ತಾನು ಎಂದಿಗೂ ಅಪ್ರಬುದ್ಧ ಎಂಬುದನ್ನು ರಾಹುಲ್ ಮತ್ತೆ ನಿರೂಪಿಸಿದರು : ಶಾಸಕ ಕಾಮತ್

5:46 PM, Tuesday, July 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : “ಹಿಂದೂಗಳೆಂದು ಕರೆದುಕೊಳ್ಳುವವರು ಸದಾ ಹಿಂಸಾಚಾರ ಮತ್ತು ದ್ವೇಷವನ್ನು ಹರಡುವವರು” ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಪ್ರಬುದ್ಧ ಹೇಳಿಕೆ ನೀಡುವುದಕ್ಕೆ ನಿಸ್ಸೀಮರೆಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಈ ಹಿಂದೆ ವಿದೇಶದಲ್ಲಿ ನಿಂತುಕೊಂಡು ಭಾರತದಲ್ಲಿ ಪ್ರಜಾಭುತ್ವವಿಲ್ಲವೆಂದು ಭಾಷಣ ಮಾಡಿ ದೇಶದ ಘನತೆಗೆ ಧಕ್ಕೆ ತಂದಿದ್ದರು. ಇಂದು ಪ್ರಜಾಪ್ರಭುತ್ವದ ದೇಗುಲವಾದ ಲೋಕಸಭೆಯಲ್ಲೇ ಹಿಂದೂ ಧರ್ಮಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ತಮ್ಮ ಸರ್ವೋಚ್ಚ ನಾಯಕನ ಅಪ್ರಬುದ್ದ ಹೇಳಿಕೆಯನ್ನು ಖಂಡಿಸುವ ಧೈರ್ಯವಿಲ್ಲದ ರಾಜ್ಯ ಕಾಂಗ್ರೆಸ್ ನಾಯಕರೂ ಸಹ ಅದೇ ದಾಟಿಯಲ್ಲಿ ಮುಂದುವರಿದು ಸಮರ್ಥನೆಗೆ ನಿಂತಿರುವುದು ಅತ್ಯಂತ ನಾಚಿಕೆಗೇಡು ಎಂದರು.

ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷ ವರ್ಷದಿಂದ ನಿಷ್ಕಳಂಕವಾಗಿ ಆಡಳಿತ ನಡೆಸಿದ್ದು ಆರೋಪ ಮಾಡಲು ಯಾವುದೇ ವಿಷಯಗಳು ಸಿಗದೇ ಹತಾಶೆಯಾಗಿರುವ ಕಾಂಗ್ರೆಸ್ ದೇಶದ ಜನತೆಯನ್ನು ದಾರಿತಪ್ಪಿಸಲು ಇಂತಹ ಹಿಂದೂ ವಿರೋಧಿ ನೀತಿ ಅಸ್ತ್ರಗಳನ್ನು ಬಳಸಿಕೊಳ್ಳುತ್ತಿದೆ.

ಹಿಂದೂ ಧರ್ಮವು ಸರ್ವೇ ಜನಾಃ ಸುಖಿನೋ ಭವಂತು, ವಸುಧೈವ ಕುಟುಂಬಕಂ ಎಂಬುದನ್ನು ಪ್ರತಿಪಾದಿಸಿದ ಜಗತ್ತಿನ ಮೊಟ್ಟ ಮೊದಲ ಧರ್ಮ. ಇಂತಹ ಧರ್ಮದಲ್ಲಿ ಹುಟ್ಟಿರುವುದು ನನ್ನ ಪಾಲಿನ ಭಾಗ್ಯ. ನಾನೆಂದೂ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮನುಷ್ಯ ಮಾತ್ರವಲ್ಲದೇ, ಪ್ರಾಣಿ-ಪಕ್ಷಿ-ವೃಕ್ಷಗಳ ಒಳಿತಿಗೂ ಸಹ ಪ್ರಾರ್ಥಿಸುವಂತಹ ಶ್ರೇಷ್ಠ ಪರಂಪರೆ ಹೊಂದಿರುವ ಸನಾತನ ಧರ್ಮಕ್ಕೆ ಇಡೀ ವಿಶ್ವವೇ ತಲೆ ಬಾಗುತ್ತಿದೆ. ಆದರೆ ಇಂತಹ ವ್ಯಕ್ತಿಗಳು ಹಗುರವಾಗಿ ಮಾತನಾಡುತ್ತಾರೆ. ಈ ಕೂಡಲೇ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕೆಂದು ಶಾಸಕರು ಒತ್ತಾಯಿಸಿದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English