ಮಂಗಳೂರು: ಕಿನ್ಯ ಅಜ್ಜಿನಡ್ಕ ನಿವಾಸಿ, ರೌಡಿ ಶೀಟರ್ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸತ್ಯಾಂಶಗಳು ಹೊರಬಿದ್ದಿವೆ. ಮಾರ್ಚ್ 27ರಂದು ನಡೆದ ಈ ಕೃತ್ಯಕ್ಕೂ ಮೊದಲು, ಅಂದರೆ ಫೆಬ್ರವರಿ 13ರಂದೇ ಆರೋಪಿಗಳು ಆರಿಫ್ನನ್ನು ಹತ್ಯೆ ಮಾಡಲು ಮೊದಲ ಯತ್ನ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಅಂದು ಬೆಳ್ಳಂಬೆಳಿಗ್ಗೆಯೇ ಆರೋಪಿಗಳು ಆತನನ್ನು ಹಿಂಬಾಲಿಸಿ ಕೊಲೆಗೆ ಹೊಂಚು ಹಾಕಿದ್ದರಾದರೂ, ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಆ ಸಂಚು ವಿಫಲವಾಗಿತ್ತು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಮೊದಲ ಪ್ರಯತ್ನದಲ್ಲಿ ವಿಫಲರಾದ ಆರೋಪಿಗಳು ಹಠ ಬಿಡದೆ ಎರಡನೇ ಬಾರಿ ಮಾರ್ಚ್ 27ರಂದು ಸಂಚು ರೂಪಿಸಿದ್ದರು. ಅಂದು ಬೆಳಿಗ್ಗೆ ಆರಿಫ್ ಬೈಕ್ನಲ್ಲಿ ದಕ್ಕೆ ಮೀನು ಮಾರುಕಟ್ಟೆಗೆ ತೆರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಮತ್ತು ಅವರಿಗೆ ಸಹಕರಿಸಿದ ಇರ್ಷಾದ್ ಎಂಬುವವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಫೆಬ್ರವರಿ 13ರ ಮೊದಲ ಯತ್ನದಲ್ಲಿ ಈಗ ಬಂಧಿತರಾಗಿರುವವರ ಹೊರತಾಗಿ ಇನ್ನೂ ಕೆಲವರು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಅಂತಹವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಮೊದಲ ಸಂಚಿನಲ್ಲಿ ಪಾಲ್ಗೊಂಡಿದ್ದ ಇತರ ಆರೋಪಿಗಳ ಬಗ್ಗೆ ಖಚಿತ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಎರಡು ದಾಳಿಗಳ ನಡುವಿನ ಸಂಪರ್ಕ ಹಾಗೂ ಈ ಕೃತ್ಯದ ಹಿಂದಿರುವ ಎಲ್ಲಾ ಕೈವಾಡಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









