ಮಂಗಳೂರು : ಸರಕಾರದ ಮಾರ್ಗಸೂಚಿಯಂತೆ ಚರ್ಚ್‌ಗಳಲ್ಲಿ ಸರಳವಾಗಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಕ್ರೈಸ್ತ ಧರ್ಮೀಯರು ಆಚರಿಸಿದರು. ಮಂಗಳೂರು ನಗರದ ಚರ್ಚ್‌ಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ಹಬ್ಬದ ಸಂಭ್ರಮದಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸಿದೆ. ಚರ್ಚ್ ಆವರಣ, ಕ್ರೈಸ್ತರ ಮನೆಗಳು, ಪ್ರಮುಖ ಉದ್ಯಮ, ಅಂಗಡಿ, ಹೋಟೆಲ್‌ಗಳ ಎದುರು ಆಕರ್ಷಕ ಕ್ರಿಬ್ (ಗೋದಲಿ)ಗಳು, ಕ್ರಿಸ್ಮಸ್ ಟ್ರೀ ಮತ್ತು ಅಲಂಕೃತ ನಕ್ಷತ್ರ ಗಮನ ಸೆಳೆಯುತ್ತಿತ್ತು.
ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ದಿವ್ಯಬಲಿ ಪೂಜೆ ನಡೆಯಿತು. ಚರ್ಚ್‌ಗಳ ವಠಾರದಲ್ಲಿ ಸುಂದರ ಗೋದಲಿಗಳನ್ನು ರಚಿಸಿ, ಏಸುಕ್ರಿಸ್ತರ ಜನನವನ್ನು ಸಂಕೇತಿಸುವ ದೃಶ್ಯಗಳ ಕಂಡುಬಂತು. ಗೋದಲಿಗಳ ಮುಂದೆ ಮಕ್ಕಳು ಸೆಲ್ಫೀ ತೆಗೆಯುವ ದೃಶ್ಯಗಳು ಕಂಡು ಬಂದಿವೆ. ಕ್ರಿಸ್ಮಸ್ ತಾತಾ ‘ಸಾಂತಾಕ್ಲಾಸ್’ ನಿಂದ ಚಾಕಲೇಟ್ ಪಡೆದು ಮಕ್ಕಳು ಸಂಭ್ರಮಿಸಿದರು.
ಪ್ರತಿ ವರ್ಷವೂ ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಧರ್ಮಪ್ರಾಂತ್ಯದ ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅದರಂತೆ ಅವರು ನೆಲ್ಲಿಕಾರಿನಲ್ಲಿರುವ ಚರ್ಚ್‌ನ ಕ್ರಿಸ್ಮಸ್ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಮತ್ತಿತರ ಕಾರಣಗಳಿಂದ ಜನರು ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ಏಸು ಕ್ರಿಸ್ತರ ಪ್ರೀತಿ ಮತ್ತು ಸೇವೆಯ ಸಂದೇಶ ಹೆಚ್ಚು ಪ್ರಸ್ತುತವಾಗಬೇಕು. ಏಸು ಕ್ರಿಸ್ತರ ಸಂದೇಶ ಇಡೀ ಜಗತ್ತಿಗೆ ಬೆಳಕು ತೋರಿಸಿದೆ ಎಂದರು. ಡಿ.25ರಂದು ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬೆಳಗ್ಗೆ 8.15ಕ್ಕೆ ನಡೆಯುವ ಪೂಜೆಯಲ್ಲಿ ಬಿಷಪ್ ಭಾಗವಹಿಸಿದರು.
Click this button or press Ctrl+G to toggle between Kannada and English