ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಸೌಂದರ್ಯರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಕುಟುಂಬಸ್ಥರು ಮತ್ತು ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ ಎಂಬ ವಿಚಾರ ತಿಳಿದುಬಂದಿದೆ.
ಬಿಎಸ್ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವೈದ್ಯೆಯಾಗಿದ್ದರು. 3 ವರ್ಷದ ಹಿಂದಷ್ಟೇ ಅಂದ್ರೆ 2018ರಲ್ಲಿ ಅಬ್ಬಿಗೆರೆಯ ಪದ್ಮ ಮತ್ತು ಶಿವಕುಮಾರ್ ದಂಪತಿ ಪುತ್ರ ಡಾ.ನೀರಜ್ ಎಂಬುವರ ಜತೆ ಸೌಂದರ್ಯ ಮದ್ವೆ ಅದ್ದೂರಿಯಾಗಿ ನೆರವೇರಿತ್ತು. ಡಾ.ನೀರಜ್ 7 ವರ್ಷದಿಂದ ರೇಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಒಂದು ವರ್ಷದ ಮುದ್ದಾದ ಮಗು ಕೂಡ ಇದೆ. ದಂಪತಿ ಇಬ್ಬರೂ ಕ್ರೆಸೆಂಟ್ ರಸ್ತೆಯ ಅಪಾರ್ಟ್‌ಮೆಂಟ್ನಲ್ಲಿ ನೆಲೆಸಿದ್ದರು. ದಂಪತಿ ಇಬ್ಬರೂ ಅನ್ಯೂನ್ಯವಾಗಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪತಿ ಡಾ.ನೀರಜ್ ಕೆಲಸಕ್ಕೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಹೋಗಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಕೆಲಸದವರು ಮನೆಗೆ ಬಂದರೂ ಸೌಂದರ್ಯ ಬಾಗಿಲು ತೆರೆದಿರಲಿಲ್ಲ. ಆಗ ಡಾ.ನೀರಜ್ ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಬಳಿಕ ಪತಿ ಬಂದು ಬಾಗಿಲು ಹೊಡೆದು ನೋಡಿದಾಗ ಸೌಂದರ್ಯ ರೂಮಿನ ಫ್ಯಾನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದರು. ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು.
ವೆಂಟಿಲೇಟರ್ ಅಳವಡಿಸಿ ಸೌಂದರ್ಯ ಅವರನ್ನ ಬದುಕಿಸಲು ಮಲ್ಲಿಗೆ ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಿಎಸ್ವೈ ಕುಟುಂಬಸ್ಥರು ಮತ್ತು ಡಾ.ನೀರಜ್ ಕುಟುಂಬಸ್ಥರು ಆಸ್ಪತ್ರೆ ಬಳಿ ದೌಡಾಯಿಸಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಡಾ.ಸೌಂದರ್ಯರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೌರಿಂಗ್ ಆಸ್ಪತ್ರೆಗೆ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಹಲವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಡಾ.ನೀರಜ್ ನಿವಾಸಕ್ಕೆ ಮೃತದೇಹ ತೆಗೆದುಕೊಂಡು ಬರುವ ಹಿನ್ನೆಲೆ ಮನೆ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೌಟುಂಬಿಕ ಕಲಹ ಸೌಂದರ್ಯ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
Click this button or press Ctrl+G to toggle between Kannada and English