ಉದಾರ ಆರ್ಥಿಕ ನೀತಿಯಿಂದ ಒಳ್ಳೆಯದು ಮಾತ್ರ ಆಗೋದಿಲ್ಲ !

2:53 PM, Wednesday, February 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Investಮಂಗಳೂರು : ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಉದಾರ ಆರ್ಥಿಕ ನೀತಿಗಳಿಂದ ಒಳ್ಳೆಯದೇ ಆಗಿದೆಯೆಂದು ಹೇಳುವಂತಿಲ್ಲ. ಕೆಟ್ಟದ್ದೂ ಆಗಿದೆ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರವನ್ನು ಸರ್ಕಾರಿ ಏಕಸ್ವಾಮ್ಯದಿಂದ ಬಿಡುಗಡೆ ಗೊಳಿಸಿದ್ದರಿಂದ ಮಾರುಕಟ್ಟೆ ಮುಕ್ತವಾಗಿ ಉದ್ಯಮಕ್ಷೇತ್ರಕ್ಕೆ ಮತ್ತು ಗ್ರಾಹಕರಿಗೆ ಒಳ್ಳೆಯದೇ ಆಯಿತು.

ಆದರೆ ಉದಾರವಾದಿ ನೀತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಉದ್ಯಮ, ಸೇವಾ ಕ್ಷೇತ್ರಗಳು ಖಾಸಗಿ ವಲಯದಿಂದ ಪೈಪೋಟಿ ಎದುರಿಸಲು ಅಗತ್ಯವಾದ ಬದಲಾವಣೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದದ್ದರಿಂದ ಅವೆಲ್ಲ ಇಂದು ನಷ್ಟಕ್ಕೆ ಒಳಗಾಗಿ ಕಷ್ಟ ಎದುರಿಸುತ್ತಿವೆ. ಇಂಥ ಉದ್ಯಮಗಳನ್ನು ಪುನಶ್ಚೇತನಗೊಳಿಸಲೆಂದೇ ಕೇಂದ್ರ ಸರ್ಕಾರ ರೂಪಿಸಿದ ಬಂಡವಾಳ ಹಿಂತೆಗೆತ ಮತ್ತು ಖಾಸಗಿ ಬಂಡವಾಳ ಆಕರ್ಷಣೆ ನೀತಿಯೂ ಸರಿಯಾಗಿ ಜಾರಿಗೆ ಬರದೆ ಬಿಕ್ಕಟ್ಟು ಉದ್ಭವವಾಗಿದೆ.

ಇದರ ನೇರ ಪರಿಣಾಮವನ್ನು ಎದುರಿಸುತ್ತಿರುವವರು ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದ ಉದ್ಯೋಗಿಗಳು. ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆಯೂ (ಬಿಎಸ್ಎನ್ಎಲ್)ಇಂತಹ ಸಂಕಷ್ಟವನ್ನು ಎದುರಿಸುತ್ತಿದ್ದು ಅಲ್ಲಿನ ಕನಿಷ್ಠ ಒಂದು ಲಕ್ಷ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಕೊಡುವ ಯೋಜನೆ ಪರಿಶೀಲನೆಯಲ್ಲಿದೆ. ಮುಖ್ಯವಾಗಿ ವಿಆರ್ಎಸ್ ಕೊಡುವ ಮೂಲಕ ವೇತನದ ಹೊರೆ ತಗ್ಗಿಸಿ ನಷ್ಟವನ್ನು ಕಡಿಮೆ ಮಾಡುವುದು ಆ ಸಂಸ್ಥೆಯ ಲೆಕ್ಕಾಚಾರ.

ಆದರೆ ಸಂಸ್ಥೆಯ ಈ ಆಲೋಚನೆಯನ್ನು ಕಾರ್ಮಿಕ ಸಂಘಟನೆಗಳು ಒಪ್ಪುತ್ತಿಲ್ಲ. ಇದೇ ಕ್ಷೇತ್ರದಲ್ಲಿ ದೇಶದಲ್ಲಿ ಹೊಸದಾಗಿ ಬಂಡವಾಳ ಹೂಡಿದ ಕಂಪನಿಗಳು ಲಾಭ ಮಾಡುವುದಾದರೆ ಈಗಾಗಲೇ ಉತ್ತಮ ಮೂಲಸೌಕರ್ಯ ಮತ್ತು ಸಂಪರ್ಕ ಜಾಲ ಪಡೆದಿದ್ದ ಬಿಎಸ್ಎನ್ಎಲ್ ನಷ್ಟ ಅನುಭವಿಸಲು ಕಾರಣವೇನು ಎನ್ನುವ ಪ್ರಶ್ನೆ ಏಳುವುದು ಸಹಜ. ಮೂಲಭೂತವಾಗಿ ಸಂಸ್ಥೆಯನ್ನು ನಿರ್ವಹಿಸುವವರ ದುರಾಡಳಿತ ಮತ್ತು ಸರಕಾರ ಖಾಸಗಿಯವರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿರುವುದು ಕಾರಣ ಎನ್ನುತ್ತಾರೆ ಕಾರ್ಮಿಕ ಮುಖಂಡರು. ಇದೇನೇ ಇದ್ದರೂ ಭಾರತದಲ್ಲಿ ಪ್ರತಿ ತಿಂಗಳೂ ಲಕ್ಷಗಳ ಸಂಖ್ಯೆಯಲ್ಲಿ ಮೊಬೈಲ್ ಸಂಪರ್ಕ ವಿಸ್ತರಣೆಯಾಗುತ್ತಿರುವಾಗ ಬಿಎಸ್ಎನ್ಎಲ್ ನಷ್ಟ ಅನುಭವಿಸುತ್ತಿರುವ ವಿಚಾರ ಗಂಭೀರ ಚಿಂತನೆಗೆ ಅವಕಾಶ ಮಾಡಿಕೊಡುವಂಥದು.

ಬಿಎಸ್ಎನ್ಎಲ್ ಸುಧಾರಣೆಗಾಗಿ ನೇಮಿಸಿದ್ದ ಸ್ಯಾಮ್ ಪಿತ್ರೋಡಾ ನೇತೃತ್ವದ ಸಮಿತಿ ಹಲವು ಸಲಹೆಗಳನ್ನು ಮಾಡಿತ್ತು. ಅವುಗಳನ್ನು ಜಾರಿಗೊಳಿಸುವ ವಿಚಾರದಲ್ಲಿಯೂ ಒಮ್ಮತ ಮೂಡಿಬರದಿರುವುದು ದುರದೃಷ್ಟಕರ. ಬಿಎಸ್ಎನ್ಎಲ್ ಪುನರುಜ್ಜಿವನಗೊಳಿಸಲು ಅಗತ್ಯವಾದಷ್ಟು ಬಂಡವಾಳ ಸರ್ಕಾರದ ಬಳಿ ಇಲ್ಲದಿದ್ದರೆ ಅಲ್ಪ ಪ್ರಮಾಣದಲ್ಲಿಯಾದರೂ ಬಂಡವಾಳ ಹಿಂತೆಗೆದುಕೊಂಡು ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಬಹುದಾಗಿತ್ತು. ಖಾಸಗಿಯವರು ಈ ಕ್ಷೇತ್ರಕ್ಕೆ ಕಾಲಿಟ್ಟ ಮೇಲೂ ಬಿಎಸ್ಎನ್ಎಲ್ ಈಗ ಉತ್ತಮ ಸಂಪರ್ಕ ಜಾಲ ಪಡೆದಿರುವ ಸಂಸ್ಥೆಯಾಗಿದೆ.

ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ವ್ಯವಸ್ಥೆಯನ್ನು ಆಧುನೀಕರಣ ಗೊಳಿಸಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕಷ್ಟ್ಟೆ. ಖಾಸಗಿಯವರ ಜೊತೆ ಸ್ಪರ್ಧಿಸಬೇಕಾದರೆ ಅವರ ಸಮಸಮಕ್ಕೆ ತಂತ್ರಜ್ಞಾನ ಇರಬೇಕು. ಟೆಲಿಕಾಂ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡುವವರನ್ನು ಹುಡುಕುವುದು ಸರ್ಕಾರಕ್ಕೆ ಕಷ್ಟವಾಗಲಾರದು. ಆಧುನಿಕ ತಂತ್ರಜ್ಞಾನಕ್ಕೆ ಹೊಂದಾಣಿಕೆಯಾಗಲು ಮೊದಲು ಕಾರ್ಮಿಕರಿಗೆ ತರಬೇತಿ ಕೊಡಬೇಕು. ಹೊಂದಾಣಿಕೆ ಯಾಗದವರನ್ನು ಸೂಕ್ತ ಪರಿಹಾರ ಕೊಟ್ಟು ನಿವೃತ್ತಿಗೊಳಿಸಬಹುದು.

ಕಾರ್ಮಿಕ ಸಂಘಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಮಾಡಬಹುದು. ಕಾರ್ಮಿಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬಿಎಸ್ಎನ್ಎಲ್ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆ. ಅದರೊಡನೆ ಜನರಿಗೂ ಭಾವನಾತ್ಮಕ ಸಂಬಂಧವಿದೆ. ಬಿಎಸ್ಎನ್ಎಲ್ ಪುನರುಜ್ಜೀವನಗೊಳಿಸುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಸಂಪಾದಕರು,

ಶಿವ ಪ್ರಸಾದ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English