ಕೊಲ್ಲೂರು : ಸೌಪರ್ಣಿಕಾ ನದಿ ಯಲ್ಫ್ಲಿಕೊಚ್ಚಿ ಹೋಗಿದ್ದ ಮಹಿಳೆಯನ್ನು ಪ್ರತಿಕೂಲ ಹವಾಮಾನದಲ್ಲೂ ಈಶ್ವರ್ ಮಲ್ಪೆ ತಂಡದವರು ಪತ್ತೆ ಹಚ್ಚಿದ್ದಾರೆ.
ಕೇರಳದ ತ್ರಿವೇಂಡ್ರಮ್ ಜಿಲ್ಲೆಯ ಕಚಗಡದಿಂದ ಕೊಲ್ಲೂರಿಗೆ ಬಂದು, ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ಅಕಸ್ಮಾತ್ತಾಗಿ ನದಿಪಾಲಾದ ಮಹಿಳೆಯ ಶವ ಭಾನುವಾರ ಮಧ್ಯಾನ್ಹ ಘಟನಾ ಸ್ಥಳದಿಂದ ಮೂರೂವರೆ ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.
ಸಾಮಾಜಿಕ ಕಾರ್ಯಕರ್ತ, ಈಶ್ವರ್ ಮಲ್ಪೆ ಅವರು ಭಾರೀ ರಭಸದಿಂದ ಹರಿವ ನೀರಿನ ಸೆಳೆತವನ್ನೂ ಲೆಕ್ಕಿಸಿದೆ, ಸಾಹಸದಿಂದ ಶವ ಪತ್ತೆಹಚ್ಚಿದ್ದಾರೆ. ಅಗ್ನಿ ಶಾಮಕ ದಳದವರು, ಪೊಲೀಸರು, ಸ್ಥಳೀಯರು ಶವ ಪತ್ತೆಗಾಗಿ ಶ್ರಮಿಸಿದ್ದರೂ ಸುರಿವ ಜಡಿಮಳೆ, ಸೌಪರ್ಣಿಕಾ ನದಿಯ ಸೆಳೆತದಿಂದಾಗಿ ಕೈಚೆಲ್ಲಿದ್ದರು. ಆದರೆ, ಈಶ್ವರ್ ಅವರು ತಮ್ಮ ಸಂಗಡಿಗರೊಂದಿಗೆ ಛಲ ಬಿಡದೆ, ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸಿ ಮಹಿಳೆಯ ಶವವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನದಿ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮತ್ತು ಬೆಳಕಿನ ಕೊರತೆಯಿಂದ ಅವರಿಗೆ ಶವವನ್ನು ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಶವವನ್ನು ಭದ್ರವಾಗಿ ಹಗ್ಗದಿಂದ ಮರಕ್ಕೆ ಬಿಗಿದು ಮರಳಿ ಬಂದಿದ್ದಾರೆ ಎನ್ನಲಾಗಿದೆ. ಸಾಹಸಿಗ ಈಶ್ವರ್ ಮಲ್ಪೆಯವರೊಂದಿಗೆ ಮಿತ್ರರಾದ ಕೋಟ ನಾಗೇಂದ್ರ ಪುತ್ರನ್, ಅಂಬಾರಿ ರವಿ ಕೋಟ ಮತ್ತು ದೀಪಕ್ ಕಾಂಚನ್ ಹುಣಿಸೆಬೆಟ್ಟು ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ್ದರು.
ಕೇರಳದ ತ್ರಿವೇಂಡ್ರಮ್ ಜಿಲ್ಲೆಯ ಕಚಗಡ ಗ್ರಾಮದ ನಿವಾಸಿ ಚಾಂದಿ ಶೇಖರ್ (42) ಎಂಬಾಕೆ ಪತಿ ಮುರುಗನ್, ಮಗ ಆದಿತ್ಯನ್ ಮತ್ತು ಬಂಧುಗಳೊಂದಿಗೆ ಓಣಂ ಹಬ್ಬದ ಪ್ರಯುಕ್ತ ಕೊಲ್ಲೂರು ಶ್ರೀ ಮುಕಾಂಬಿಕೆಯ ದರ್ಶನಕ್ಕೆ ಶನಿವಾರ ಆಗಮಿಸಿದ್ದರು. ಕೊಲ್ಲೂರಿನ ವಸತಿ ಗೃಹದಲ್ಲಿ ತಂಗಿದ್ದು, ಸಂಜೆ ಕುಟುಂಬದವರೊಂದಿಗೆ ಸೌಪರ್ಣಿಕಾ ನದಿಯ ಸ್ನಾನ ಘಟ್ಟಕ್ಕೆ ತೀರ್ಥಸ್ನಾನಕ್ಕಾಗಿ ತೆರಳಿದ್ದರು.
ಸ್ನಾನ ಮಾಡುತ್ತಿರುವಾಗ ಮುರುಗನ್ ಅಕಸ್ಮಾತ್ ಕಾಲುಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗತೊಡಗಿದರು. ದಡದಲ್ಲಿ ಸ್ನಾನ ಮಾಡುತ್ತಿದ್ದ ಮಗ ಆದಿತ್ಯನ್ ತಕ್ಷಣ ಅವರ ರಕ್ಷಣೆಗಾಗಿ ನದಿಗೆ ಧುಮುಕಿದ್ದರು. ಈಜು ಬಾರದ ಆತನೂ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗತೊಡಗಿದಾಗ ತಾಯಿ ಚಾಂದಿ ಶೇಖರ್ ನೀರಿಗೆ ಹಾರಿದ್ದರು. ದುರ್ದೈವದಿಂದ ಅವರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಮುರುಗನ್ ಮತ್ತು ಮಗ ಆದಿತ್ಯನ್ ರನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ, ನದಿಯ ರಭಸದ ಸೆಳೆತಕ್ಕೆ ಸಿಕ್ಕ ಚಾಂದಿ ಶೇಖರ್ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಹಗಲಿರುಳು ಶ್ರಮಿಸಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಅಸಾಧ್ಯವಾಗಿತ್ತು. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈಶ್ವರ್ ಮಲ್ಪೆ ನೇತೃತ್ವದ ಸಾಹಸಿಗರ ತಂಡದವರು ಶವ ಪತ್ತೆಹಚ್ಚಿದ್ದಾರೆ. ಅದನ್ನು ಸುರಕ್ಷಿತವಾಗಿ ದಡಕ್ಕೆ ತರುವ ಕಾರ್ಯಾಚರಣೆ ನಡೆದಿದೆ.
Click this button or press Ctrl+G to toggle between Kannada and English