ಮಂಗಳೂರು : ಪಾಂಡು ಪೈ ಹಂತಕ ಬಿಜೈ ರಾಜಾ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೋರೇಟರ್ ರೊಬ್ಬರ ಕೈವಾಡ ಇರುವುದು ದೃಢಪಟ್ಟಿದೆಯಾದರೂ ಅವರನ್ನು ರಕ್ಷಿಸಲು ಪೊಲೀಸರು ಬಿಜೈ ರಾಜಾ ಹತ್ಯೆ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರದಲ್ಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಈಗಾಗಲೇ ಬಂಧಿಸಿದವರನ್ನು ಹೊರತುಪಡಿಸಿ ಮತ್ಯಾರನ್ನೂ ಬಂಧಿಸಬಾರದು ಎನ್ನುವ ಒಪ್ಪಂದ ಮೂಲಕ ಬಿಜೈ ರಾಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಪೆ ಪ್ರದೀಪ್ ಮತ್ತು ಕಿರಣ್ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಮಾತ್ರ ಮಲ್ಪೆ ಪ್ರದೀಪ್ ಹಾಗೂ ಕಿರಣ್ ನನ್ನು ಕಂಕನಾಡಿ ರೈಲು ನಿಲ್ದಾಣದ ಬಳಿ ಮುಂಜಾನೆ 4.30 ರ ಸುಮಾರಿಗೆ ಬಂಧಿಸಿದ್ದೇವೆ ಎನ್ನುತ್ತಿರುವುದು ಶಂಕೆಗೆ ಕಾರಣವಾಗಿದೆ.
ಬಿಜೈ ರಾಜಾ ಕೊಲೆಯ ಹಿಂದೆ ಬಿಜೆಪಿಯ ಕೆಲವು ಪ್ರಮುಖರು ಕೆಲಸ ಮಾಡಿರುವುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಈ ಸಂಬಂಧ 27 ಮಂದಿಯ ಹೆಸರು ಕೊಲೆ ಪ್ರಕರಣದ ತನಿಖಾ ಕಡತದಲ್ಲಿ ದಾಖಲಿಸಲ್ಪಟ್ಟಿದೆ. ಆದರೆ ಇದೀಗ 9 ಮಂದಿಯ ಬಂಧನ ಮಾಡಿರುವ ಪೊಲೀಸರು ಇನ್ನುಳಿದವರನ್ನು ಬಂಧಿಸದೆ ಈ ಪ್ರಕರಣಕ್ಕೆ ಇತಿಶ್ರೀ ಹಾಡಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದಲೇ ತಿಳಿದು ಬಂದಿದೆ.
ಬಿಜೈ ರಾಜಾ ಕೊಲೆಗೆ ಸ್ಕೆಚ್ ರೂಪುಗೊಂಡಿರುವುದು ಕೋಡಿಕಲ್ ಮೈದಾನದ ಒಂದು ಮೂಲೆಯಲ್ಲಿ. ಈ ಸಭೆಯನ್ನು ವ್ಯವಸ್ಥೆ ಮಾಡಿರುವುದು ಕೋಡಿಕಲ್ ನ ಇಬ್ಬರು ಬಿಜೆಪಿ ಪ್ರಮುಖರು. ಈ ಸಭೆಗೆ ಕಾರ್ಪೋರೇಟರ್ ಕೆಂಪು ಬಣ್ಣದ ಮಾರುತಿ ಓಮಿನಿ ಕಾರಿನಲ್ಲಿ ಬಂದಿದ್ದರು. ಈ ಮಾಹಿತಿ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ಇದಲ್ಲದೆ ಕೊಲೆ ಮಾಡಿದ ಬಳಿಕ ಆರೋಪಿ ಗಳು ಪರಾರಿಯಾಗಲು ಒಬ್ಬ ವಕೀಲರ ಡಸ್ಟರ್ ಕಾರನ್ನು ವ್ಯವಸ್ಥೆ ಮಾಡಿಕೊಟ್ಟಿ ರುವುದೂ ಇದೇ ಕಾಪರ್ೊರೇಟರ್ ಎನ್ನುವುದು ಪೊಲೀಸ್ ಕಡತದಲ್ಲಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟಿರುವ ಪೊಲೀಸರು ಬಿಜೆಪಿ ಪ್ರಮುಖರ ಹೆಸರನ್ನು ಬಿಟ್ಟು ಹೊಸ ಫೈಲ್ ತಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೈ ರಾಜಾನನ್ನು ಹತ್ಯೆ ಮಾಡಿದ ಬಳಿಕ ಪ್ರದೀಪ್ ಮಲ್ಪೆ ಮತ್ತು ಕಿರಣ್ ಅಲಿಯಾಸ್ ಅಚ್ಚುತ ಸುಳ್ಯದ ಹಳ್ಳಿಯೊಂದರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು. ಪೊಲೀಸರ ಜೊತೆ ಮಾತುಕತೆ ನಡೆಸಿ ಇವರನ್ನು ಶರಣಾಗತಿ ಮಾಡಿಸುವಲ್ಲಿ ಯಶಸ್ಸಾಗಿದ್ದು ನಗರದ ಖ್ಯಾತ ವಕೀಲರೊಬ್ಬರು. ಸುಳ್ಯದ ಮನೆಯಿಂದ ಇವರನ್ನು ರಾತ್ರೋ ರಾತ್ರಿ ತನ್ನದೇ ಕಾರಿನಲ್ಲಿ ಕರೆತಂದ ವಕೀಲರು ಅವನ್ನು ಮೇರಿಹಿಲ್ ಹೆಲಿ ಪ್ಯಾಡ್ ಬಳಿ ಇರುವ ಮನೆಯೊಂದರಲ್ಲಿ ಇರಿಸಿ ಬಳಿಕ ಮುಂಜಾನೆ 4.30ರ ಸುಮಾರಿಗೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಕರೆತಂದು ಅಲ್ಲಿ ಪೊಲೀಸರಿಗೆ ಸರೆಂಡರ್ ಮಾಡಿಸಿದ್ದರು.
ಈ ವೇಳೆ ಒಂದು ಒಪ್ಪಂದ ನಡೆದಿದ್ದು ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸ ಬಾರದು ಮತ್ತು ಯಾರ ಹೆಸರೂ ಸೇರಿಸಬಾರದು ಎನ್ನುವ ಮಾತುಕತೆ ನಡೆದಿತ್ತು. ಇದಕ್ಕೆ ಸೈ ಎಂದ ಪೊಲೀಸರು ಪ್ರದೀಪ್ ಹಾಗೂ ಕಿರಣ್ ನನ್ನು ವಶಕ್ಕೆ ತೆಗೆದುಕೊಂಡು ನಾವು ಬಂಧಿಸಿದೆವು ಎಂಬ ಹೇಳಿಕೆ ನೀಡಿದರು. ಅದೇ ಕೊನೆ ಮತ್ಯಾರನ್ನೂ ಪೊಲೀಸರು ಬಂಧಿಸಲೇ ಇಲ್ಲ. 27 ಮಂದಿಯ ಹೆಸರು ಅದರಲ್ಲಿ ಮೂವರು ಬಿಜೆಪಿ ಪ್ರಮುಖರು ಒಬ್ಬ ಕಾರ್ಪೋರೇಟರ್ ಹೆಸರು ಇದ್ದರೂ ಪೊಲೀಸರು ಅದೆಲ್ಲವನ್ನೂ ಮರೆ ಮಾಚಿ 9 ಮಂದಿ ಆರೋಪಿಗಳೇ ಈ ಕೊಲೆ ಹಿಂದೆ ಇದ್ದದ್ದು ಎನ್ನುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಆರೋಪಿಗಳು ಪರಾರಿಯಾಗಲು ಡಸ್ಟರ್ ಕಾರು ನೀಡಿದ್ದ ವಕೀಲನೂ ಬಚಾವ್ ಆಗುವಂತಾಗಿದೆ.
ಈಗಾಗಲೇ ಬಂಧನಕ್ಕೊಳಪಟ್ಟು ಜೈಲಿನಲ್ಲಿರುವ ಜೈಸನ್ ಡಿ’ಸೋಜಾ, ದೀಕ್ಷಿತ್ ದೇವಾಡಿಗ, ನಿತೇಶ್ ಕುಮಾರ್, ಅವಿನಾಶ್, ಚಂದು ಅಲಿಯಾಸ್ ಚಂದ್ರ ಶೆಟ್ಟಿ, ಅಚ್ಯುತ ಅಲಿಯಾಸ್ ಕಿರಣ್, ವಿಜಯ ಕುಮಾರ್ ಮತ್ತು ಪ್ರದೀಪ್ ಇವರಷ್ಟೇ ಆರೋಪಿಗಳಾಗಿ ಅಂತಿಮಗೊಳ್ಳುವ ಹುನ್ನಾರ ಸಿದ್ದವಾಗಿದ್ದು ಕಾರ್ಪೋರೇಟರ್ ಸೇಫ್ ಆಗುವ ಲಕ್ಷಣ ಕಂಡು ಬಂದಿದೆ.
Click this button or press Ctrl+G to toggle between Kannada and English