ಫರಂಗಿಪೇಟೆಯಲ್ಲಿ ಈಗ ಸಮಸ್ಯೆಗಳ ಭರಾಟೆ

1:41 PM, Wednesday, February 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಬಂಟ್ವಾಳ ತಾಲೂಕಿನ ಪ್ರಮುಖ ವಾಣಿಜ್ಯ ನಗರವಾದ ಫರಂಗಿಪೇಟೆ ಈಗ ಸಮಸ್ಯೆಗಳ ಭರಾಟೆಯಲ್ಲೇ ಮುಳುಗಿ ಹೋಗಿದೆ.

ಇಲ್ಲಿನ ಬಸ್ ನಿಲ್ದಾಣ-ಪ್ರಯಾಣಿಕರ ತಂಗುದಾಣ, ಸುಗಮ ಸಾರಿಗೆ ವ್ಯವಸ್ಥೆ, ತರಕಾರಿ-ಮೀನು-ಮಾಂಸ ಮಾರುಕಟ್ಟೆ, ಸಾರ್ವಜನಿಕ ಶೌಚಾಲಯ, ತ್ಯಾಜ್ಯ ನಿರ್ವಹಣೆ ಇತ್ಯಾದಿಗಳು ಪೇಟೆಯಲ್ಲಿ ಸುವ್ಯವಸ್ಥಿತವಾಗಿಲ್ಲ. ಸರ್ಕಾರಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾದ ವಿವಿಧ ನಾಗರಿಕ ಯೋಜನೆಗಳು ಫಲಪ್ರದವಾಗಿಲ್ಲ ಎನ್ನುವುದು ಸಾರ್ವತ್ರಿಕ ಆರೋಪ. ಸರ್ಕಾರಿ ಯೋಜನೆಗಳ ಪುನರ್ ಕಾಯಕಲ್ಪಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ವಿಶೇಷ ಲಕ್ಷ್ಯ ಹರಿಸಿರಲಿಲ್ಲ. ಪೇಟೆಯ ಅಭಿವೃದ್ಧಿಗಾಗಿ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳೂ ಯಶಸ್ವಿಯಾಗದೇ ಇರುವುದು ಗಮನಾರ್ಹ ಅಂಶ.

ಬಸ್ ನಿಲ್ದಾಣನಲ್ಲಿ ಮಳಿಗೆಗಳು!

ಪುದು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣ ಭಾಗಶಃ ಖಾಸಗಿ ಕಟ್ಟಡಗಳ ವ್ಯಾಪ್ತಿಯಲ್ಲಿದೆ. ಪ್ರಯಾಣಿಕರಿಗೆ ತಂಗಲು ಇಲ್ಲಿ ಸಮರ್ಪಕವಾದ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಬಸ್ ನಿಲ್ದಾಣವನ್ನು ಅತಿಕ್ರಮಿಸಿರುವ ವಾಣಿಜ್ಯ ಕಟ್ಟಡವನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಒತ್ತಾಯಿಸುತ್ತಲೇ ಇದ್ದರೂ; ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ವಾಣಿಜ್ಯ ಕಟ್ಟಡಗಳ ಎದುರಿರುವ ಬಸ್ ನಿಲ್ದಾಣವನ್ನಾದರೂ ಪ್ರತ್ಯೇಕವಾದ ಜಾಗಕ್ಕೆ ಸ್ಥಳಾಂತರಿಸಬೇಕೆನ್ನುತ್ತಾರೆ ಇಲ್ಲಿನ ನಾಗರಿಕರು.

ಟ್ರಾಫಿಕ್ ನಿಯಂತ್ರಣ ಇಲ್ಲ:

ಬಸ್ ನಿಲ್ದಾಣದ ಅವ್ಯವಸ್ಥೆಯಿಂದಾಗಿ ಪೇಟೆಯ ಜಂಕ್ಷನ್ನಲ್ಲಿನ ಟ್ರಾಫಿಕ್ ಅಸ್ತವ್ಯಸ್ತಗೊಳ್ಳುತ್ತಿದೆ. ಇದರಿಂದ ಬಸ್ ಗಳಿಗಾಗಿ ಕಾಯುತ್ತಿರುವ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಬಸ್ ನಿಲ್ದಾಣ ಎದುರೇ ಇತರ ವಾಹನಗಳ ಪಾರ್ಕಿಂಗ್; ಇನ್ನೊಂದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಸಾರಿಗೆ ನಿಯಮ ಉಲ್ಲಂಘಿಸಿ ನಡೆಸಲಾಗುವ ವಾಹನ ನಿಲುಗಡೆ, ಲಘು ವಾಹನಗಳ ಅಡ್ಡಾದಿಡ್ಡಿ ಓಡಾಟ; ಹೆದ್ದಾರಿಯ ನಿಬಿಡ ವಾಹನಗಳ ಸಂಚಾರಗಳಿಗೆ ಅಡೆಚಣೆ ತಂದೊಡ್ಡುತ್ತದೆ. ಟ್ರಾಫಿಕ್ ಗೊಂದಲದಿಂದಾಗಿ ಪಾದಾಚಾರಿಗಳು, ಪ್ರಯಾಣಿಕರು ತೀರಾ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ರಸ್ತೆ ದಾಟುವ ಸಂದರ್ಭಗಳಲ್ಲೂ ಟ್ರಾಫಿಕ್ ನಿಯಮ ಹಾಗೂ ಸೂಚನೆಗಳು ಪಾಲನೆಯಾಗುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಯಾವುದೇ ಸೂಚನಾ ಫಲಕಗಳಿಲ್ಲ. ಇಲ್ಲಿರುವ ಆರಕ್ಷಕ ಹೊರ ಠಾಣೆಯ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ವಿಫಲರಾಗುತ್ತಿದ್ದಾರೆ. ಟೂರಿಸ್ಟ್ ಕಾರುಗಳು, ಆಟೋ ರಿಕ್ಷಾಗಳು ಹಾಗೂ ಬೈಕ್ ಗಳು ಎಲ್ಲಿ ಪಾರ್ಕಿಂಗ್ ಮಾಡಬೇಕೆನ್ನುವ ಮಾರ್ಗಸೂಚಿಗಳು ಕಾಣುತ್ತಿಲ್ಲ.

ಮಾರುಕಟ್ಟೆ ವಿವಾದ:

ಇಲ್ಲಿನ ಹಳೆಯ ಮಾರುಕಟ್ಟೆಯನ್ನು ಹೆದ್ದಾರಿ ಅಗಲೀಕರಣದ ಉದ್ದೇಶಕ್ಕಾಗಿ ರೈಲ್ವೇ ಇಲಾಖೆಯ ಜಮೀನಿಗೆ ಸ್ಥಳಾಂತರಗೊಳಿಸಲಾಗಿತ್ತು. ಮೀನು ಹಾಗೂ ತರಕಾರಿ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾಪಕ್ಕೆ ಸಂಬಂಧಿಸಿ ಕ್ಷೇತ್ರ ಶಾಸಕ ಯು.ಟಿ. ಖಾದರ್ ಹಾಗೂ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅಧಿಕಾರಿ-ಜನಪ್ರತಿನಿಧಿಗಳ ಜಂಟಿ ಸಭೆ ನಡೆಸಿದ್ದರು. ಆದರೂ ಮಾರುಕಟ್ಟೆ ಜಾಗ ವಿವಾದ ಇನ್ನೂ ಬಗೆಹರಿದಿಲ್ಲ. ಈಗಿರುವ ಮಾರುಕಟ್ಟೆ ಹೆದ್ದಾರಿ ಹಾಗೂ ರೈಲ್ವೇ ಇಲಾಖೆಯ ಜಮೀನಲ್ಲಿದ್ದು, ಮಾರುಕಟ್ಟೆ ತೆರವುಗೊಳಿಸಲು ರೈಲ್ವೇ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ಮಾರುಕಟ್ಟೆ ವ್ಯಾಪಾರಿಗಳು ಅತಂತ್ರದಲ್ಲಿದ್ದಾರೆ. ನಗರದ ಸಮೀಪ ಇರುವ ಸರ್ಕಾರಿ ಜಮೀನಿನಲ್ಲಿ ಮಾರುಕಟ್ಟೆ ನಿರ್ಮಿಸಲು ಜಿಲ್ಲಾಡಳಿತ ಕ್ರಮ ನಡೆಸಬೇಕೆಂಬುದು ಜನರ ಆಗ್ರಹ.

ತ್ಯಾಜ್ಯ ನಿರ್ವಹಣೆ ಇಲ್ಲ:

ಇಲ್ಲಿನ ಹೊಟೇಲು, ಅಂಗಡಿಗಳು, ಕೈಗಾರಿಕಾ ಉದ್ದೇಶಿತ ಸಂಸ್ಥೆಗಳು, ವಾಣಿಜ್ಯ ಮಳಿಗೆ, ಇತರ ಉದ್ಧಿಮೆಗಳು ಹೊರ ಹಾಕುವ ಕಸ ಹಾಗೂ ತ್ಯಾಜ್ಯ ವಸ್ತಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಿರ್ಮಾಣದ ಹಂತದಲ್ಲಿರುವ ಕಟ್ಟಡಗಳೂ ತ್ಯಾಜ್ಯ ವಿಲೇವಾರಿ ಕ್ರಮಗಳು ಪಾಲಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕ ವಲಯಗಳಲ್ಲಿ ಕಸ-ಕಡ್ಡಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ನಗರದ ನೈರ್ಮಲ್ಯವನ್ನು ಕೆಡಿಸುತ್ತದೆ. ಇಲ್ಲಿನ ಸಾರ್ವಜನಿಕ ಶೌಚಾಲಯ ಕೂಡ ಸಮರ್ಪಕ ನಿರ್ವಹಣೆಯಾಗದಿರುವುದೂ ಇನ್ನೊಂದು ಸಮಸ್ಯೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English