ಬಂದೂಕು ಹಿಡಿದು ಹಿಂದು ಮಹಾಸಭಾ ರಾಜ್ಯ ಅಧ್ಯಕ್ಷರ ಮಾಹಿತಿ ಕೇಳಿದ ಅಪರಿಚಿತರು

3:53 PM, Monday, August 22nd, 2022
Share
1 Star2 Stars3 Stars4 Stars5 Stars
(No Ratings Yet)
Loading...
ಹಿಂದು ಮಹಾಸಭಾ

ಮಂಗಳೂರು: ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರ ಚಲನವಲನ ಕುರಿತು ಅವರ ಕಾರು ಚಾಲಕರಾಗಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸುರತ್ಕಲ್ ಮುಕ್ಕ ನಿವಾಸಿ ಕಿರಣ್ ಅವರ ಮನೆಗೆ ಆಗಮಿಸಿದ ಐದು ಮಂದಿ ಅಪರಿಚಿತರ ತಂಡ ಬಂದೂಕು ತೋರಿಸಿ ಮಾಹಿತಿ ಕೋರಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಕಿರಣ್ ಅವರ ಮನೆಗೆ ಆಗಮಿಸಿದ ಅಪರಿಚಿತರು ತಾವು ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡು ಮಾಹಿತಿ ಕೇಳಿದ್ದಾರೆ. ಈ ಪ್ರಕರಣವನ್ನು ನಮ್ಮ ಸಂಘಟನೆ ಗಂಭೀರವಾಗಿ ಪರಿಗಣಿಸಿದೆ ಎಂದು ರಾಜೇಶ್ ಪವಿತ್ರನ್ ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷದ ಆಂತರಿಕ ಇಂಟೆಲಿಜೆನ್ಸ್ ಪ್ರಕಾರ ಬಂದೂಕು ತೋರಿಸಿ ತನ್ನ ಬಗ್ಗೆ ಮಾಹಿತಿ ಕೋರಿರುವ ವ್ಯಕ್ತಿಗಳು ಹಿಂದುಗಳೇ ಆಗಿದ್ದಾರೆ. ನೈಜ ಆರೋಪಿಗಳು ಯಾರು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಬೇಕು. ತಾವು ಈಗಾಗಲೇ ಪೊಲೀಸ್ ಗನ್‌ಮ್ಯಾನ್ ರಕ್ಷಣೆಯನ್ನು ಕೋರಿರುವುದಾಗಿ ಅವರು ಹೇಳಿದರು.

ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಪೊಲೀಸ್ ಇಲಾಖೆಗೆ ಅವಕಾಶ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಹಿಂದು ನಾಯಕರು ಅಥವಾ ಕಾರ್ಯಕರ್ತರಿಗೆ ಏನಾದರೂ ಅಪಾಯ ಎದುರಾದಲ್ಲಿ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಿಂದು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ಜಿಲ್ಲಾ ವಕ್ತಾರ ಶಿವಪ್ರಸಾದ್ ಕೊಕ್ಕಡ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹರ್ಷ ನಾಯಕ್, ಬೆಳಂ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪುನೀತ್ ಸುವರ್ಣ ಉಪಸ್ಥಿತರಿದ್ದರು.

Hindu Mahasabha

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English