ಪ್ಯಾಲೆಸ್ತೀನ್ ಮೇಲಿನ ಧಾಳಿ ವಿರೋಧಿಸಿ, ಕದನ ವಿರಾಮಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಎಡಪಕ್ಷಗಳ ಪ್ರತಿಭಟನೆ

10:55 PM, Monday, November 4th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಪ್ಯಾಲೆಸ್ತೀನ್ ವಿರುದ್ದ ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ, ತಾಯ್ನೆಲದ ವಿಮೋಚನೆಗೆ ಹಂಬಲಿಸುತ್ತಿರುವ ಅಸಹಾಯಕ ಪ್ಯಾಲೆಸ್ತೀಯರ ನರಮೇಧ. ಯುದ್ಧ ನಿಯಮಗಳು, ವಿಶ್ವಸಂಸ್ಥೆಯ ಠರಾವುಗಳನ್ನು ಉಲ್ಲಂಘಿಸಿ ಇಸ್ರೇಲ್ ಗಾಝಾ ಮೇಲೆ ಧಾಳಿ ನಡೆಸುತ್ತಿದೆ. ಮಧ್ಯಪ್ರಾಚ್ಯ ಪೆಟ್ರೋಲಿಯಂ ಉತ್ಪನ್ನದ ಮೇಲಿನ ಹಿಡಿತಕ್ಕಾಗಿ ಅಮೆರಿಕಾ ಇಸ್ರೇಲ್ ಪರವಾಗಿ ನಿಂತು ಎಲ್ಲಾ ರೀತಿಯ ಬೆಂಬಲವನ್ನು ಒದಗಿಸುತ್ತಿದೆ‌. ಇದು ಖಂಡನೀಯ, ಇದರಿಂದಾಗಿ ಇಡೀ ಜಗತ್ತಿನ ಮೇಲೆ ಯುದ್ಧದ ಕಾರ್ಮೋಡ ಹರಡಿದೆ. ಎಡಪಕ್ಷಗಳು ಭಾರತ ಮಾತ್ರ ಅಲ್ಲ ಇಡೀ ಜಗತ್ತಿನಲ್ಲಿ ಈ ಸಾಮ್ರಾಜ್ಯ ಶಾಹಿ ಯುದ್ಧದ ವಿರುಧ್ದ ಪ್ರತಿಭಟನೆ ನಡೆಸುತ್ತಿದೆ. ಇಸ್ರೇಲ್ ನೆಲದಲ್ಲೂ ಅಲ್ಲಿನ ಕಮ್ಯುನಿಸ್ಟ್ ಪಕ್ಷಗಳು ಪ್ರತಿಭಟನೆ ನಡೆಸಿವೆ, ಈ ಮಾನವೀಯ ಬಿಕ್ಕಟ್ಟಿನ ವಿರುದ್ಧ ಇಡೀ ಜಗತ್ತು ಒಂದಾಗಿ ನಿಲ್ಲಬೇಕಿದೆ ಎಂದು ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು ಹೇಳಿದರು. ಅವರು ಇಸ್ರೇಲ್, ಪ್ಯಾಲೆಸ್ತೀನ್ ಮೇಲೆ ನಡೆಸುತ್ತಿರುವ ಅಮಾನವೀಯ ಧಾಳಿಯನ್ನು ವಿರೋಧಿಸಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ವಿರಾಮಕ್ಕೆ ಆಗ್ರಹಿಸಿ ಸಿಪಿಐ, ಸಿಪಿಎಂ ಜಿಲ್ಲಾ ಸಮಿತಿಗಳು ಜಂಟಿಯಾಗಿ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಎಚ್ ವಿ ರಾವ್ ಮಾತನಾಡುತ್ತಾ, ಜಾಗತಿಕ ಶಾಂತಿಗಾಗಿ ನಾವು ಆಗ್ರಹಿಸುತ್ತೇವೆ. ಭಾರತ ದೇಶವು ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ಅತಿಕ್ರಮಣದ ಆರಂಭದ ದಿನಗಳಿಂದಲೂ ಪ್ಯಾಲೆಸ್ತೀನ್ ಜನತೆಯ ತಾಯ್ನೆಲದ ಹಕ್ಕಿನ ಪರವಾಗಿ ನಿಂತಿದೆ. ಜಗತ್ತಿನಲ್ಲಿ ಇಸ್ರೇಲ್ ನಷ್ಟು ಯುದ್ಧದಾಹಿ ದೇಶ ಇನ್ನೊಂದಿಲ್ಲ. ಅದು ಅಷ್ಟೊಂದು ಯುದ್ದಗಳನ್ನು ಮಾಡಿದೆ.‌ ಪ್ಯಾಲೆಸ್ತೀನ್ ವಿರುದ್ಧ ಒಟ್ಟು ಆರು ಯುದ್ಧಗಳನ್ನು ನಡೆಸಿರುವ ಇಸ್ರೇಲ್ ನ ಅತಿಕ್ರಮಣ, ಯುದ್ಧದಾಹಕ್ಕೆ ಎಣೆಯಿಲ್ಲ. ಪ್ಯಾಲೆಸ್ತೀನ್ ಪರವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಅದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಸ್ವಾಗತಿಸಿ, ಸಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿ ಸೀತಾರಾಮ ಬೇರಿಂಜೆ ವಂದಿಸಿದರು. ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯರಾದ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಸುರೇಶ್ ಬಂಟ್ವಾಳ, ತಿಮ್ಮಪ್ಪ ಕಾವೂರು ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸ್ ನೋಟೀಸು, ಧ್ವನಿವರ್ಧಕ ತ್ಯಜಿಸಿ ಪ್ರತಿಭಟನಾ ಸಭೆ ನಡೆಸಿದ ಎಡಪಕ್ಷಗಳು

ಒಂದು ವಾರಕ್ಕೆ ಮುಂಚಿತವಾಗಿಯೆ ಪ್ರತಿಭಟನೆಯ ಮಾಹಿತಿ ನೀಡಿ, ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಅರ್ಜಿಸಲ್ಲಿಸಲಾಗಿದ್ದರು, ಕಾನೂನು ಸುವ್ಯವಸ್ಥೆ ಡಿಸಿಪಿ ಇಂದು ಮಧ್ಯಾಹ್ನ ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಸಿಪಿಐಎಂ ಕಚೇರಿಗೆ ನೋಟಿಸು ಜಾರಿಗೊಳಿಸಿದ್ದರು. ಕಾನೂನು ಸುವ್ಯವಸ್ಥೆಯ ಕಾರಣವನ್ನು ಮುಂದೊಡ್ಡಿದ್ದರು‌ ಆದರೂ ಪ್ರತಿಭಟನೆ ರದ್ದುಗೊಳಿಸಲು ನಿರಾಕರಿಸಿದ ಎಡಪಕ್ಷಗಳ ನಾಯಕರು, ಧ್ವನಿ ವರ್ಧಕ ಬಳಸದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು‌. ಅದಕ್ಕೂ ಅವಕಾಶ ಇಲ್ಲ, ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದರು. ಈ ಎಚ್ಚರಿಕೆಗೆ ಮಣಿಯದ ಎಡಪಕ್ಷಗಳು ಪ್ರತಿಭಟನಾ ಸಭೆಯನ್ನು ತೀರ್ಮಾನದಂತೆ ನಡೆಸಿದರು. ಪೊಲೀಸ್ ಇಲಾಖೆಯ ಈ ನಡೆಯನ್ನು, ಪ್ಯಾಲೆಸ್ತೀನ್ ನಾಗರಿಕರ ಮೇಲಿನ ಬರ್ಬರ ಧಾಳಿಯ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಿರಾಕರಿಸುವ ನಿಲುವನ್ನು ಸಭೆಯಲ್ಲಿ ಬಲವಾಗಿ ಖಂಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English