ಎಸ್.ಡಿ.ಎಂ. ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆ: ಸುವರ್ಣ ಮಹೋತ್ಸವ ಸಂಭ್ರಮ

3:00 PM, Sunday, October 6th, 2024
Share
1 Star2 Stars3 Stars4 Stars5 Stars
(No Ratings Yet)
Loading...


ಉಜಿರೆ: ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಆಚಾರವಂತರೂ ಆಗಬೇಕು. ಆಗ ಮಾತ್ರ ಕಲಿತ ವಿದ್ಯೆಗೆ ವಿಶೇಷ ಮಾನ್ಯತೆ, ಗೌರವ ಸಿಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭ ಸುವರ್ಣಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರತಿಭೆ, ಶಕ್ತಿ-ಸಾಮರ್ಥ್ಯ ಮತ್ತು ಉತ್ಸಾಹ ಸದುಪಯೋಗ ಮಾಡಿ ಶಿಸ್ತು, ಸಮಯಪಾಲನೆಯೊಂದಿಗೆ ಉತ್ತಮ ಸಂಸ್ಕಾರ ನೀಡಿ ವ್ಯಕ್ತಿತ್ವ ವಿಕಸನ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸ್ಥಳೀಯರ ಸಮಸ್ಯೆಗಳು, ಸವಾಲುಗಳನ್ನು ತಿಳಿದುಕೊಂಡು ಅವರಿಗೆ ನೆರವು ನೀಡಿ ನಾಗರಿಕಪ್ರಜ್ಞೆಯೊಂದಿಗೆ ಸೇವಾ ಮನೋಭಾವ ಹಾಗೂ ಸಾಮಾಜಿಕಸಾಮರಸ್ಯ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. ಕಾಲೇಜಿನ ಘಟಕದ ಸೇವೆ, ಸಾಧನೆ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ರಾಜ್ಯದರಾಷ್ಟ್ರೀಯ ಸೇವಾಯೋಜನಾಧಿಕಾರಿ ಡಾ. ಪ್ರತಾಪ್‌ಲಿಂಗಯ್ಯ ಶುಭಾಶಂಸನೆ ಮಾಡಿ, ಸ್ವಯಂ ಸೇವಕರು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಜೀವನಪರ್ಯಂತ ಸೇವಾಮನೋಭಾವ ಮೈಗೂಡಿಸಿಕೊಂಡು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಜವಾಬ್ಧಾರಿಯುತ ನಾಗರಿಕರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ45 ಲಕ್ಷಕ್ಕೂ ಮಿಕ್ಕಿ ಎನ್.ಎಸ್.ಎಸ್. ಸ್ವಯಂ-ಸೇವಕರಿದ್ದು ರಾಜ್ಯದಲ್ಲಿ ಆರು ಲಕ್ಷ ಸ್ವಯಂ ಸೇವಕರಿದ್ದಾರೆ. ಅಲ್ಲಲ್ಲಿ ನಡೆಯುತ್ತಿರುವ ಕೊಲೆ, ಆತ್ಮಹತ್ಯೆ, ಹಿಂಸೆ, ವರದಕ್ಷಿಣೆ ಪಿಡುಗು, ಮದ್ಯಪಾನ ಮೊದಲಾದ ದುಶ್ಚಟಗಳನ್ನು ತಡೆಯಲು ಸ್ವಯಂಸೇವಕರು ಪ್ರಯತ್ನಿಸಬೇಕು. ಜವಾಬ್ಧಾರಿಯುತ ಸೇವೆಯ ರಾಯಭಾರಿಗಳಾಗಿ ಸಮಾಜಸೇವೆ ಮಾಡಬೇಕು ಎಂದು ಅವರು ಹೇಳಿದರು.

ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕ ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿ ಅವರು ಅಭಿನಂದಿಸಿದರು.

ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾಯೋಜನೆ ಸಂಯೋಜಕ ಡಾ. ಶೇಷಪ್ಪ ಅಮೀನ್ ಮಾತನಾಡಿ, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ೧೦೬ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕಗಳಿದ್ದು ಪ್ರತಿಯೊಂದು ಘಟಕ ಕೂಡಾ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಹಿರಿಯ ರಾಷ್ಟ್ರೀಯ ಸೇವಾಯೋಜನೆ ಅಧಿಕಾರಿಗಳನ್ನು ಮತ್ತು ಸ್ವಯಂ-ಸೇವಕರನ್ನು ಗೌರವಿಸಲಾಯಿತು.

ರವಿ ಕಟಪಾಡಿ ಮತ್ತು ಉಜಿರೆಯ ಮೋಹನ್ ಕುಮಾರ್ ಅವರ ವಿಶೇಷ ಸೇವೆಯನ್ನು ಮನ್ನಿಸಿ ಅವರಿಗೆ “ಸುವರ್ಣ ಸೇವಾರತ್ನ” ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ “ನನಗಲ್ಲ, ನಿನಗೆ” ಎಂಬ ಉತ್ಕೃಷ್ಟ ಧ್ಯೇಯದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕಾಯಕವೇ ಸೇವೆ ಆಗಿದೆ. ಸ್ವಚ್ಛತೆ, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಮೊದಲಾದ ಸೇವಾ ಕಾರ್ಯಗಳ ಮೂಲಕ ಸ್ವಯಂ ಸೇವಕರ ತ್ಯಾಗ ಮನೋಭಾವದ ಸೇವೆಯಿಂದ ಕಾಲೇಜಿನ ಘಟಕಕ್ಕೆ 36 ರಾಜ್ಯಮಟ್ಟದ ಹಾಗೂ ರಾಷ್ಟçಮಟ್ಟದ ಪ್ರಶಸ್ತಿಗಳು ದೊರಕಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಐದು ಕೋಟಿ ರೂ. ಅನುದಾನ ನೀಡಿರುವ ಆಡಳಿತ ಮಂಡಳಿಯನ್ನು ಅವರು ಅಭಿನಂದಿಸಿದರು.

“ಸೇವಾಪಥ” ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಸ್ವಯಂ ಸೇವಕರಾದ ನಿಕ್ಷಿತ್ ಮತ್ತು ಕುಮಾರಿ ದೀಪಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಪ್ರೊ. ದೀಪಾ, ಆರ್.ಪಿ. ಧನ್ಯವಾದವಿತ್ತರು.

ಉಪನ್ಯಾಸಕ ದೀಕ್ಷಿತ್ ರೈ ಮತ್ತು ಕುಮಾರಿ ಸಿಂಚನ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English