ಮಂಗಳೂರು : ಸುಲ್ತಾನ್ ಬತ್ತೇರಿ ಮತ್ತು ತಣ್ಣೀರು ಬಾವಿ ಪ್ರದೇಶಗಳನ್ನು ಸಂಪರ್ಕಿಸುವ ತೂಗುಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತೂಗುಸೇತುವೆಯು ದೇಶದಲ್ಲೇ ಅತೀ ಉದ್ದವಾದ ಸೇತುವೆಯಾಗಲಿದ್ದು ,410 ಮೀಟರುಗಳಷ್ಟು ಉದ್ದ, 25 ಮೀಟರುಗಳಷ್ಟು ಎತ್ತರವಿರಲಿದೆ ಹಾಗೂ 3 ಮೀಟರುಗಳಷ್ಟು ಅಗಲವಿರಲಿದೆ ಎಂದು ರಾಜ್ಯ ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್ ತಿಳಿಸಿದರು. ಕಾಮಗಾರಿಯನ್ನು ಮಂಗಳೂರು ಮೂಲದ ಯೋಜಕ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ಕೊಡಲಾಗಿದ್ದು, ತೂಗುಸೇತುವೆಗಳನ್ನು ನಿರ್ಮಿಸುವುದರಲ್ಲಿ ಪ್ರವೀಣನಾಗಿರುವ ತೂಗುಸೇತುವೆ ತಜ್ಞ ಗಿರೀಶ್ ಭಾರದ್ವಾಜ್ ರವರಿಂದ ಈ ಸೇತುವೆಗೆ ತಾಂತ್ರಿಕ ಸಲಹೆಗಳನ್ನು ಪಡೆಯಲಾಗಿದೆ ಎಂದವರು ಹೇಳಿದರು.
ಸಮಾರಂಭದಲ್ಲಿ ಮೇಯರ್ ಗುಲ್ಜಾರ್ ಬಾನು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೃಷ್ಣ ಜೆ.ಪಾಲೆಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಂಗಳೂರು ಮಹಾನಗರಪಾಲಿಕೆ ಉಪ ಮೇಯರ್ ಅಮಿತಕಲಾ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English