ವೇಣೂರು : ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ 12 ವರ್ಷದ ಬಳಿಕ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಗುರುವಾರ ಅಧಿಕೃತವಾಗಿ ಆರಂಭ ಗೊಂಡಿದೆ.
35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ಹತ್ತಿ ಭಕ್ತರು ಅಭಿಷೇಕ ಮಾಡುತ್ತಿದ್ದಾರೆ. ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ಮುಂದುವರಿಯಲಿದ್ದು ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಲಿದೆ.
ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ದಕ ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ 42 ಅಡಿ, ವೇಣೂರಿನಲ್ಲಿ 35 ಅಡಿ ಹಾಗೂ ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರಿನ ಅಜಿಲ ಮನೆತನದವರು ಸ್ಥಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು.
ಪ್ರಾಚೀನ ಕಾಲದಲ್ಲಿಹಗ್ಗದ ಅಟ್ಟಳಿಗೆ ನಿರ್ಮಿಸಲಾಗುತ್ತಿತ್ತು ಬಳಿಕ ಬಿದಿರಿನ ಅಟ್ಟಳಿಗೆ ಬಂತು. 2000ದಲ್ಲಿನಡೆದ ಮಹಾಮಸ್ತಕಾಭಿಷೇಕಕ್ಕೆ ಮರದ ಅಟ್ಟಳಿಗೆ ಮಾಡಲಾಗಿತ್ತು. 2012ರಲ್ಲಿಕಬ್ಬಿಣದ ಅಟ್ಟಳಿಗೆ ನಿರ್ಮಿಸಲಾಗಿತ್ತು. ಈ ಬಾರಿ 50 ಅಡಿ ಎತ್ತರದ ಕಬ್ಬಿಣದ ಅಟ್ಟಳಿಗೆ ಸಿದ್ಧವಾಗಿದ್ದು, 5 ಅಂತಸ್ತಿನಲ್ಲಿದೆ. ಪ್ರತಿ ಅಂತಸ್ತಿನಲ್ಲಿ 100 ಮಂದಿ ನಿಲ್ಲಲು ಸ್ಥಳಾವಕಾಶ ಇದೆ.
ಮಾ.1ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಪ್ರತಿದಿನ ಧಾರ್ಮಿಕ ವಿಧಿವಿಧಾನ, ಸಂತರ್ಪಣೆ, ಧಾರ್ಮಿಕ ಸಭೆ, ಪ್ರವಚನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಜೆ ಹಲವು ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಜರುಗಲಿದೆ. ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಮಹಾಮಸ್ತಕಾಭಿಷೇಕ ವಿಡಿಯೋ
Click this button or press Ctrl+G to toggle between Kannada and English