ಉಜಿರೆ: ಪ್ರಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವಿದ್ದು ಕೃಷಿ ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಉಜಿರೆಯ ಸೋನಿಯಾ ಯಶೋವರ್ಮ ಹೇಳಿದರು.
ಅವರು ಭಾನುವಾರ ಬೆಳಾಲು ಗ್ರಾಮದ ಅನಂತೋಡಿಯಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಉಜಿರೆಯ ಬದುಕು ಕಟ್ಟೋಣ ತಂಡ, ಬೆಳ್ತಂಗಡಿ ರೋಟರಿಕ್ಲಬ್, ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ, ತಾಲ್ಲೂಕು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇಜಿನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲ. ಆಹಾರದ ಪೋಲು ಹಾಗೂ ಅಪವ್ಯಯ ಮಾಡಬಾರದು ಎಂದು ಸಲಹೆ ನೀಡಿದ ಅವರು ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅವರಲ್ಲಿರುವ ಅಪಾರ ಶಕ್ತಿ-ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರು-ಹಿರಿಯರ ಸಕಾಲಿಕ ಮಾರ್ಗದರ್ಶನದಲ್ಲಿ ಕೃಷಿಗೆ ಬಳಸಬೇಕು. ಕೃಷಿಯಲ್ಲಿ ಭತ್ತದ ಬೀಜ ಬಿತ್ತುವುದು, ನೇಜಿನಾಟಿ, ಅದು ಬೆಳೆದು ಪೈರಾದಾಗ ಕಟಾವು ಮಾಡುವುದು, ಭತ್ತ ತೆಗೆದು ಅಕ್ಕಿ ಪಡೆಯುವುದು ಮೊದಲಾದ ವಿವಿಧ ಹಂತಗಳಲ್ಲಿ ನಾವು ಪಡೆಯುವ ಸಂತೋಷ, ತೃಪ್ತಿ, ನೆಮ್ಮದಿ ಅನುಭವಿಸಿದಾಗ ಮಾತ್ರ ಅದರ ಸೊಗಡನ್ನು ತಿಳಿಯಬಹುದು ಎಂದು ಅವರು ಹೇಳಿದರು.
ಪ್ರಕೃತಿ ಮತ್ತು ಭೂಮಿಯನ್ನು ನಾವು ತಾಯಿ, ದೇವರು ಎಂದು ಆರಾಧಿಸುವುದು ಕೃಷಿ ಸಂಸ್ಕೃತಿಯ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟರು.
ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನೇಜಿನಾಟಿ ತಯಾರಿ ಬಗ್ಯೆ ಮಾಹಿತಿ ನೀಡಿದರು.
ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ನೇಜಿನಾಟಿಯಲ್ಲಿ ಭಾಗವಹಿಸಿದರು.
ಎಸ್.ಡಿ.ಎಂ. ಕಾಲೇಜಿನ 750 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನೇಜಿನಾಟಿಯಲ್ಲಿ ಭಾಗವಹಿಸಿದರು.
ನಾಲ್ಕು ಗದ್ದೆಗಳಲ್ಲಿ ನಾಲ್ಕು ಪ್ರತ್ಯೇಕ ತಂಡಗಳಲ್ಲಿ ನೇಜಿನಾಟಿ ಮಾಡಲಾಯಿತು.
ಉಜಿರೆಯ ಸಂತೋಷ್ ಮತ್ತು ಶ್ರೀಕಾಂತರ ಅಲಂಕರಿಸಿದ ಕೋಣಗಳ ಜೋಡಿಯನ್ನು ಗದ್ದೆಗೆ ಇಳಿಸಿ, ಪ್ರಸಾದ ಹಾಕಿ ನೇಜಿನಾಟಿಗೆ ಚಾಲನೆ ನೀಡಲಾಯಿತು.
ಶುಭಾಶಂಸನೆ ಮಾಡಿದ ಶಾಸಕ ಹರೀಶ್ ಪೂಂಜ ಶಿಸ್ತು ಮತ್ತು ಬದ್ಧತೆಗೆ ಹೆಸರಾದ ಬದುಕು ಕಟ್ಟೋಣ ತಂಡದವರು ಕೃಷಿ ಸಂಸ್ಕöÈತಿಯನ್ನು ಯುವಜನತೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭತ್ತದತಳಿ ತಜ್ಞ, ಕೃಷಿಋಷಿ ಬಿ.ಕೆ. ದೇವರಾವ್ ಅವರನ್ನು ಗೌರವಿಸಲಾಯಿತು.
ಶರತ್‌ಕೃಷ್ಣ ಪಡ್ವೆಟ್ನಾಯ, ವಕೀಲ ಬಿ.ಕೆ. ಧನಂಜಯ ರಾವ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ, ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ರವೀಶ್ ಪಡುಮಲೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಶ್ರೀನಿವಾಸ ಗೌಡ, ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ, ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಮತ್ತು ದೀಪಾ, ಆರ್.ಪಿ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಎಚ್. ಉಪಸ್ಥಿತರಿದ್ದು ನೇಜಿನಾಟಿಗೆ ಸಹಕರಿಸಿದರು.
ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರಣ್‌ವರ್ಮ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ತಿಮ್ಮಯ್ಯ ನಾಯ್ಕ ಕೊನೆಯಲ್ಲಿ ಧನ್ಯವಾದವಿತ್ತರು.
Click this button or press Ctrl+G to toggle between Kannada and English