ಪಿಸಿಯೋಥೆರಪಿ ಚಿಕಿತ್ಸೆಗೆ ತಂತ್ರಜ್ಞಾನದ ಕೊಡುಗೆ ಗಮನಾರ್ಹ” : ತೆಲಂಗಾಣ ಸಚಿವ ಡಿ. ಶ್ರೀಧರ್ ಬಾಬು

9:43 PM, Friday, September 27th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: “ಎಜೆ ಆಸ್ಪತ್ರೆಯ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ಪಿಸಿಯೋಥೆರಪಿ ಕಾನ್ಫರೆನ್ಸ್ ”ಕಾನ್ಫ್ಲುಯೆನ್ಸ್-2024“ ಅನ್ನು ತೆಲಂಗಾಣ ಕೈಗಾರಿಕಾ ಹಾಗೂ ವಾಣಿಜ್ಯ ಸಚಿವ ಡಿ.ಶ್ರೀಧರ್ ಬಾಬು ಅವರು ಶುಕ್ರವಾರ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಅವರು, “ಎಜೆ ಪಿಸಿಯೋಥೆರಪಿ ಕೇಂದ್ರವು 30 ವರ್ಷಗಳ ಸಾರ್ಥಕ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಇದಕ್ಕಾಗಿ ಸ್ಥಾಪಕರಾದ ಎ.ಜೆ. ಶೆಟ್ಟಿ ಅವರನ್ನು ಅಭಿನಂದಿಸುತ್ತೇನೆ. ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಪ್ರತಿನಿಧಿಗಳು ಆಗಮಿಸಿದ್ದಾರೆ. ತಂತ್ರಜ್ಞಾನವು ಸುದ್ದಿಯನ್ನು ಸೃಷ್ಟಿ ಮಾಡುತ್ತದೆ. 1993ರಲ್ಲಿ ಪ್ರಾರಂಭವಾದ ಸಂಸ್ಥೆಯು ಇನ್ನು ಮುಂದೆಯೂ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಲಿ. ಇಂದಿನ ಆವಿಷ್ಕಾರವು ನಾಳೆಯ ದಿನವನ್ನು ನಿರ್ಧರಿಸುತ್ತದೆ” ಎಂದರು.

“ಪಿಸಿಯೋಥೆರಪಿ ಚಿಕಿತ್ಸಾ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸವಾಲುಗಳು ಇದೆ. ತಂತ್ರಜ್ಞಾನ ನಿಮಗೆ ಮುಂದಿನ ದಿನಗಳಲ್ಲಿ ಹೇಗೆ ಸಹಾಯ ಮಾಡುತ್ತೆ, ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತೆ ಅನ್ನೋದನ್ನು ಅರಿಯಲು ಇಂತಹ ಕಾನ್ಫರೆನ್ಸ್ ಪೂರಕವಾಗುತ್ತೆ. ತಂತ್ರಜ್ಞಾನ ಅನ್ನೋದು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿದೆ. ಪಿಸಿಯೋಥೆರಪಿ ವೈದ್ಯರು ದೀರ್ಘ ಕಾಲದವರೆಗೆ ರೋಗಿಯನ್ನು ಗಮನಿಸುತ್ತಿರಬೇಕಾಗುತ್ತೆ. ನಮ್ಮಲ್ಲಿ ಈಗ ರೋಬೋಟಿಕ್ ಡಿವೈಸ್ ಗಳಿವೆ. ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ“ ಎಂದರು.

”ಮುಂದಿನ ಪೀಳಿಗೆ ಪಾರಂಪರಿಕ ಪಿಸಿಯೋಥೆರಪಿ ಚಿಕಿತ್ಸೆಯನ್ನೇ ಬಳಸದೆ ಆಧುನಿಕ ತಂತ್ರಜ್ಞಾನ ಬಳಕೆಯತ್ತ ಗಮನ ಕೊಡಬೇಕು. ಹೊಸ ತಂತ್ರಜ್ಞಾನದ ಬಳಕೆಯಿಂದ ಪಿಸಿಯೋಥೆರಪಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯ“ ಎಂದು ಹೇಳಿದರು.

”ಮಂಗಳೂರು ಸುಂದರ ತಾಣ ಇಲ್ಲಿನ ಬೀಚ್, ನದಿ ಪ್ರವಾಸೋದ್ಯಮ ಅದ್ಭುತವಾಗಿದೆ. ಮಂಗಳಾದೇವಿಯಂತಹ ಹೆಸರಾಂತ ಕ್ಷೇತ್ರಗಳು ಇಲ್ಲಿವೆ. ಇಲ್ಲಿನ ಸಂಸ್ಕೃತಿ ಸಮೃದ್ಧವಾಗಿದೆ. ಇಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರ ಮಧ್ಯೆ ಸಾಮರಸ್ಯವಿದೆ“ ಎಂದು ಅಭಿಪ್ರಾಯಪಟ್ಟರು.

ಡಾ.ಯು.ಟಿ. ಇಫ್ತಿಕರ್ ಅಲಿ ಮಾತಾಡಿ, “ಪಿಸಿಯೋಥೆರಪಿ ವಿದ್ಯಾರ್ಥಿಗಳು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ರಾಜಕೀಯ, ಸಾಮಾಜಿಕ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಖುಷಿಯ ವಿಚಾರ. ಪಿಸಿಯೋಥೆರಪಿ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು” ಎಂದರು.
ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಮಾತನಾಡಿ, “ಪಿಸಿಯೋಥೆರಪಿ ಕ್ಷೇತ್ರಕ್ಕೆ ಇಂದು ದೇಶ ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ. ಪಿಸಿಯೋಥೆರಪಿ ಕಲಿತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಕಾನ್ಫರೆನ್ಸ್ ಗೆ ಆಗಮಿಸಿದ್ದಾರೆ ಅವರಿಗೆ ಧನ್ಯವಾದಗಳು. ವಿದ್ಯಾರ್ಥಿಗಳು ಪ್ರತಿಯೊಂದು ಸೆಷನ್ ನಲ್ಲೂ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಿ“ ಎಂದು ಶುಭ ಹಾರೈಸಿದರು.
ಡಾ.ವಿಶಾಲ್ ರಾವ್ ಮಾತನಾಡಿ, “ಎರಡು ದಿನಗಳ ಕಾಲ ನಡೆಯುವ ಈ ಕಾನ್ಫರೆನ್ಸ್ ಯಶಸ್ವಿಯಾಗಲಿ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಮಾರ್ಗದರ್ಶಿಯಾಗಲಿ” ಎಂದರು.

ಇದೇ ಸಂದರ್ಭದಲ್ಲಿ ತೆಲಂಗಾಣ ಸಚಿವ ಡಿ.ಶ್ರೀಧರ್ ಬಾಬು ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಸಂಘಟಕ ಡಾ.ಅಭಿಲಾಷ್ ಪಿ.ವಿ. ಅವರು ಅತಿಥಿಗಳನ್ನು ಸ್ವಾಗತಿಸಿದರು. ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಕಾಲೇಜ್ ಪ್ರಾಂಶುಪಾಲ ಸಂಜಯ್ ಸ್ಯಾಮ್ಯೂವೆಲ್ ಪ್ರಾಸ್ತಾವಿಕ ಮಾತನ್ನಾಡಿದರು.

ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಎ.ಪ್ರಶಾಂತ್ ಶೆಟ್ಟಿ, ಅಶ್ರಿತ ಪಿ.ಶೆಟ್ಟಿ, ಹರೀಶ್, ಚರಣ್ ಶೆಟ್ಟಿ, ಡಾ.ವೈಶಾಲಿ, ಡಾ.ಅಜಯ್ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಎಸ್ ಕೃಷ್ಣ ಧನ್ಯವಾದ ಸಮರ್ಪಿಸಿದರು.

ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ದೇಶ ವಿದೇಶಗಳ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ. 27ರಂದು ಸಂಜೆ ಸಾಂಸ್ಕೃತಿಕ ಸ್ಪರ್ಧೆ ಜರುಗಲಿದ್ದು, 28ರಂದು ಸಂಜೆ ಮುರಳಿ ಕೃಷ್ಣ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English