ಬೆಂಗಳೂರು : ಫಿಶ್ ಕಬಾಬ್, ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.
ಇಂತಹ ಆಹಾರಗಳನ್ನು ತಿನ್ನುವ ವಿದ್ಯಾರ್ಥಿಗಳು, ಯುವ ಸಮುದಾಯ ಕ್ರಮೇಣ ಸಕ್ಕರೆಕಾಯಿಲೆ, ಬಿಪಿ, ಕಾನ್ಸರ್ ಮೊದಲಾದ ರೋಗಗಳಿಗೆ ತುತ್ತಾಗುವುದು ಖಚಿತಗೊಂಡಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.
ಇದೇ ವೇಳೆ ಚಿಕನ್ ಕಬಾಬ್ ಗಳಲ್ಲೂ ಕೃತಕ ಬಣ್ಣಗಳ ಬೆರಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು.
ಕಳಪೆ ಗುಣಮಟ್ಟದ ಆಹಾರ ಸೇವನೆ ಇತ್ತಿಚೆಗೆ ಜನರ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟುಮಾಡುತ್ತಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ. ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 07 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 01) ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ. ದಿ ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಆಕ್ಟ್ , 2006 ರ ನಿಯಮ 3(1)(zz)(viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ.
ದಿ ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಆಕ್ಟ್ 2011 ರ ಅನ್ವಯ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಬಾಬ್‌ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
7 ವರ್ಷಗಳಿಂದ ಜೀವಾವಧಿವರೆಗೆ ಜೈಲುಶಿಕ್ಷೆ: ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಿಷೇಧದ ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಅನ್ವಯ 7 ವರ್ಷಗಳಿಂದ ಜೀವಾವಧಿವರೆಗೆ ಜೈಲುಶಿಕ್ಷೆ ಹಾಗು 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ರಾಜ್ಯದ ಎಲ್ಲಾ ಕಬಾಬ್ ತಯಾರಿಸುವ ಮತ್ತು ಮಾರಾಟ ಮಾಡುವ ಆಹಾರ ಉದ್ದಿಮೆದಾರರು ಈ ಆದೇಶವನ್ನು ತತ್‌ಕ್ಷಣದಿಂದಲೇ ಪಾಲಿಸಲು ಸೂಚಿಸಲಾಗಿದೆ.
Click this button or press Ctrl+G to toggle between Kannada and English