತದೆ. ಲಕ್ಷಾಂತರಮಂದಿ ಸದ್ಭಕ್ತರು ತೇರನ್ನೆಳೆದು ಮಾತೆಯ ಭಕ್ತಿಯಲಿ ಮಿಂದೆದ್ದು ಧನ್ಯರಾಗುತ್ತಾರೆ.

ಇದೇ ಸಂದರ್ಭದಲ್ಲಿ ದೇವಳಕ್ಕೆ ಸಂಬಂಧಪಟ್ಟಿರುವ ದೇವಿಯ ‘ಶಮೀಕಟ್ಟೆಯಲ್ಲಿ’ ಶಮೀವೃಕ್ಷದ ಪೂಜೆಯೂ ನಡೆಯುತ್ತದೆ. ಕನ್ನಡದಲ್ಲಿ ‘ಬನ್ನಿಮರ’ಯೆಂದು ಕರೆಯಲ್ಪಡುವ ಶಮೀವೃಕ್ಷವು ನಿತ್ಯಹರಿದ್ವರ್ಣ ವೃಕ್ಷ. ಇದರ ಎಲೆಗಳು ದ್ವಿಮುಖ ಸಂಯೋಜನೆ ಹೊಂದಿದ್ದು, ಅತ್ತ ದೊಡ್ಡದಾಗಿಯು ಬೆಳೆಯದ-ಇತ್ತ ಕುಬ್ಜವಾಗಿಯೂ ಇರದ ಶಮೀವೃಕ್ಷವು ಎಷ್ಟೇ ವರ್ಷಗಳು ಸಂದರೂ ಒಂದೇ ರೀತಿಯಲ್ಲಿ ಕಂಡುಬರುವುದು ಇದರ ವಿಶೇಷ. ಪುರಾಣದಲ್ಲಿ ವಿಜಯದಶಮಿಯಂದು ಶಮೀವೃಕ್ಷದ ಪೂಜೆಯು ಉಲ್ಲೇಖವಿರುವುದು ಒಂದು ಕಾರಣವಾದರೆ, ಪ್ರಚಲಿತವಿರುವ ಮತ್ತೊಂದು ನಂಬಿಕೆಯ ಪ್ರಕಾರ ಇತಿಹಾಸದಲ್ಲಿ ಪ್ರಮೀಳೆ/ ಪ್ರೇಮಲಾದೇವಿ ಎಂಬ ನಾಮಾಂಕಿತಳಾಗಿದ್ದ ದೇವಿಯು ಒಂದೊಮ್ಮೆ ಈ ಮರದ ನೆರಳಿನಲ್ಲಿ ಆಸಿನಳಾಗಿದ್ದಳೆಂಬ ನಂಬಿಕೆ. ಇದಕ್ಕೆ ಪೂರಕವೆಂಬಂತೆ ಇಂದಿಗೂ ಶಮೀ ವೃಕ್ಷದ ಬುಡದ ಶಮೀ ಪೀಠದಲ್ಲಿ ವರ್ಷಕ್ಕೆ ಮೂರು ಬಾರಿಯಂತೆ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ದಿಂಢಿನ ದಿನ ದೇವಿಯ ಉತ್ಸವ ಮೂರ್ತಿಯನ್ನ ಶಮೀ ಪೀಠದಲ್ಲಿಟ್ಟು ಪೂಜಿಸಲಾಗುತ್ತದೆ. ಹೀಗೆ ವಾರ್ಷಿಕ ಜಾತ್ರಾ ಮಹೋತ್ಸವದ, ಹರಕೆಯ ರಥೋತ್ಸವದ(ಇದ್ದಲ್ಲಿ ಮಾತ್ರ) , ದಿಂಢಿನ ಲಕ್ಷದೀಪೋತ್ಸವದ ಹಾಗೂ ವಿಜಯದಶಮಿಯ ಸಂದರ್ಭಗಳಲ್ಲಿ ಶಮೀಪೂಜೆ ನಡೆಯುತ್ತದೆ.

ಶ್ರೀ ಸೂಕ್ತಮ್’ನ ಪಠಣದೊಂದಿಗೆ ಪ್ರಾರ್ಥಿಸಿ ಬನ್ನಿಮರಕ್ಕೆ ಪೂಜೆಯನ್ನು ಸಲ್ಲಿಸಿ,ವೃಕ್ಷದೆಲೆಗಳನ್ನು ಕಿತ್ತು ತಾಯಿಯ ಕುಂಕುಮ ಪ್ರಸಾದದೊಡನೆ ಪರಸ್ಪರ ವಿನಿಯೋಗ ಮಾಡಿ, ಶಮೀಎಲೆಗಳನ್ನು ಸರ್ವರಿಗೂ ನೀಡಲಾಗುತ್ತದೆ. ದೊರೆತ ಈ ಪ್ರಸಾದರೂಪಿ ಎಲೆಗಳನ್ನು ತಿಜೋರಿಯಲ್ಲಿಟ್ಟಲ್ಲಿ, ವ್ಯವಹಾರಗಳಲ್ಲಿ ಬಳಸಿದ್ದಲ್ಲಿ ಸರ್ವಸಂಪದಗಳೂ ವೃದ್ಧಿಸುವುದೆಂಬ ನಂಬಿಕೆ. ಮುಂದೆ ರಥ ಸವಾರಿಯು ನೆರವೇರಿ ರಾಜಾಂಗಣದುದ್ದಕ್ಕೂ ಕರ್ಪೂರವನ್ನು ಬೆಳಗಿಸಿ ಸರ್ವ ಮಂಗಳವಾದ್ಯಾದಿ ಗಳೊಡನೆ ದೇವಿಯನ್ನು ಆದರದಿ ಪಲ್ಲಕ್ಕಿಯಲ್ಲಿ ಬರಮಾಡಿ ಕೊಳ್ಳಲಾಗುತ್ತದೆ. ಬಲಿ ಉತ್ಸವವು ನಡೆದ ಬಳಿಕ ಮಹಾಪೂಜೆಯೊಂದಿಗೆ ದಶಮಿಯ ದಿನವೂ ಸಂಪನ್ನವಾಗುತ್ತದೆ.

ಮರುದಿನ ಏಕಾದಶಿಯಂದು ಮಂಗಳಾಂಭೆಗೆ ಅವಭೃತೋತ್ಸವದ ಸಂಭ್ರಮ. ನವರಾತ್ರಿಯ ಅಂತಿಮದಿನದ ಅವಿಸ್ಮರಣೇಯ ದಿನವೆಂದೇ ಹೇಳಬಹುದು. ನಮ್ಮ ಆಡುಮಾತಿನಲ್ಲಿ ‘ಜಳಕ’ಎಂದೇ ಕರೆಯಲ್ಪಡುವ ಶ್ರೀ ದೇವಿಯ ಅವಭೃತ ಮಂಗಳ ಸ್ನಾನವು ನಡೆಯುವುದು ‘ನೇತ್ರಾವತಿ ಹಾಗೂ ಫಲ್ಗುಣೀ’ ನದಿಗಳೆರಡರ ಸಂಗಮ ತೀರದಲ್ಲಿ. ಅಂದಿನ ಶನಿವಾರ (೧೬.೧೦.೨೧ ) ರಾತ್ರಿ ಬಲಿ ಹೊರಟು, ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ, ಅವಭೃತದ ಪೂರ್ವಭಾವಿಯಾಗಿ ಓಕುಳಿಯಂತೆ ಹಿಂಗಾರದ ಮೂಲಕ ತುಸು ಕುಂಕುಮದ ನೀರಿನ ಹನಿಗಳ ಸಂಪ್ರೋಕ್ಷಣೆ ಯಾಗುತ್ತದೆ. ಶೃಂಗಾರಗೊಂಡ ವಸಂತ ಮಂಟಪದಲ್ಲಿ ಅವಭೃತಕ್ಕೆ ಹೊರಟ ದೇವಿ ಮಂಗಳಾಪುರದ ಮಹಾರಾಣೆಯಂತೆ ಕಂಡುಬರುವಳು.

ದೇವ ದೇವೋತ್ತಮೆ ದೇವತಾ ಸಾರ್ವಭೌಮೆ ಅಖಿಲಾಂಡ ಕೋಟಿ ಬೃಹ್ಮಾಂಡ ನಾಯಕೆ ಜಯ ಮಂಗಳೇ

ಎಂದು ಸರ್ವಮಂಗಳೆಗೆ ರಾಣಿಯಂತೆ ವೈಭವೀಕರಿಸಿ ಹೊಗಳುತ್ತಾ “ಋಗ್ವೇದಾದಿ ಚತುರ್ವೇದಗಳು, ವೇದಸೂಕ್ತ ಶಾಂತಿಮಂತ್ರಗಳು, ಪುರಾಣಾದಿಗಳು, ಅಷ್ಟಕಗಳು, ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯದ ವರ್ಣಮಾಲೆಗಳು, ಪಾಂಚಜನ್ಯ(ಶಂಕಾನಾದ), ಸಂಗೀತ, ಸರ್ವ ವಾದ್ಯಗಳ ಮಂಗಳ ವಾದನಾದಿ ಗಳೆಂಬ ಅಷ್ಟಾವಧಾನ ಸೇವೆಯನ್ನು ದೇವಿಗೆ ಅರ್ಪಿಸಿ , ಉತ್ಸವ ಮೂರ್ತಿಯನ್ನು ಸಣ್ಣ ಭಂಡಿಯಲ್ಲಿರಿಸಿ ನೇತ್ರಾವತಿ-ಫಲ್ಗುಣೀ ನದಿಗಳ ಸಂಗಮ ತೀರಕ್ಕೆ ವೈಭವದಿಂದ ಎಳೆದೊಯ್ಯಲಾಗುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English