ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳುತ್ತಿರುವ ಉದಯ್‌ ಕುಮಾರ್‌ ಶೆಟ್ಟಿ

9:48 PM, Thursday, September 19th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಕುರಿತು ಪದೇ ಪದೇ ಸುಳ್ಳು ಹೇಳಿ ತಗಾದೆ ಮಾಡುತ್ತಿರುವ ಉದಯ್‌ ಕುಮಾರ್‌ ಶೆಟ್ಟಿಯವರೇ, ಪರಶುರಾಮನ ಮೂರ್ತಿ ಮಾಡುವ ಶಿಲ್ಪಿ GST ಕಟ್ಟಿಲ್ಲ ಎಂಬ ಮಾತ್ರಕ್ಕೆ ಮೂರ್ತಿಯ ನಿರ್ಮಾಣ ಕೆಲಸ ಮಾಡಬಾರದು ಎಂದಾದರೆ, ಸರ್ಕಾರದ ಗುತ್ತಿಗೆದಾರರಾದ ನೀವು ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿ ಕಳಪೆ ಕಾಮಗಾರಿಯ ಸರದಾರ ಎಂದೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಒಮ್ಮೆ ನಿಮ್ಮ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು ಎಂಬ ಬಗ್ಗೆ ಸುದ್ಧಿಯು ಕೇಳಿ ಬಂದಿತ್ತು. ಅಂತಹ ಕುಖ್ಯಾತಿ ಹೊಂದಿರುವ ನೀವು, ಮತ್ತೆ ಸರ್ಕಾರದ ಕಾಮಗಾರಿಗಳನ್ನು ನಿರ್ವಹಿಸಬಹುದೇ…? ಈ ರಾಜ್ಯದಲ್ಲಿ ಕೃಷ್ಣ ನಾಯ್ಕ್‌ಗೆ ಒಂದು ಕಾನೂನು, ನಿಮಗೊಂದು ಕಾನೂನು ಇದೆಯೆ? ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.

ಪರಶುರಾಮ ಥೀಂ ಪಾರ್ಕ್‌ ವಿಷಯದಲ್ಲಿ ಆರಂಭದಿಂದಲೂ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸಿದಿರಿ
ಪರಶುರಾಮನ ಮೂರ್ತಿಯ ಮೇಲ್ಭಾಗವನ್ನು ಕದ್ದು-ಮುಚ್ಚಿ ಕೊಂಡೊಯ್ಯಲಾಗಿದೆ ಎಂದು ಯಾಕೆ ಜನರಿಗೆ ಪದೇ ಪದೇ ಸುಳ್ಳು ಹೇಳುತ್ತೀರಿ…? ಮೂರ್ತಿಯ ಭಾಗವನ್ನು ಪೊಲೀಸು ಇಲಾಖೆಯ ಸುಪರ್ದಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೆಗೆಯಲಾಗಿದ್ದು ನಿಮಗೂ ಗೊತ್ತಿದೆ. ಈ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲೆ ಸಮೇತ ಚರ್ಚೆ ಆಗಿದೆ. ಆದರೂ ಕೂಡ ನೀವು ಮೂರ್ತಿ ಕಳವಾಗಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತೀರಿ. ಮೂರ್ತಿ ಪ್ಲಾಸ್ಟಿಕ್‌-ಫೈಬರ್‌ ಎಂದು ಊರೆಲ್ಲಾ ಹೇಳಿದ ನೀವು ಕೋರ್ಟ್‌ನಲ್ಲಿ ಮಾತ್ರ ಪ್ಲಾಸ್ಟಿಕ್‌-ಫೈಬರ್‌ ಅಲ್ಲ ಎಂದು ಒಪ್ಪಿಕೊಂಡಿರುತ್ತೀರಿ. ನಿಮಗೆ ಈ ತರಹ ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೇ..? ನೀವೊಬ್ಬ ಸರಣಿ ಸುಳ್ಳುಗಾರ ಎಂದು ಖ್ಯಾತಿ ಪಡೆದವರು. ಹೀಗೆಯೆ ಸುಳ್ಳು ಹೇಳುತ್ತಾ ಹೋದರೆ, ನಿಮ್ಮ ಬಗ್ಗೆ ಮಹಾ ಸುಳ್ಳುಗಾರ ಎಂಬ ಪ್ರಬಂಧವನ್ನೇ ಮಂಡಿಸಬಹುದು.

ಕಣ್ಣಿಗೆ ಅಂಟಿದ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ನೋಡಿ
ಕಾರ್ಕಳದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ ಸುನಿಲ್‌ ಕುಮಾರ್‌ ರವರು ತನ್ನ ಶಾಸಕತ್ವ ಅವಧಿಯಲ್ಲಿ ರಾಜ್ಯದಲ್ಲಿ ತನ್ನ ಸರ್ಕಾರ ಇರಲಿ, ಇಲ್ಲದಿರಲಿ, ಇಡೀ ಕ್ಷೇತ್ರದಲ್ಲಿ ಬರಪೂರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದು ಕೇವಲ ರಸ್ತೆ ಕಾಮಗಾರಿಗಳಿಗೆ ಸೀಮಿತವಾಗದೇ, ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಕಳ ಅಭಿವೃದ್ಧಿ ಆಗುವಂತೆ ನೋಡಿಕೊಂಡವರು. ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ಉದ್ಯಮ, ಪ್ರವಾಸೋದ್ಯಮ, ರಸ್ತೆ, ಸೇತುವೆ, ನೀರಾವರಿ ಅಷ್ಟೇ ಅಲ್ಲದೇ, ಸರ್ಕಾರದ ಅನುದಾನವನ್ನು ಅವಲಂಬಿಸದೇ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಕೆರೆಗಳ ಅಭಿವೃದ್ಧಿ, ಉದ್ಯೋಗ ಮೇಳ, ಕೋವಿಡ್‌ ಸಂದರ್ಭದಲ್ಲಿ ಕ್ವಾರಂಟೈನ್‌ ಕೇಂದ್ರ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಹಾಗೂ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದವರು. ಇದೆಲ್ಲವನ್ನೂ ಕಣ್ಣಾರೆ ನೋಡಿಯೂ ನೀವು ಕಾರ್ಕಳದಲ್ಲಿ ಅಭಿವೃದ್ಧಿ ಆಗಿಯೇ ಇಲ್ಲ, ಸುನಿಲ್‌ ಕುಮಾರ್‌ ಕೊಡುಗೆ ಕಾರ್ಕಳಕ್ಕೆ ಏನೂ ಇಲ್ಲ ಹೇಳುತ್ತೀರಲ್ಲಾ, ನೀವು ಕಾರ್ಕಳದಲ್ಲಿ ಚುನಾವಣೆ ಬಂದಾಗ ಮಾತ್ರ ಓಡಾಡುತ್ತೀರಿ. ಹಾಗಾಗಿ ನಿಮ್ಮ ಕಣ್ಣಿಗಂಟಿರುವ ರಾಜಕೀಯ ಪೊರೆಯನ್ನು ಕಳಚಿ ಕಾರ್ಕಳದ ಅಭಿವೃದ್ಧಿಯನ್ನು ಒಮ್ಮೆ ನೋಡಿ.

ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೈತಿಕತೆ ನಿಮಗಿಲ್ಲ
ನಮ್ಮ ಶಾಸಕರಾದ ಸುನಿಲ್‌ ಕುಮಾರ್ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ನೀವು ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಅಪಹಾಸ್ಯ ಮಾಡಿದಿರಿ. ಚುನಾವಣೆ ಸಂಧರ್ಭ ಮಸೀದಿಗೆ ತೆರಳಿ ಅಲಲಿಯ ಮುಖಂಡರೊಂದಿಗೆ ಚರ್ಚಿಸುತ್ತಾ ಮಸೀದಿ ಕಟ್ಟಿಸಿ ಕೊಡುವ ಭರವಸೆ ಕೊಟ್ಟಿದ್ದು ಅಲ್ಲದೆ ಈ ವಿಡಿಯೋ ವೈರಲ್‌ ಮಾಡಬೇಡಿ ಎಂದು ಹೇಳಿದ ನಿಮಗೆ ಹಿಂದುತ್ವವಾದಿ ಸುನಿಲ್‌ ಕುಮಾರ್‌ ರವರ ಹಿಂದುತ್ವದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆಯೂ ಇಲ್ಲ.

ಗೆದ್ದ ಎತ್ತಿನ ಬಾಲ ಹಿಡಿಯುವ ಪ್ರವೃತ್ತಿ
ಮಾನ್ಯ ಉದಯ್‌ ಕುಮಾರ್‌ ಶೆಟ್ಟಿ ನೀವು ಈಗಲಾದರೂ ಸುಳ್ಳು ಹೇಳುವುದನ್ನು ಬಿಡಿ, ಜನ ನಿಮ್ಮ ಈ ಎಲ್ಲಾ ವರ್ತನೆಗಳನ್ನು ಗಮನಿಸುತ್ತಾ ಇದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಓಡಾಡುವ ನಿಮ್ಮ ಪ್ರವೃತ್ತಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನತೆ ಕಣ್ಣಾರೆ ಕಂಡಿದ್ದಾರೆ. ಮುಂದೊಂದು ದಿನ ನಿಮ್ಮ ಸುಳ್ಳಿಗೆ, ಇಂತಹ ಅಸಂಬದ್ಧ ಹೇಳಿಕೆಗಳಿಗೆ, ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡಿ ಕಾರ್ಕಳದ ಹೆಸರಿಗೆ ಮಸಿ ಬಳಿದು ಅದರ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿರುವ ನಿಮಗೆ ಕಾರ್ಕಳದ ಪ್ರಬುದ್ಧ ಜನತೆಯೇ ಉತ್ತರಿಸುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English