“ವಿದ್ಯಾರ್ಥಿಗಳು ಆಂತರಿಕವಾಗಿ ಅರಳುವಂತಾಗಲಿ”-ಡಾ. ವಿಜಯ ಸರಸ್ವತಿ

9:10 PM, Wednesday, June 26th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಾಣಿಜ್ಯ ಸಂಘದ ಉದ್ಘಾಟನೆಯ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಆಧುನಿಕ ಯುಗದಲ್ಲಿ ಸಾಕಷ್ಟು ಸಾಮಾಜಿಕ ಸ್ಥಿತ್ಯಂತರಗಳು ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದರ ಪರಿಣಾಮ ಬದಲಾದ ಭಾರತ. ವಾಣಿಜ್ಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಆಗಿರುವುದೇ ಈ ಪ್ರಗತಿಗೆ ಕಾರಣವಾಗಿದೆ. ಇಂದು ಸ್ಪರ್ಧಾತ್ಮಕವಾದ ಜಗತ್ತು ನಮ್ಮ ಮುಂದಿದೆ. ಇಲ್ಲಿ ಸ್ಪರ್ಧೆಯನ್ನು ನೀಡದೇ ಹೋದರೆ ಬದುಕು ದುಸ್ತರವಾದೀತು. ವಿದ್ಯಾರ್ಥಿಗಳು ಕೇವಲ ವಿದ್ಯಾರ್ಹತೆಯನ್ನು ಮಾತ್ರ ಪಡೆದುಕೊಳ್ಳದೆ ವೈವಿಧ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಆಂತರಿಕವಾಗಿ ಸಹಜವಾದ ಬೆಳವಣಿಗೆಗಳು ವಿದ್ಯಾರ್ಥಿಗಳಲ್ಲಿ ಮೂಡಿ ಬರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ.ಮುರಳೀಕೃಷ್ಣ ವಹಿಸಿಕೊಂಡು “ವಿದ್ಯಾರ್ಥಿಗಳಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಅವಕಾಶಗಳ ಸದುಪಯೋಗ ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್‌ ರೈ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೇಯಸ್ ಸ್ವಾಗತಿಸಿ, ಸ್ಪಂದನ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾರ್ತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English