ಚಿಕ್ಕಮಗಳೂರು : ಯುವ ವಕೀಲನ ಮೇಲೆ ದೊಣ್ಣೆ, ಲಾಠಿ, ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ ಆರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಹಲ್ಲೆಗೊಳಗಾದವರನ್ನು ಪ್ರೀತಂ ಎಂದು ಗುರುತಿಸಲಾಗಿದ್ದು, ಇವರು ಗುರುವಾರ ರಾತ್ರಿ ಹೆಲ್ಮೆಟ್ ಇಲ್ಲದೆ ಮಾರ್ಕೇಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ.
ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ, ಕೀ ಕಸಿದುಕೊಳ್ಳಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು’ ಎಂದು ಪ್ರೀತಂ ಪ್ರಶ್ನಿಸಿದ್ದಾರೆ. ಅಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸರು ಪ್ರೀತಂ ಅವರನ್ನು ಠಾಣೆಯ ಒಳಗೆ ಕರೆದೊಯ್ದಿದ್ದಾರೆ ಕೊಠಡಿಯಲ್ಲಿ ಕೂಡಿ ಹಾಕಿ ಮನ ಬಂದಂತೆ ದೊಣ್ಣೆ, ಲಾಠಿ, ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರೀತಂ ತಿಳಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಎದುರು ಜಮಾಯಿಸಿದ ವಕೀಲರು ಪ್ರೀತಂ ಅವರನ್ನು ಆಸ್ಪತ್ರೆಗೆ ದಾಖಲಿಸಿದರು, ಬಳಿಕ ಅವರ ಮೇಲೆ ಪೊಲೀಸರ ದೌರ್ಜನ್ಯ ನೋಡಿ ಕೇರಳಿದ ವಕೀಲರ ಸಮೂಹ ರಾತ್ರಿಯಿಡಿ ಠಾಣೆಯ ಎದುರು ಧರಣಿ ನಡೆಸಿ, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳು ವಕೀಲರನ್ನು ಸಮಾಧಾನಪಡಿಸಲು ಯತ್ನಿಸಿದರು. ಠಾಣೆಯ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿ ಆರು ಪೊಲೀಸರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಅಷ್ಟೂ ಜನರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಡೀ ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಡಿವೈಎಸ್‌ಪಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಈ ನಡುವೆ ಪೊಲೀಸರ ಕೃತ್ಯ ಖಂಡಿಸಿ ವಕೀಲರು ಪ್ರತಿಭಟನೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳಿಂದಲೂ ನೂರಾರು ವಕೀಲರು ಚಿಕ್ಕಮಗಳೂರಿಗೆ ಬರುತ್ತಿದ್ದಾರೆ. ವಕೀಲರ ಸಂಘದಲ್ಲಿ ತುರ್ತು ಸಭೆ ನಡೆಸಿದ್ದು, ಆರೋಪಿತ ಪೊಲೀಸರನ್ನು ಬಂಧಿಸುವ ತನಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುವ ಮುನ್ಸೂಚನೆಯಿಂದ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.
Click this button or press Ctrl+G to toggle between Kannada and English