ಆಡಳಿತ ವಿವಾದದಲ್ಲಿ ನಿರಾಭರಣೆಯಾದ ಮಾರಿಯಮ್ಮ

12:26 PM, Tuesday, February 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

Urva Mariyammaಮಂಗಳೂರು : ಭಕ್ತರು ನೀಡಿದ ನೂರಾರು ಕೆ.ಜಿ.ಯ ಚಿನ್ನದ ಆಭರಣಗಳಿದ್ದರೂ ಅದನ್ನು ತೊಡುವ ಅವಕಾಶ ಇಲ್ಲದೆ ಉರ್ವ ಮಾರಿ ಯಮ್ಮ ಹೂವಿನ ಅಲಂಕಾರದಿಂದ ನಿತ್ಯ ಸೇವೆ ಪಡೆಯುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ತನ್ನ ಮೇಲಿನ ನಂಬಿಕೆಯನ್ನು ಉಳಿಸಿ ಕೊಳ್ಳಲಾಗದೆ ಅಧಿಕಾರ ಕಳೆದುಕೊಂಡಿರುವ ಇಲ್ಲಿನ ಹಿಂದಿನ ಆಡಳಿತ ಮೊಕ್ತೇಸರರ ಮೊಂಡು ವಾದದಿಂದಾಗಿ ಉರ್ವ ಮಾರಿಯಮ್ಮ ನಿರಾಭರಣೆಯಾಗಿ ಪೂಜೆ ಪಡೆಯುತ್ತಿದ್ದಾಳೆ. ಈ ಬಗ್ಗೆ ದೇವಿ ಬಳಿಯೇ ಭಕ್ತರು ದೂರು ನೀಡಿದಾಗ ನನ್ನ ಆಭರಣವನ್ನು ನನಗೆ ಬೇಕೆಂದಾಗ ನಾನೇ ತರಿಸಿಕೊಂಡು ತೊಡುತ್ತೇನೆ ಎಂದು ಅಭಯ ನೀಡಿದ್ದಳಾದರೂ ಭಕ್ತರು ಮಾತ್ರ ಸಂಕಷ್ಟಕ್ಕೀಡಾಗಿದ್ದಾರೆ.

ಈ ಬಗ್ಗೆ ಭಕ್ತರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಏಳು ಗ್ರಾಮ ಮೊಗವೀರರ ಆಡಳಿತಕ್ಕೆ ಒಳಪಟ್ಟಿರುವ ಉರ್ವ ಮಾರಿಯಮ್ಮ ದೇವ ಸ್ಥಾನದಲ್ಲಿ ಆಡಳಿತ ಮೊಕ್ತೇಸರರಾಗಿದ್ದ ಗೋಪಾಲ ಕೃಷ್ಣ ಸುವರ್ಣರವರು ನಿಧನರಾಗಿದ್ದ ಹಿನ್ನೆಲೆಯಲ್ಲಿ ಮುಂದಿನ ಆಡಳಿತ ಮೊಕ್ತೇಸರರನ್ನು ನೇಮಿಸುವ ಮುನ್ನ ಏಳು ಗ್ರಾಮ ಸೇರಿ ದೇವದಾಸ್ ಪುತ್ರನ್ ಎಂಬವರನ್ನು ತಾತ್ಕಾಲಿಕ ಎನ್ನುವ ನೆಲೆಯಲ್ಲಿ ಆಡಳಿತ ಮೊಕ್ತೇಸರನ್ನಾಗಿ ಎರಡು ವರುಷದ ಹಿಂದೆ ನೇಮಿಸಿತ್ತು. ಆದರೆ ಅವರ ಆಡಳಿತದಲ್ಲಿ ಕೆಲ ಶಂಕಾಸ್ಪದ ನಡವಳಿಕೆ ಕಂಡುಬಂದ ಹಿನ್ನಲೆಯಲ್ಲಿ ಅವರ ಬದಲಿಗೆ ಹೊಸ ಆಡಳಿತ ಮೊಕ್ತೇಸರರನ್ನು ನೇಮಿಸಲು ನಿರ್ಧರಿಸಲಾಗಿತ್ತು ಈ ಪರಮಾಧಿಕಾರ ಇರುವುದು ಏಳು ಗ್ರಾಮ ಮೊಗವೀರ ಮಹಾಸಭೆಗೆ ಮಾತ್ರ. ಅಂತೆಯೇ ಕಳೆದ ಜನವರಿ 9ರಂದು ಮಹಾಸಭೆ ನಡೆಸಿದ ಏಳು ಗ್ರಾಮ ಮೊಗವೀರ ಸಮಿತಿ ದೇವದಾಸ್ ಪುತ್ರನ್ ಅವರನ್ನು ಕೆಳಗಿಳಿಸಿ ಮುಂದಿನ ಆಡಳಿತ ಮೊಕ್ತೇಸರರನ್ನಾಗಿ ಗೋಪಾಲ ಕೃಷ್ಣ ಸುವರ್ಣ ಅವರ ಪುತ್ರ ಮನೋಹರ್ ಬೋಳೂರು ಅವರನ್ನು ನೇಮಿಸಿತ್ತು. ಆದರೆ ಈ ಸಭೆಗೆ ಗೈರು ಹಾಜರಾಗಿದ್ದ ದೇವದಾಸ್ ಪುತ್ರನ್ ಆ ಬಳಿಕದಿಂದ ದೇವಸಾನಕ್ಕೂ ಬಾರದೆ ದೇವಸ್ಥಾನದ ದೇವರ ಆಭರಣ ಮತ್ತು ಅಗತ್ಯ ದಾಖಲೆ ಪತ್ರಗಳಿರುವ ತಿಜೋರಿಯ ಕೀಲಿಕೈಯನ್ನೂ ನೀಡದೇ ಉದ್ಧಟತನ ತೋರುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.

ಪ್ರತಿ ಮಂಗಳವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದ್ದು ಈ ಪೂಜೆ ವೇಳೆ ದೇವಿಗೆ ಎಲ್ಲಾ ಆಭರಣ ತೊಡಿಸಿ ಸಿಂಗಾರ ಮಾಡಿ ಬಳಿಕ ಪೂಜೆ ಮಾಡುವುದು ಕ್ರಮವಾಗಿದ್ದರೂ ಪುತ್ರನ್ ಅವರಿಂದಾಗಿ ದೇವಿ ನಿರಾಭರಣೆಯಾಗಿ ಪೂಜೆ ಪಡೆಯುವಂತಾಗಿದೆ ಎಂದು ಭಕ್ತರು ದೂರಿದ್ದಾರೆ. ಈ ಬಗ್ಗೆ ಪುತ್ರನ್ ಅವರಿಗೆ ಸಾಕಷ್ಟು ಮನವರಿಕೆ ಮಾಡಲು ಯತ್ನಿಸಲಾಯಿತಾದರೂ ಅವರು ತಮ್ಮ ಬಿಗು ತೀರ್ಮಾನ ಸಡಿಲಿಸದ ಕಾರಣ ಭಕ್ತರು ದೇವಿಗೆ ದೂರು ನೀಡಿದ್ದರು. ದೇವಿ ತನ್ನ ಆಭರಣ ತಾನೇ ತರಿಸುವ ಭರವಸೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಇತ್ತ ದೇವದಾಸ್ ಪುತ್ರನ್ ನ್ಯಾಯಾಲಯದ ಮೊರೆ ಹೋಗಿದ್ದು ನನಗೆ ಇನ್ನು ಎರಡು ವರುಷದ ಅವಧಿಯಿದ್ದು ಅಲ್ಲಿವರೆಗೆ ಅಧಿಕಾರ ನನಗೆ ನೀಡುವಂತೆ ನ್ಯಾಯಾಲಯವನ್ನು ವಿನಂತಿಸಿದ್ದಾರೆ. ಅಲ್ಲದೆ ಅಲ್ಲಿವರೆಗೆ ಹೊಸ ಆಡಳಿತ ಮೊಕ್ತೇಸರರ ಮೂಲಕ ಸಭೆ ನಡೆಯದಂತೆ ತಡೆಯಾಜ್ಞೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English