ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಹತ್ತನೇ ತಿಂಗಳ ಸ್ವಚ್ಛತಾ ಅಭಿಯಾನವನ್ನು, ಭಾನುವಾರ ಬೆಳಗ್ಗೆ ಕೂಳೂರಿನ ಹಿಂದು ರುದ್ರಭೂಮಿ ಪರಿಸರದಲ್ಲಿ ನಡೆಯಿತು.
ಎಮ್.ಆರ್.ಪಿ.ಎಲ್. ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಮುಖ್ಯಸ್ಥರಾದ ಪ್ರಶಾಂತ್ ಬಾಳಿಗಾ ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಧನೇಶ್ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಸಹಾಯಕ ಪ್ರಾಧ್ಯಾಪಕರಾದ ಪ್ರಕಾಶ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ. ವಿ., ಉಮಾನಾಥ್ ಕೋಟೆಕ್ಕಾರ್ ಮತ್ತು ಶ್ರೀ ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಮ್.ಆರ್.ಪಿ.ಎಲ್. ಸಂಸ್ಥೆಯ ಪ್ರಶಾಂತ್ ಬಾಳಿಗಾ, “ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನವನ್ನು ಸ್ವಚ್ಛ ಮಂಗಳೂರು ಅಭಿಯಾನ ಎಂಬ ಶೀರ್ಷಿಕೆಯೊಂದಿಗೆ, ಸ್ವಚ್ಛತೆಯ ಸಂದೇಶವನ್ನು ಈ ಭಾಗದ ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ರಾಮಕೃಷ್ಣ ಮಿಷನ್ ಮಹತ್ತರ ಪಾತ್ರ ವಹಿಸುತ್ತಿದೆ. ಈ ಕೆಲಸ ನಿಜಕ್ಕೂ ಶ್ಲಾಘನೀಯ” ಎಂದು ಹೇಳಿ ಶುಭ ಹಾರೈಸಿದರು.
ತದನಂತರ, ಹಿರಿಯ ಸ್ವಯಂಸೇವಕರಾದ ಸೌರಾಜ್ ಮಂಗಳೂರು, ಅನಿರುದ್ಧ್ ನಾಯಕ್ ಅವರ ನೇತೃತ್ವದಲ್ಲಿ ಮಂಗಳಾ ಕಾಲೇಜ್ ಒಫ್ ನರ್ಸಿಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್ ನ ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಮಿಥುನ್ ವೇಣುಗೋಪಾಲ್ ಹಾಗೂ ಪ್ರಾಧ್ಯಾಪಕರಾದ ನವೀನ್ ಅವರ ಮಾರ್ಗದರ್ಶನದಲ್ಲಿ ಮಂಗಳಾ ಕಾಲೇಜ್ ಒಫ್ ನರ್ಸಿಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್ ನ ವಿದ್ಯಾರ್ಥಿಗಳು ಹಿಂದೂ ರುದ್ರಭೂಮಿಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪ್ಲಾಸ್ಟಿಕ್, ಬಾಟಲಿಗಳು, ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಸ್ವಯಂಸೇವಕರಾದ ಅವಿನಾಶ್ ಅಂಚನ್, ವಿಜೇಶ್ ದೇವಾಡಿಗ, ರಾಜೀವಿ ಚಂದ್ರಶೇಖರ್, ಸಜಿತ್ ನೇತೃತ್ವದಲ್ಲಿ ವಿದ್ಯಾನಗರ ಶಾರದಾ ಸೇವಾ ಟ್ರಸ್ಟ್, ಹಿಂದು ಯುವಸೇನೆ ವಿದ್ಯಾನಗರ ಶಾಖೆ ಹಾಗೂ ಹಿಂದು ರುದ್ರಭೂಮಿ ಸಮಿತಿ ಕಾರ್ಯಕರ್ತರು, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯೇಶ್ ಮಾರ್ಗದರ್ಶನದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಹಿಂದೂ ರುದ್ರಭೂಮಿಯ ಪರಿಸರವನ್ನು ಸ್ವಚ್ಛಗೊಳಿಸಿದರು.
ಬಸ್ ತಂಗುದಾಣಕ್ಕೆ ಜೀವಕಳೆ
ಪಂಜಿಮೊಗರು – ವಿದ್ಯಾನಗರದಲ್ಲಿ 2019 ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿತ್ತು. ಇದರ ನಿರ್ವಹಣೆಯ ಅವಶ್ಯಕತೆ ಇರುವುದನ್ನು ಮನಗಂಡ ರಾಮಕೃಷ್ಣ ಮಿಷನ್ ಸ್ವಯಂಸೇವಕರು, ವಿದ್ಯಾನಗರ ಶಾರದಾ ಸೇವಾ ಟ್ರಸ್ಟ್ ಹಾಗೂ ಹಿಂದು ಯುವಸೇನೆ ವಿದ್ಯಾನಗರ ಶಾಖೆ ಸಹಯೋಗದೊಂದಿಗೆ ಈ ಬಸ್ ತಂಗುದಾಣಕ್ಕೆ ಮರುಜೀವ ತುಂಬಲು ನಿರ್ಧರಿಸಿ ನೂತನ ಫ್ಲೆಕ್ಸ್ಗಳನ್ನೂ ಅಳವಡಿಸಿ ಕುಳಿತುಕೊಳ್ಳಲು ಸಮರ್ಪಕವಾದ ವ್ಯವಸ್ಥೆಯನ್ನು ಮಾಡಿ ನವೀಕರಣಗೊಳಿಸಿದರು. ನವೀಕರಣಗೊಂಡ ಬಸ್ ತಂಗುದಾಣವನ್ನು ಹತ್ತನೇ ತಿಂಗಳ ಅಭಿಯಾನದ ಸಂದರ್ಭದಲ್ಲಿ ಎಮ್.ಆರ್.ಪಿ.ಎಲ್. ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಮುಖ್ಯಸ್ಥರಾದ ಪ್ರಶಾಂತ್ ಬಾಳಿಗಾ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ವಿದ್ಯಾನಗರ ಶಾರದಾ ಸೇವಾ ಟ್ರಸ್ಟ್ ಹಾಗೂ ಹಿಂದು ಯುವಸೇನೆ ವಿದ್ಯಾನಗರ ಶಾಖೆಯ ಪದಾಧಿಕಾರಿಗಳಾದ ಉಮೇಶ್, ಸುಕುಮಾರ ಪೂಜಾರಿ, ಹರೀಶ್, ರಮೇಶ್, ಸಂದೀಪ್, ಉಮೇಶ್ ವಿದ್ಯಾನಗರ ಮತ್ತು ಈ ಸಂಘಟನೆಗಳ ಸದಸ್ಯರು, ರಾಮಕೃಷ್ಣ ಮಿಷನ್ ನ ಹಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English