ಮಂಗಳೂರು : ನಂದಿನಿ ಮತ್ತು ಶಾಂಭವಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರಿ ತ್ರಿವೇಣಿ ಸಂಗಮದ ಕೇಂದ್ರ ಬಿಂದು ಎಣಿಸಿರುವ ಸಸಿಹಿತ್ಲು ಎಂಬ ಪುಟ್ಟ ಗ್ರಾಮಕ್ಕೆ ತನ್ನ ಅಜ್ಞಾತವಾಸ ಮತ್ತೂ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಕಡೆ ನದಿ ಕಡಲಿನ ತ್ರಿವೇಣಿ ಸಂಗಮದ ಅಳಿವೆ ಬಾಗಿಲು, ಸಸಿಹಿತ್ಲು ಕಡೆಯ ಜಾಗವನ್ನು ಕಬಳಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ಮೂರು ದಶಕದಿಂದ ಭರವಸೆಯಾಗಿರುವ ಸಸಿಹಿತ್ಲು ನಂದಿನಿ ನದಿ ಸೇತುವೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ.
ಪ್ರವಾಸೋದ್ಯಮದ ಪಟ್ಟಿಯಲ್ಲಿ ಹೆಸರು ಪಡೆದಿರುವ ಸಸಿಹಿತ್ಲು ಗ್ರಾಮದತ್ತ ಪ್ರವಾಸೋದ್ಯಮ ಇಲಾಖೆ ಕಣ್ಣೇತ್ತಿಯೂ ನೋಡುತ್ತಿಲ್ಲ. ದಿನವೊಂದಕ್ಕೆ ನೂರಾರು ಪ್ರವಾಸಿಗರು ಸಸಿಹಿತ್ಲಿಗೆ ಆಗಮಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳಿಗೆ ಸಸಿಹಿತ್ಲು ಎಲ್ಲಿ ಎನ್ನುವ ಅರಿವೂ ಕೂಡಾ ಇಲ್ಲ ಎನ್ನುವುದು ದುರಾದೃಷ್ಟಕರ. ಒಂದು ಕಡೆ ಕಟೀಲಿನ ತಟದಿಂದ ಹರಿದು ಬರುತ್ತಿರುವ ನಂದಿನಿ ನದಿ ಮತ್ತೊಂದು ಕಡೆ ಬಪ್ಪ ನಾಡಿನಿಂದ ಮುನ್ನುಗಿ ಬರುವ ಶಾಂಭವಿ ಇವೆರಡೂ ಕೂಡುವುದು ಸಸಿಹಿತ್ಲಿನ ಅಳಿವೆಯಲ್ಲಿ.
ಈ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯ ಎಂಡ್ ಪಾಯಿಂಟ್ ಕೂಡಾ ಹೌದು. ಅಳಿವೆಯ ಆ ಭಾಗ ಉಡುಪಿ ಜಿಲ್ಲೆಯ ಹೆಜಮಾಡಿ. ಈ ಪ್ರದೇಶದಲ್ಲಿ ಬಂದರು ನಿರ್ಮಾಣಕ್ಕೆ ಸರಕಾರ ಯೋಜನೆ ರೂಪಿಸುತ್ತಿದೆ. ಇದರ ಮೊದಲ ಹಂತವಾಗಿ ನದಿಯಲ್ಲಿ ಡ್ರಜ್ಜಿಂಗ್ ಕೆಲಸ ನಡೆಯುತ್ತಿದೆ. ಅಳಿವೆ ಭಾಗದ ಹೊಗೆಯನ್ನು ತೆಗೆದು ಹೆಜಮಾಡಿ ಪ್ರದೇಶದಲ್ಲಿ ಸಂಗ್ರಹ ಮಾಡುತ್ತಿರುವ ಕಾರಣ ಅಳಿವೆ ಸಸಿಹಿತ್ಲು ಪ್ರದೇಶದದತ್ತ ತನ್ನ ಮೂಲ ಸ್ಥಾನವನ್ನು ಬದಲಾವಣೆಗೊಳಿಸಿದೆ. ಈಗಾಗಲೇ ಮೂರು ಎಕ್ರೆಯಷ್ಟು ವಿಶಾಲ ಪ್ರದೇಶ ಸಮುದ್ರ ಪಾಲಾಗಿದೆ.
ಒಂದು ಕಿಲೋಮೀಟರ್ ಮಣ್ಣಿನ ಕಚ್ಚಾ ರಸ್ತೆ ನೀರಲ್ಲಿ ಕೊಚ್ಚಿ ಹೋಗಿದೆ. ನೂರಾರು ಗಾಳಿ ಮರವೂ ಸಮುದ್ರಕ್ಕೆ ಆಹಾರವಾಗಿದೆ. ಕೇವಲ ಒಂದೇ ವರುಷದಲ್ಲಿ ಈ ಬದಲಾವಣೆ ಕಂಡು ಬಂದಿದ್ದು ಇದೇ ಪರಿಸ್ಥಿತಿ ಇನ್ನೂ ಮುಂದುವರಿದರೆ ಸಸಿಹಿತ್ಲಿನ ನೂರಾರು ಮನೆಗಳೂ ಅಳಿವೆಯಲ್ಲಿ ಲೀನವಾಗುವ ಸಾಧ್ಯತೆ ನಿಚ್ಚಲವಾಗಿದೆ.
ಮೂರು ಸುತ್ತಲೂ ನೀರಿನಿಂದ ಆವೃತ್ತವಾಗಿರುವ ಸಸಿಹಿತ್ಲು ಗ್ರಾಮವನ್ನು ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಲು ಏಕೈಕ ರಸ್ತೆ ಮಾರ್ಗವಿದ್ದು ಈ ರಸ್ತೆಯೂ ಸಮುದ್ರ ಮತ್ತು ನದಿ ಭಾಗದಿಂದ ಕೇವಲ ನೂರು ಮೀಟರ್ ಅಂತರದಲ್ಲಿದ್ದು ಒಂದೊಮ್ಮೆ ನದಿ ಅಥವಾ ಸಮುದ್ರ ನೀರು ಉಕ್ಕಿ ಬಂದರೂ ಸಸಿಹಿತ್ಲು ಗ್ರಾಮ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಸಂಪೂರ್ಣವಾಗಿ ದ್ವೀಪ ಪ್ರದೇಶವಾಗಿ ಬಿಡುತ್ತದೆ.
ಹೀಗಾಗಿ ನಮಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಇಲ್ಲಿನ ಜನ ಮೂರು ದಶಕದಿಂದ ಜನಪ್ರತಿನಿಧಿಗಳನ್ನು ಮತ್ತು ಸರಕಾರವನ್ನು ಕೇಳುತ್ತಲೆ ಬಂದಿದ್ದಾರೆ. ಜನಪ್ರತಿನಿಧಿಗಳೂ ಭರವ ಸೆಗಳ ಕಾಗೆಯನ್ನು ಹಾರಿಸುತ್ತಲೇ ಬಂದಿದ್ದಾರೆ. ಪ್ರತಿ ವರುಷವೂ ಇಲ್ಲಿನ ಶಾಸಕರು ಸೇತುವೆ ನಿರ್ಮಾಣಕ್ಕೆ ಅಸ್ತು ಎನ್ನುತ್ತಾರೆ ಹಣ ಬಿಡುಗಡೆ ಆಗಿದೆ ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ. ಅವರು ಈ ಭರವಸೆ ನೀಡಲು ಆರಂಭಿಸಿ ಏಳು ವರುಷವೇ ಕಳೆದಿದೆ ಆದರೆ ಒಂದೇ ಒಂದು ಗಜ ಕಂಬವೂ ಇಲ್ಲಿಗೆ ಬಿದ್ದಿಲ್ಲ.
ಕೆಲ ವರುಷದ ಹಿಂದೆ ತೂಗು ಸೇತುವೆಗೆ ಸರಕಾರ ಅಸ್ತು ಎಂದಿತ್ತು. ಅದರ ಹಣವು ಬಿಡುಗಡೆಗೊಂಡು ಕೆಲಸವೂ ಆರಂಭವಾಗಿತ್ತು. ಆದರೆ ಪಿಲ್ಲರ್ ಬೀಳುವಷ್ಟರಲ್ಲಿ ಜಾಗದ ತಕರಾರು ಎದುರಾಗಿ ಸೇತುವೆಗೆ ನ್ಯಾಯಾಲಯದ ತಡೆಯಾಜ್ಞೆ ಜಾರಿಯಾಯಿತು. ಹೀಗಾಗಿ ತೂಗು ಸೇತುವೆ ಕನಸಾಗಿ ಉಳಿಯಿತು. ಆ ಬಳಿಕ ಸಸಿಹಿತ್ಲಿನಿಂದ ನೇರವಾಗಿ ಹಳೆಯಂಗಡಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಯೋಜನೆ ಸಿದ್ದವಾಯಿತು. ಒಂದು ದಶಕದ ಹಿಂದೆ ಇದಕ್ಕಾಗಿ ಹಣವೂ ಬಿಡುಗಡೆಯಾಯಿತು ಆದರೆ ಜಾಗದ ಸರ್ವೆ ಕೆಲಸ ಪೂರ್ಣಗೊಳ್ಳದ ಕಾರಣ ಈ ಸೇತುವೆ ಮುಲ್ಕಿ ಚಿತ್ರಾಪಿಗೆ ಸ್ಥಳಾಂತರ ಗೊಂಡು ಅಲ್ಲಿ ಸಸಿಹಿತ್ಲು ಸೇತುವೆ ಎನ್ನುವ ಹೆಸರಿನಲ್ಲೇನಿರ್ಮಾಣ ವಾಗಿತು. ಹೀಗಾಗಿ ಸಸಿಹಿತ್ಲು ಜನರಿಗೆ ಎರಡನೇ ಬಾರಿಯೂ ಕೈಗೆ ಸಿಕ್ಕಿದ್ದು ಬಾಯಿಗಿಲ್ಲ ಎನ್ನುವ ಸ್ಥಿತಿ ಬಂದಿತ್ತು.
ಈ ಗ್ರಾಮದ ಹಳೆ ವಿದ್ಯಾರ್ಥಿ ಸಂಘ, ಯುವಕ-ಯುವತಿ ಮಂಡಲ, ಉತ್ಥಾನ ಬಳಗ ಮುಂತಾದ ಸೇವಾ ಸಂಸ್ಥೆಗಳು ಗ್ರಾಮದ ಅಭಿವೃದ್ದಿಗಾಗಿ ಶ್ರಮಿಸುತ್ತಲೇ ಬಂದಿದೆ ಆದರೆ ಕನಸ್ಸು ಕನಸ್ಸಾಗಿಯೇ ಉಳಿದಿದೆ. ಈ ಬಾರಿ ಮತ್ತೆ ಸೇತುವೆಯ ಕನಸಿಗೆ ಸರಕಾರ ನೀರೆರೆದಿದೆ ಪರಿಣಾಮ ಮಾತ್ರ ವ್ಯಕ್ತವಾಗಿಲ್ಲ. ಸುಮಾರು ಐನೂರರಷ್ಟು ಮನೆಗಳಿರುವ ಈ ಗ್ರಾಮ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಕೊನೆಯ ಗ್ರಾಮವೂ ಹೌದು. ಇಲ್ಲಿನ ಯುವಕ ಮತ್ತು ಯುವತಿ ಮಂಡಲ ಎರಡೂ ಸಂಸ್ಥೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದು ಒಂದೇ ಗ್ರಾಮದ ಎರಡು ಸಂಸ್ಥೆ ರಾಜ್ಯ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಗ್ರಾಮ ಇದು. ನಿಟ್ಟೆ ವಿದ್ಯಾ ಸಂಸ್ಥೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಇಲ್ಲಿನ ಗ್ರಾಮದ ಎಲ್ಲರಿಗೂ ಉಚಿತ ಆರೋಗ್ಯ ಸೇವೆಯನ್ನು, ಆರಂಭಿಸಲಾಗಿದ್ದು ಒಂದು ವೈದ್ಯರು ವಾರದ ಎಲ್ಲಾ ದಿನ ಇಲ್ಲಿ ಲಭ್ಯರಿದ್ದಾರೆ. ಗ್ರಾಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಇಲ್ಲಿನ ಸೇವಾ ಸಂಸ್ಥೆಗಳು ಮಾಡಿಕೊಂಡಿರುವ ಕಾರಣದಿಂದಲೋ ಏನೋ ಸರಕಾರ ಮತ್ತು ಜನಪ್ರತಿನಿಧಿಗಳು ಸಸಿಹಿತ್ಲ ಬಗ್ಗೆ ಆಸ್ಥೆವಹಿಸಿಕೊಳ್ಳುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ. ಸಸಿಹಿತ್ಲು ಗ್ರಾಮದ ಕೊನೆ ಭಾಗದಲ್ಲಿ ಪಂಚಾಯ್ತಿ ಮತ್ತು ಅರಣ್ಯ ಇಲಾಖೆಯ ಅಧೀನದಲ್ಲಿರುವ ಎರಡು ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಗಾಳಿ ಮರದ ನೆಡುತೋಪು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದ್ದು ತಡ ರಾತ್ರಿಯೂ ಇಲ್ಲಿಗೆ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಇಷ್ಟೆಲ್ಲ ಇದ್ದರೂ ಗ್ರಾಮ ಇನ್ನೂ ಸರಕಾರದ ಇಲಾಖೆಗಳಲ್ಲಿ ಅಜ್ಞಾತವಾಗಿಯೇ ಉಳಿದಿದೆ ಅದಕ್ಕೆ ಎಂದು ಮುಕ್ತಿ ಎನ್ನುವುದು ಜನರ ಪ್ರಶ್ನೆ.
Click this button or press Ctrl+G to toggle between Kannada and English