ಹಂಪನಕಟ್ಟೆ ಯಲ್ಲಿ ಸಿದ್ಧಗೊಳ್ಳಲಿದೆ 95 ಕೋಟಿ ರೂ. ವೆಚ್ಚದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌

5:28 PM, Thursday, October 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

old Bus standಮಂಗಳೂರು: ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದ 1.55 ಎಕರೆ ಪ್ರದೇಶದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸುಮಾರು 95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (ಎಂಎಲ್‌ಸಿಪಿ) ಕಮ್‌ ರಿಟೈಲ್‌ ಮಳಿಗೆಗಳಿಗೆ ನ.2ರಂದು ಚಾಲನೆ ಸಿಗಲಿದೆ.

ದಶಕದ ಹಿಂದೆ ರೂಪಿಸಿದ್ದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (ಎಂಎಲ್‌ಸಿಪಿ) ಕಮ್‌ ರಿಟೈಲ್‌ ಸ್ಪೇಸ್‌ ‘ಸರಕಾರದ ಮೇಲೆ ಯಾವುದೇ ಒತ್ತಡ ಹಾಕದೇ ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಎಂಎಲ್‌ಸಿಪಿ ಯೋಜನೆ ರೂಪಿಸಲು ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದ ಪ್ರಕಾರ 36 ತಿಂಗಳಲ್ಲಿ ಯೋಜನೆ ಸಿದ್ಧಗೊಳ್ಳಲಿದೆ’

ಹಂಪನಕಟ್ಟೆಯ ಜನನಿಬಿಡ ಪ್ರದೇಶದ ಸಂಚಾರ, ಪಾರ್ಕಿಂಗ್‌ ಸಮಸ್ಯೆ ನಿವಾರಿಸಲು, ಮಂಗಳೂರು ಸ್ಮಾರ್ಟ್‌ ಸಿಟಿ ಲಿ.(ಎಂಎಸ್‌ಸಿಎಲ್‌) ಮೂಲಕ ಎಂಎಲ್‌ಸಿಪಿ ಕಟ್ಟಡ ನಿರ್ಮಾಣಕ್ಕೆ ಬಹುತೇಕ ಎಲ್ಲ ಪ್ರಕ್ರಿಯೆಗಳು ಮುಗಿದಿವೆ.

ವಿನ್ಯಾಸ, ನಿರ್ಮಾಣ- ಹಣಕಾಸು- ನಿರ್ವಹಣೆ ಮತ್ತು ಹಸ್ತಾಂತರ (ಡಿಬಿಎಫ್‌ಒಟಿ) ಮಾದರಿಯಲ್ಲಿ ಯೋಜನೆ ಸಿದ್ಧಗೊಳ್ಳಲಿದೆ. ಹೂಡಿಕೆದಾರರೇ ವಿನ್ಯಾಸ, ಹಣಕಾಸು, ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸಲಿದ್ದಾರೆ.

ಯೋಜನೆ ಸಿದ್ಧಗೊಂಡ ಬಳಿಕ ಮುಂದಿನ 30 ವರ್ಷಗಳ ನಿರ್ಮಾಣ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಕೆ.ಎಸ್‌. ರಾವ್‌ ರೋಡ್‌ ಮತ್ತು ಲೈಟ್‌ ಹೌಸ್‌ ಹಿಲ್‌ ರಸ್ತೆ ಸಂಪರ್ಕದ 1.69 ಲಕ್ಷ ಚದರ ಅಡಿಯ ಕಟ್ಟಡದ ಮೂರು ಅಂತಸ್ತಿನಲ್ಲಿ 430 ವಾಹನ ಪಾರ್ಕ್ ಮಾಡಬಹುದು. ಜತೆಗೆ ಆಧುನಿಕ ಸೌಲಭ್ಯಗಳ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಈಗಿರುವ ಹೊರಗಿನ ಅಥವಾ ಒಳ ಭಾಗದ ಕಟ್ಟಡಗಳನ್ನು ಮುಟ್ಟುವುದಿಲ್ಲ. ಅವರ ವ್ಯಾಪಾರಕ್ಕೆ ಸಮಸ್ಯೆಯಾಗದಂತೆ ಕಟ್ಟಡ ನಿರ್ಮಾಣವಾಗಲಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 2014ರಲ್ಲಿ ಯೋಜನೆ ರೂಪುರೇಷ ಸಿದ್ಧಪಡಿಸಿತ್ತು. ಮುಂದೆ ಮಹಾನಗರ ಪಾಲಿಕೆಯು ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲು ನಿರ್ಣಯ ಕೈಗೊಂಡಿತ್ತು. ಮಂಗಳೂರು ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದ ಬಳಿಕ ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಮೂಲಕ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ಅನುಷ್ಠಾನಕ್ಕೆ ತರಲಾಗುತ್ತಿದೆ.

ಹಂಪನಕಟ್ಟೆಯ ಹಳೆಯ ಬಸ್‌ ನಿಲ್ದಾಣವನ್ನು ಮದರಾಸು ಸರಕಾರದಲ್ಲಿ ಭಕ್ತವತ್ಸಲಂ ಸಿಎಂ ಆಗಿದ್ದಾಗ ನಿರ್ಮಿಸಲಾಗಿತ್ತು. 1996ರಲ್ಲಿ ನಿಲ್ದಾಣ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಎಂಬ ಕಾರಣ ನೀಡಿ ನೆಲಸಮ ಮಾಡಲಾಗಿತ್ತು.

ಆಗಿನ ಸಂಸದ ಧನಂಜಯ ಕುಮಾರ್‌, ಶಾಸಕರ ನಿಧಿ ಮತ್ತಿತರ ಹಣ ಸೇರಿಸಿ ಸುಸಜ್ಜಿತ ನಿಲ್ದಾಣ ನಿರ್ಮಿಸುವುದಾಗಿ ತಿಳಿಸಲಾಗಿತ್ತು. ಆಗಿನ ಉಸ್ತುವಾರಿ ಸಚಿವ ಕೆ.ಜಯಪ್ರಕಾಶ್‌ ಹೆಗ್ಡೆ, ಶಾಸಕ ಎನ್‌.ಯೋಗೀಶ್‌ ಭಟ್‌, ಮನಪಾ ಆಯುಕ್ತ ಎ.ಬಿ.ಇಬ್ರಾಹಿಂ ಹಾಗೂ ವ್ಯಾಪಾರಿಗಳ ಮಧ್ಯೆ ಹಲವು ಸುತ್ತಿನ ಚರ್ಚೆ ನಡೆದರೂ, ಮುಂದೆ ಯಾವುದೇ ಪ್ರಗತಿಯಾಗಿರಲಿಲ್ಲ.

ಮುಡಾ ಆಯುಕ್ತರಾಗಿದ್ದ ಕೃಷ್ಣಪ್ಪ ಪೂಜಾರಿ ಹಳೆಯ ನಿಲ್ದಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಬಹುಮಹಡಿಗಳ ವಾಣಿಜ್ಯ ಸಂಕೀರ್ಣ ಮತ್ತು ಕೆಳಗಡೆ ಪಾರ್ಕಿಂಗ್‌ ಸ್ಥಳ ನಿರ್ಮಿಸುವ ಕರಡು ಯೋಜನೆ ಸಿದ್ಧಪಡಿಸಿದ್ದರೂ, ನನೆಗುದಿಗೆ ಬಿದ್ದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English