ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದರೆ, ಅವರು ತಂದೆತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ: ಬಸವರಾಜ ಹೊರಟ್ಟಿ

8:51 PM, Thursday, September 28th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಹುಬ್ಬಳ್ಳಿ: ಜನರ ಮನಸ್ಸಿನಲ್ಲಿ ಸ್ವಾರ್ಥ ಹೆಚ್ಚುತ್ತಿದ್ದು, ಸಾಮಾಜಿಕ ಕಳಕಳಿ ಕುಸಿಯುತ್ತಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕೆಂಬ ಮನಸ್ಸುಗಳು ಹೆಚ್ಚಬೇಕಾಗಿದೆ ಎಂದು ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀನಿವಾಸ ಗಾರ್ಡನ್ನಲ್ಲಿ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಸಾಮಾನ್ಯರ ಅಸಾಮಾನ್ಯ ಅವ್ವ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಕುಸಿಯುತ್ತಿರುವ ಇಂದಿನ ದಿನದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ತಾಯಿ ಹೆಸರಿನ ಟ್ರಸ್ಟ್ ಅಡಿಯಲ್ಲಿ ಇಂತಹ ಹಲವು ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಾನು ಜನ್ಮ ಕಳೆದುಕೊಂಡರೂ ಮಗುವಿಗೆ ಜನ್ಮ ನೀಡುವ ತ್ಯಾಗಮಯಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ. ಏನೇ ಮಾಡಿದರೂ ತಾಯಿ ಋಣ ತೀರಿಸುವುದು ಸಾಧ್ಯವಿಲ್ಲ. ತಾಯಿ ಮಡಿಲು ದೊಡ್ಡ ನ್ಯಾಯಾಲಯ ಇದ್ದಂತೆ ಎಂದು ನುಡಿದರು.

ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಕರೆತರಬೇಕು ಅವರಿಗೆ ತಾಯಿ ಮಹತ್ವ ಏನೆಂಬುದು ಅರಿವಿಗೆ ಬರುತ್ತದೆ. ಮಕ್ಕಳನ್ನು ವಸತಿ ಶಾಲೆಗೆ ಹಾಕಿದರೆ ತಂದೆ-ತಾಯಿಯ ಕಷ್ಟ ಅವರಿಗೆ ತಿಳಿಯದಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದಿದ್ದರೆ ಮುಂದೆ ಅವರೇ ನಿಮ್ಮನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಾರೆ ಎಂಬುದನ್ನು ಮರೆಯುವುದು ಬೇಡ. ನನ್ನ ತಾಯಿ ಹಾಲು-ಮೊಸರು ಮಾರಾಟ ಮಾಡಿ ನನ್ನ ಕಾಲೇಜು ಕಲಿಕೆಗೆ ಹಣ ನೀಡುತ್ತಿದ್ದರು ಎಂದು ತಮ್ಮ ತಾಯಿ ಮಮತೆಯನ್ನು ಸ್ಮರಿಸಿಕೊಂಡರು.

ಎಸ್.ಆರ್.ಬೊಮ್ಮಾಯಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಕೋರ್ಟ್ ತೀರ್ಪುವೊಂದರಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರು ದೂರದೃಷ್ಟಿಯ ನಾಯಕರು ಆಗಿದ್ದರು. ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ತಮ್ಮ ತಾಯಿ ಹೆಸರಲ್ಲಿ ಟ್ರಸ್ಟ್ ಮಾಡಿ ಪುಸ್ತಕಗಳನ್ನು ಹೊರತರುವುದು ಸೇರಿದಂತೆ ಹಲವು ಯೋಜನೆ ಹಮ್ಮಿಕೊಂಡಿದ್ದಾರೆ. ನಾನು ಸಹ ನನ್ನ ತಾಯಿ ಸ್ಮರಣೆಗೆ ಅವ್ವ ಸೇವಾ ಟ್ರಸ್ಟ್ ಮಾಡಿದ್ದೇನೆ ಆದರೆ, ಪುಸ್ತಕಗಳನ್ನು ಹೊರತಂದಿಲ್ಲ. ಇಲ್ಲಿನ ಪ್ರೇರಣೆಯಿಂದ ತಾಯಿ ಕುರಿತಾಗಿ ಅವ್ವ ಸೇವಾ ಟ್ರಸ್ಟ್ ನಿಂದ ಪುಸ್ತಕಗಳನ್ನು ಹೊರತರುವುದಾಗಿ ಹೇಳಿದರು.

ತಾಯಿ ಸಂಬಂಧ ದೇವರಿಗಿಂತ ಮಿಗಿಲು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವಿಕವಾಗಿ ಮಾತನಾಡಿ, ಇದೊಂದು ಭಾವನಾತ್ಮಕ ಸಮಾರಂಭವಾಗಿದೆ. ವ್ಯಕ್ತಿ ಜನ್ಮಪೂರ್ವದ ಸಂಬಂಧವನ್ನು ತಾಯಿಯಿಂದ ಹೊಂದಲು ಮಾತ್ರ ಸಾಧ್ಯ. ತಾಯಿ ಸಂಬಂಧ ದೇವರಿಗಿಂತಲೂ ಮಿಗಿಲಾಗಿದೆ. ತಾಯಿ ಅಂತಃಕರಣಕ್ಕೆ ಬೆಲೆ ಕಟ್ಟಲಾಗುದು ತಾಯಿತನ ನಿರಂತರ ಹಾಗೂ ಶಾಶ್ವತದ್ದಾಗಿದೆ. ನನ್ನ ತಾಯಿ ಗಂಗಮ್ಮ ಅವರು ಆಧ್ಯಾತ್ಮಿಕವಾಗಿ ಆಳವಾದ ಚಿಂತನೆ ಹೊಂದಿದವರಾಗಿದ್ದರಲ್ಲದೆ, ಅವರೊಬ್ಬ ದೊಡ್ಡ ದೇಶಭಕ್ತೆಯಾಗಿದ್ದರು.

ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಇದುವರೆಗೆ ತಾಯಿ ಕುರಿತಾಗಿ ಸುಮಾರು ಏಳು ಆವೃತ್ತಿಗಳಲ್ಲಿ ಪುಸ್ತಕಗಳನ್ನು ಹೊರತಂದಿದ್ದು, ಇನ್ನು ಮೂರು ಆವೃತ್ತಿ ಸೇರಿದಂತೆ ಒಟ್ಟು 10 ಆವೃತ್ತಿಗಳನ್ನು ಹೊರತಲಿದ್ದು, ಇವುಗಳನ್ನು ವಿಶ್ವವಿದ್ಯಾಲಯಗಳಿಗೆ ನೀಡಲಾಗುವುದು ಇದರಿಂದ ಸುಮಾರು 2-4 ಪಿಎಚ್ಡಿಗಳನ್ನು ಮಾಡಬಹುದಾಗಿದೆ ಎಂದರು.

ಟ್ರಸ್ಟ್ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲಿದ್ದು, ಬರುವ ದಿನಗಳಲ್ಲಿ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಆರಂಭಿಒಸುವ ಚಿಂತನೆ ಹೊಂದಿದೆ ಎಂದರು.
ಭರತ ಬೊಮ್ಮಾಯಿ ಸ್ವಾಗತಿಸಿ ಮಾತನಾಡಿ, ನನ್ನ ಅಜ್ಜಿ ಗೆಲುವಿನ ಕಡೆ ಹೋಗುವ ಬದಲು ಜ್ಞಾನದ ಕಡೆ ಹೋಗು ಎಂದು ಹೇಳುತ್ತಿದ್ದರು. ಅವರ ಸರಳತೆ, ಚಿಂತನೆಗಳು ನಮ್ಮ ಇಡೀ ಕುಟುಂಬದ ಮೇಲೆ ಪರಿಣಾಮ ಬೀರಿದ್ದು, ಅವುಗಳ ಪಾಲನೆ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ನಿಂದ ಶಿಗ್ಗಾಂವಿ ನಮ್ಮ ಮನೆಯನ್ನೇ ಕೋವಿಡ್ ಆರೈಕೆ ಕೇಂದ್ರವಾಗಿಸಿ ಅಗತ್ಯ ನೆರವು ನೀಡಲಾಗಿತ್ತು. ಕಿಮ್ಸ್ ಕ್ಯಾನ್ಸರ್ ವಿಭಾಗಕ್ಕೆ 25 ಲಕ್ಷ ರೂ. ನೀಡಲಾಗಿದೆ. ವಿದ್ಯಾರ್ಥಿ ವೇತನ, ಪುಸ್ತಕಗಳ ನೀಡಿಕೆ ಕಾರ್ಯ ಮಾಡಲಾಗುತ್ತಿದ್ದು, ಟ್ರಸ್ಟ್ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಎಂದರು.

ಪ್ರಾಂಶುಪಾಲ ರಮೇಶ ಕಲ್ಲನಗೌಡರ ಗ್ರಂಥ ಕುರಿತಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೇಮಾ ಪಟ್ಟಣಶೆಟ್ಟಿ ಅವರಿಗೆ ಅಕ್ಕ ಪ್ರಶಸ್ತಿ, ನೇಹಾ ರಾಮಾಪುರ ಅವರಿಗೆ ಅರಳು ಮೊಗ್ಗು ಪ್ರಶಸ್ತಿ, ದೊರೆಸ್ವಾಮಿ ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ವಿಧಾನಪರಿಷತ್ತು ಸದಸ್ಯ ಎಸ್.ವಿ.ಸಂಕನೂರು ಟ್ರಸ್ಟ್ನ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮಾಯಿ, ಚಂದ್ರಶೇಖರ ವಸ್ತ್ರದ ಇನ್ನಿತರರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English