ಮಂಗಳೂರು : ವಿಜಯೆರ್ “ಮದಿಮೆ’ ಮಲ್ಥೋದುಲ್ಲೆರೆ … (ವಿಜಯ್ ಅವರು “ಮದುವೆ’ ಮಾಡುತ್ತಿದ್ದಾರಂತೆ) ಹೀಗೊಂದು ಸುದ್ದಿ ಮಂಗಳೂರಿನ ತುಳು ಸಿನಿಮಾಸ್ತಕರ ಬಾಯಲ್ಲಿ ಆಗಾಗ ಕೇಳಿ ಬರುತ್ತಿತ್ತು. ಆದರೆ, ಆ ಸುದ್ದಿಗೊಂದು ಸ್ಪಷ್ಟತೆ ಇರಲಿಲ್ಲ. ಏಕೆಂದರೆ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಆಗಷ್ಟೇ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದರು.
“ಒರಿಯರ್ದೊರಿ ಅಸಲ್’ ನ ಭರ್ಜರಿ ಹಿಟ್ ನ ನಂತರ ವಿಜಯ್ ಕುಮಾರ್ ಮಾಡುತ್ತಿರುವ ಸಿನಿಮಾ “ಮದಿಮೆ’. ವಿಶೇಷವೆಂದರೆ ಈ ಸಿನಿಮಾದ ಮೂಲಕ ಅವರು ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ. “ಅಸಲ್’ ನಿರ್ದೇಶನದ ಜವಾಬ್ದಾರಿಯನ್ನು ಹ.ಸೂ.ರಾಜಶೇಖರ್ ಗೆ ನೀಡಿದ್ದರು. ಆದರೆ ಈ ಬಾರಿ “ಮದಿಮೆ’ಯ ಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ಇವರದ್ದೇ. ಮಾಲಾಡಿ ಬಾಲಕೃಷ್ಣ ಶೆಟ್ಟಿ ಈ ಸಿನಿಮಾ ನಿರ್ಮಾಪಕರು . ವಿಜಯ್ ಕುಮಾರ್ ಹಾಗೂ ಇವರು ಹಳೆಯ ಸ್ನೇಹಿತರು. 20 ವರ್ಷಗಳ ಹಿಂದೆಯೇ ತಮಗೊಂದು ಸಿನಿಮಾ ಮಾಡಿಕೊಡುವಂತೆ ಬಾಲಕೃಷ್ಣ ಶೆಟ್ಟಿ ಕೇಳಿಕೊಂಡಿದ್ದರಂತೆ. ಆದರೆ ಅದು ಈಗ ಈಡೇರಿದೆ. ಇಬ್ಬರ ಸ್ನೇಹದ ಫಲವಾಗಿ “ಮದಿಮೆ’ ಸೆಟ್ಟೇರುತ್ತಿದೆ.
ಅಂದಹಾಗೆ, “ಮದಿಮೆ’ ಕೂಡಾ ರಂಗಭೂಮಿಯ ಯಶಸ್ವಿ ನಾಟಕ. ದೇಶ-ವಿದೇಶಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನ ಕಂಡ ಈ ನಾಟಕ ಈಗ ಸಿನಿಮಾವಾಗುತ್ತಿದೆ. ವಿಜಯ್ ಕುಮಾರ್ ಅವರ “ಅಸಲ್’ ನಂತರ ಭರ್ಜರಿ ಯಶಸ್ಸು ಕಂಡ ನಾಟಕದಲ್ಲಿ “ಮದಿಮೆ’ ಕೂಡಾ ಒಂದು. ಇದು ಔಟ್ ಅಂಡ್ ಔಟ್ ಕಾಮಿಡಿ ನಾಟಕ. ಈಗ ಸಿನಿಮಾ ಕೂಡಾ ಅಷ್ಟೇ. ಮದುವೆ ಮನೆಯಲ್ಲಿ ನಡೆಯುವ ಅವಾಂತರಗಳನ್ನು ಇಲ್ಲಿ ಕಾಮಿಡಿ ರೂಪದಲ್ಲಿ ತೋರಿಸಲಾಗುತ್ತದೆ. ಸಿನಿಮಾ ಎಲ್ಲೂ ಬೋರ್ ಆಗದಂತೆ ಸ್ಕ್ರಿಪ್ಟ್ ಮಾಡಿದ್ದಾಗಿ ಹೇಳುತ್ತಾರೆ ವಿಜಯ್ ಕುಮಾರ್.
ವಿಶೇಷವೆಂದರೆ, ವಿಜಯ್ ಕುಮಾರ್ ತಮ್ಮ “ಅಸಲ್’ನ ತಂಡವನ್ನೇ ಇಲ್ಲೂ ಮುಂದುವರೆಸುತ್ತಿದ್ದಾರೆ. ಅಸಲ್ ಮೂಲಕ ಮಂಗಳೂರು ಮಂದಿಯ ಮನಗೆದ್ದಿರುವ ರಮ್ಯಾ ಬಾರ್ನಾ “ಮದಿಮೆಯ ಮದಿಮಲ್’ (ಮದುವೆಯ ಮದುಮಗಳು). ಉಳಿದಂತೆ ಲಿಖೀತ್ ಶೆಟ್ಟಿ, ರೇಖಾದಾಸ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು ನಟಿಸುತ್ತಿದ್ದಾರೆ.
ಮತ್ತೂಂದು ಅಂಶವೆಂದರೆ ದಕ್ಷಿಣ ಕನ್ನಡದಲ್ಲಿರುವ ಎಲ್ಲಾ ನಾಟಕ ಟ್ರೂಪ್ ಗಳಲ್ಲಿನ ಫೇಮಸ್ ಕಾಮಿಡಿ ಕಲಾವಿದರನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳುವ ಐಡಿಯಾ ಕೂಡಾ ಇದೆ. ಜೊತೆಗೆ ಚಿತ್ರದ ಟೈಟಲ್ ಟ್ರ್ಯಾಕ್ ನಲ್ಲಿ ಕನ್ನಡದ ಕಾಮಿಡಿ ನಟರು ಮುಖದರ್ಶನ ನೀಡುವ ಸಾಧ್ಯತೆ ಕೂಡಾ ಇದೆ. ಈ ಬಾರಿ ಒಂದಷ್ಟು ಭಿನ್ನವಾಗಿ ಸಿನಿಮಾ ಮಾಡುವ ಸಿದ್ಧತೆಯಲ್ಲಿ ತೊಡಗಿರುವ ವಿಜಯ್ ಕುಮಾರ್ ಈಗ ಹಾಡುಗಳ ಧ್ವನಿಮುದ್ರಣದಲ್ಲಿ ಬ್ಯುಸಿ. ಚಿತ್ರಕ್ಕೆ ಎ.ಕೆ.ವಿಜಯ್ ಸಂಗೀತ, ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಚಿತ್ರ ಫೆಬ್ರವರಿಯಲ್ಲಿ ಆರಂಭವಾಗಲಿದೆ.
Click this button or press Ctrl+G to toggle between Kannada and English