ಬೆಳ್ತಂಗಡಿ : ತಾಲೂಕಿನ ಕಳೆಂಜ ಗ್ರಾಮದಲ್ಲಿ ದೇವಣ್ಣ ಗೌಡ ಅವರ ಮನೆ ಧ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆ ಹಾಗೂ ರಾಜ್ಯದ ಬಡವರ ವಿರೋಧಿ ಸರ್ಕಾರದ ವಿರುದ್ಧ ದ.ಕ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಸಹಿತ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಬಾರಿ ಈ ಮನೆ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಚಟುವಟಿಕೆಯೊಂದಿಗೆ ಸದರಿ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬವನ್ನು ಮುನ್ಸೂಚನೆಯೂ ನೀಡದೆ ದಬ್ಬಾಳಿಕೆಯೊಂದಿಗೆ ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಜನರು ಈಗಾಗಲೇ ರೊಚ್ಚಿಗೆದ್ದಿದ್ದಾರೆ.
ಕಳೆಂಜ ಗ್ರಾಮದ ಅಮ್ಮಿಡ್ಕಿ ಕುದ್ದಮನೆ ಸೇಸ ಗೌಡ ಹಾಗೂ ಕುಟುಂಬಸ್ಥರು ಈ ಜಮೀನಿನಲ್ಲಿ ಈ ಹಿಂದಿನಿಂದಲೂ ಇಲ್ಲಿ ವಾಸವಾಗಿದ್ದರು. ಈ ಜಾಗದಲ್ಲಿ ಕುಟುಂಬಸ್ಥರು ಹೊಸದಾಗಿ ಮನೆ ನಿರ್ಮಿಸಲು ಮುಂದಾಗಿದ್ದರು. ಮನೆ ಪಂಚಾಂಗದ ಕೆಲಸ ಆರಂಭಿಸಿದ್ದರು. ಈ ನಡುವೆ ಕಳೆದ ವಾರ ಅರಣ್ಯ ಇಲಾಖೆಯವರು ಈ ಜಮೀನು 309 ಸರ್ವೇ ನಂಬರ್ ನಲ್ಲಿದ್ದು ಇದು ಅರಣ್ಯ ಇಲಾಖೆಯ ಜಾಗ ಎಂದು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ತೆರವು ಕಾರ್ಯಾಚರಣೆಯನ್ನು ತಡೆದಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ವಿಕೋಪಕ್ಕೆ ಹೋಗುವ ಸ್ಥಿತಿ ಎದುರಾಗಿತ್ತು.
ಬಡವರೊಂದಿಗೆ ಸರ್ಕಾರ ಒರಟು ರೀತಿಯಲ್ಲಿ ನಡೆದುಕೊಂಡದ್ದೇ ಆದಲ್ಲಿ ಜನರ ಪ್ರತಿಕ್ರಿಯೆ ಯಾವ ರೂಪದಲ್ಲಿ ಇರಬಹುದು ಎಂಬುದು ಊಹಿಲಸಾಧ್ಯ. ಮುಂದಿನ ಎಲ್ಲಾ ಆಗುಹೋಗುಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
Click this button or press Ctrl+G to toggle between Kannada and English