ಮಾದಕ ವ್ಯಸನಿಗಳಿಗೆ ಮಂಗಳೂರು ಅಡ್ಡೆಯೇ?.

5:26 PM, Tuesday, February 26th, 2013
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರಿನಲ್ಲಿ ಇತ್ತೀಚೆಗೆ ಕಂಡು ಬರುವ ಕೆಲವು ವಿದ್ಯಮಾನಗಳು ಈ ಪ್ರಶ್ನೆಗೆ ಪುಷ್ಠಿ ನೀಡುತ್ತದೆ. ಮೊನ್ನೆ ಮೊನ್ನೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಳೆದ ವರ್ಷ ಮತ್ತೊಬ್ಬ ಯುವತಿ ಬಲಿಯಾಗಿದ್ದಳು. ಅಲ್ಲದೆ ರಾಜಕಾರಣಿಯೊಬ್ಬರ ಪುತ್ರನ ಆಮಿಷಕ್ಕೆ ಒಳಗಾದ ಯುವತಿಯೊಬ್ಬಳನ್ನು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಬಚಾವ್ ಮಾಡಿದ್ದರು.

ಇವೆಲ್ಲದರ ಮಧ್ಯೆ ಮಂಗಳೂರು ಪೊಲೀಸರು ಕೆಲವು ಶಾಲಾ ಕಾಲೇಜು ಕ್ಯಾಂಪಸ್ ಪಕ್ಕದ ಗೂಡಂಗಡಿಗೆ ದಾಳಿ ಮಾಡಿದ್ದಾರೆ. ಈ ಹಿಂದೆ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರ ಮನೆಗೂ ಪೊಲೀಸರು ದಾಳಿ ಮಾಡಿ ಜಾಲಾಡಿದ್ದಾರೆ. ಕೆಲವು ಕಡೆ ಗಾಂಜಾ ಸಿಕ್ಕಿದೆ. ಇನ್ನು ಕೆಲವು ಕಡೆ ಏನೇನೂ ಸಿಕ್ಕಿಲ್ಲ.

ತನ್ಮಧ್ಯೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಕಾರ್ಯಾಗಾರ ನಡೆಸಿದೆ. ಶಾಲಾ ಕಾಲೇಜು ಪ್ರಾಂಶುಪಾಲರ ಸಭೆ ನಡೆಸಿದೆ. ಸಂಘಟನೆಗಳು ವಾಹನ ಜಾಥಾ ನಡೆಸಿದೆ. ಅಲ್ಲಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದೆ.

ಅಂದಹಾಗೆ, ಮಂಗಳೂರು ಶೈಕ್ಷಣಿಕ ಹಬ್ ಎಂಬ ಖ್ಯಾತಿಗೆ ಒಳಗಾಗಿದೆ. ಹಾಗಾಗಿ ಇಲ್ಲಿ ದೇಶ ವಿದೇಶದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲು ಬರುತ್ತಾರೆ. ಕೆಲವರು ಚೆನ್ನಾಗಿ ಕಲಿತು ತಂದೆ, ತಾಯಿಗೆ, ಸಮಾಜಕ್ಕೆ ಕೀರ್ತಿ ತಂದರೆ ಇನ್ನು ಕೆಲವರು ಅಡ್ಡ ಹಾದಿ ಹಿಡಿಯುತ್ತಾರೆ. ಇದಕ್ಕೂ ಹೆತ್ತವರು ಅಥವಾ ಪೋಷಕರೇ ಕಾರಣ ಎಂದರೆ ತಪ್ಪಾಗಲಾರದು. ಕೆಲವು ರಾಜಕಾರಣಿಗಳಂತೂ ಈ ವಿಷಯದಲ್ಲಿ ಚಳಿ ಕಾಯಲು ಹೊರಟಿರುವುದು ಗುಟ್ಟಾಗಿ ಉಳಿದಿಲ್ಲ.

ಒಮ್ಮೆ ಮಾದಕ ವ್ಯಸನಕ್ಕೆ ತುತ್ತಾದರೆ, ಆ ಜಾಲದಿಂದ ಹೊರಬರಲು ಆತ ಹೆಣಗಾಡಬೇಕಾಗುತ್ತದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ….
ಕಳೆದ ಆರು ವರ್ಷಗಳ ಬಳಿಕ ನನ್ನ ತಮ್ಮನನ್ನು ಇದೀಗ ನೋಡುತ್ತಿದ್ದೇನೆ. ಈತ ಸತ್ತೇ ಹೋಗಿರಬಹುದೆಂದು ಭಾವಿಸಿದ್ದೆವು. ಅದೃಷ್ಟವಶಾತ್ ನಮ್ಮ ಕಣ್ಣಿಗೆ ಕಾಣಲು ಸಿಕ್ಕಿದ್ದಾನೆ. ನಮಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದು ಮಾದಕ ವ್ಯಸನದ ಜಾಲಕ್ಕೆ ಸಿಕ್ಕಿ ಬಾಲ್ಯ ಮಾತ್ರವಲ್ಲದೆ ಯೌವನದ ಸುಂದರ ಕ್ಷಣಗಳನ್ನು ಕಳೆದುಕೊಂಡು ತನ್ನವರಿಂದಲೂ ದೂರವಾಗಿದ್ದ ಯುವಕನನ್ನು ಆತನ ಅಣ್ಣ ನೀಡಿದ ಭವೋದ್ವೇಗದ ಮಾತುಗಳು.

“ಇವನ ಹೆಸರು ದೀಪಕ್ ಛತ್ರಿ. ನಾವು ಅಸ್ಸಾಂನ ಹಾಫ್ಲಾಂಗ್ ಗಿರಿ ಪ್ರದೇಶದ ನಿವಾಸಿಗಳು. ಮೂವರು ಸಹೋದರರು, ಒಬ್ಬ ಸಹೋದರಿ ಹಾಗೂ ತಂದೆ, ತಾಯಿಯೊಂದಿಗೆ ತುಂಬು ಸಂಸಾರ. ಮಧ್ಯಮ ವರ್ಗಕ್ಕೆ ಸೇರಿದ ನಮ್ಮ ಕುಟುಂಬಕ್ಕೆ ತಂದೆ ಅಮೃತ್ ಬಹಾದೂರ್ ಚತ್ರಿ ಅವರ ವಾಹನ ಚಾಲನಾ ವೃತ್ತಿಯೇ ಆಧಾರ. ಅರಣ್ಯ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಕಾರಣ ಬಾಲ್ಯದಲ್ಲಿ ಶಿಕ್ಷಣ, ಊಟೋಪಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ನನಗಿಂತ ಸುಮಾರು ಒಂದು ವರ್ಷ ಚಿಕ್ಕವ” ಎನ್ನುತ್ತಾರೆ, ನಬಿನ್ ಛತ್ರಿ.

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಕಾಲ್ ಸೆಂಟರ್ನಲ್ಲಿ ಉದ್ಯೋಗ ಮಾಡುತ್ತಿರುವ ನಬಿನ್ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕು ಕುಟುಂಬದಿಂದ ದೂರವಾಗಿದ್ದ ತನ್ನ ತಮ್ಮನನ್ನು ಭೇಟಿಯಾಗಿ ಕರೆದೊಯ್ಯಲು ಕಳೆದ ಶುಕ್ರವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದಾಗ ಪತ್ರಿಕೆಯೊಂದಿಗೆ ತನ್ನ ತಮ್ಮನ ಬಗ್ಗೆ ಹೇಳಿಕೊಳ್ಳುತ್ತಾ ಸಾಗಿದರು.

“ನಾಲ್ಕನೆ ತರಗತಿಯಲ್ಲಿರುವಾಗಲೇ ವೆಟ್ನರ್, ಗಮ್, ಗಾಂಜಾದ ನಶೆಯ ಚಟಕ್ಕೆ ತುತ್ತಾಗಿದ್ದ. ಆರಂಭದಲ್ಲಿ ನಮಗೆ ಅದೆಲ್ಲಾ ಗೊತ್ತಾಗುತ್ತಿರಲಿಲ್ಲ. ಆತನಿಗೆ ಗಿಟಾರ್ ಬಾರಿಸುವ ಹುಚ್ಚಿತ್ತು. ಹಾಗಾಗಿ ಸ್ನೇಹಿತರ ಜೊತೆ ಸಂಗೀತದ ಅಲೆಯ ಜೊತೆ ಮಾದಕ ವ್ಯಸನದ ಚಟವನ್ನೂ ತನ್ನದಾಗಿಸಿಕೊಂಡ. ಆಗ ಬಾಲಕನಾಗಿದ್ದರಿಂದ ಆತನಿಗೆ ಮನೆಯಲ್ಲಿ ತಂದೆ ತಾಯಿ ಜೋರು ಮಾಡಿ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದರು.

ಪರಿಸ್ಥಿತಿ ಬದಲಾದರೆ ಮಗ ಸುಧಾರಿಸಬಹುದು ಎಂದು ನಾಲ್ಕನೆ ತರಗತಿವರೆಗೆ ಸರಕಾರಿ ಶಾಲೆಗೆ ಹೋಗುತ್ತಿದ್ದ ತಮ್ಮನನ್ನು ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿದರು. ಆದರೆ ಈತನ ನಶೆಯ ಹುಚ್ಚು ಮಿತಿ ಮೀರತೊಡಗಿತ್ತು. ಮನೆಯವರ ಕಣ್ಣು ತಪ್ಪಿಸಿ ಯಾರಿಂದಲೋ ಕಾಡಿ ಬೇಡಿ, ಅವರಿವರ ಮನೆಯ ಸಣ್ಣ ಪುಟ್ಟ ಕೆಲಸ ಮಾಡಿ ಅವರಿಂದ ಹಣ ಪಡೆದು ತನ್ನ ನಶೆಗಾಗಿ ಮಾದಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದ. ಹೀಗೇ ಒಂದೆರಡು ವರ್ಷ ಕಳೆಯಿತು. ಮತ್ತೆ ಮತ್ತೆ ಈತ ಮನೆಗೆ ಬರುವುದನ್ನು ನಿಲ್ಲಿಸಿದ. ನಶೆಯಿಂದ ಅಲ್ಲಲ್ಲಿ ಬಿದ್ದುಕೊಂಡಿರುವುದು, ಮನೆಗೆ ಸುದ್ದಿ ತಲುಪಿ ಆತನನ್ನು ಹಿಡಿದು ತರುವುದು… ನಡೆಯುತ್ತಿತ್ತು. ಒಂದು ದಿನವಂತೂ ಮನೆಯಲ್ಲಿ ತಂದೆಗೆ ಹಾಗೂ ದೀಪಕ್ ಜೊತೆ ಜಗಳವೇ ನಡೆಯಿತು. ಆ ಜಗಳ ಎಷ್ಟರ ಮಟ್ಟಿಗೆ ಹೋಯಿತೆಂದರೆ ನಶೆಯ ಭರದಲ್ಲಿ ದೀಪಕ್ ತನ್ನ ಕೈಯ್ಯಲ್ಲಿದ್ದ ಚಾಕುವಿನಿಂದ ತಂದೆಯ ಕುತ್ತಿಗೆಯ ಬಳಿ ತಿವಿದೇ ಬಿಟ್ಟಿದ್ದ. ತಂದೆಗೇನೂ ಪ್ರಾಣಾಪಾಯವಾಗಿರಲಿಲ್ಲ. ಆದರೆ ನಾವೆಲ್ಲಾ ಆ ಸಮಯದಲ್ಲಿ ಸಣ್ಣವರು. ನಮ್ಮ ತಾಯಿ ರಾಧಾ ಛತ್ರಿ ಗೃಹಿಣಿ. ಅವರಿಗೆ ದೀಪಕ್ ಎಂದರೆ ತುಂಬಾ ಪ್ರೀತಿ. ಹಾಗಾಗಿ ತಂದೆಗೆ ಬುದ್ದಿವಾದ ಹೇಳಿದರು. ದೀಪಕ್ ಜೊತೆ ಕಠಿಣವಾಗಿ ವರ್ತಿಸುತ್ತಿದ್ದರೂ ಅಮ್ಮ ಮಾತ್ರ ಇಂದಲ್ಲಾ ನಾಳೆ ಮಗ ಸರಿಹೋಗುತ್ತಾನೆಂಬ ಭರವಸೆಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಆದರೆ ದೀಪಕ್ ನ ತಲೆಗೆ ನಶೆ ಎಷ್ಟು ಹತ್ತಿತ್ತೆಂದರೆ ಆತ ಮನೆಯಿಂದಲೇ ದೂರವಾದ. ಸುಮಾರು ಆರು ವರ್ಷಗಳ ಹಿಂದೆ ಮನೆಯಿಂದ ದೂರವಾದವವನ್ನು ಹುಡುಕಿ ಹುಡುಕಿ ಸುಸ್ತಾಗಿ ನಶೆ ಮಿತಿ ಮೀರಿ ಸತ್ತು ಹೋಗಿರಬಹುದೆಂದೇ ತಿಳಿದುಕೊಂಡಿದ್ದೆವು…

ಮೂರು ವರ್ಷಗಳ ಹಿಂದೆ ತಲಪಾಡಿಯ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಅವರಿಗೆ ಮಾರ್ನಮಿ ಕಟ್ಟೆಯ ಬಳಿ ನಶೆಯ ಗುಂಗಿನಲ್ಲಿ ಪತ್ತೆಯಾಗಿದ್ದ. ಕುರುಚಲು ಗಡ್ಡ, ಬೆಳೆದ ಕೂದಲು, ಮಾಸಿದ ಅಂಗಿಯಲ್ಲಿ ಈ ತರುಣ ಅಲ್ಲಿನ ಅಂಗಡಿಯೊಂದರಿಂದ ಪ್ರತಿ ದಿನ ನಾಲ್ಕೆದು ಗಮ್ ಟ್ಯೂಬ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜೋಸೆಫ್ರಿಗೆ ಕರೆ ಮಾಡಿ ತಿಳಿಸಿದ್ದರು. ದೀಪಕ್ ನನ್ನು ಜೋಸೆಫ್ರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದರು. ಅಂತೂ ಚಿಕಿತ್ಸೆಯಿಂದಾಗಿ ನಶೆಯಿಂದ ಹೊರಬಂದ ದೀಪಕ್ ಇದೀಗ ತನ್ನ ಹೆತ್ತವರ ಜತೆ ಪಯಣ ಬೆಳೆಸಿದ್ದಾನೆ. ಅಂದಹಾಗೆ, ದೀಪಕ್ ನ ತಂದೆ ವರ್ಷದ ಹಿಂದೆ ಇಹಲೋಕ ತ್ಯಜಿಸಿದ್ದಾರೆ.

ಅಸ್ಸಾಂನಲ್ಲಿ ಹೊಸ ಬಾಳು ಕಾಣುತ್ತಾನೋ ಕಾದು ನೋಡಬೇಕಾಗಿದೆ

ಹೀಗೆ ಹೊರ ರಾಜ್ಯ/ವಿದೇಶದಿಂದ ಕಲಿಯಲು, ಬೇರೆ ಬೇರೆ ಕೆಲಸ ಮಾಡಲು ಬಂದ ಅದೆಷ್ಟೋ ಯುವಕ, ಯುವತಿಯರು ಮಂಗಳೂರಿನ ಈ ನಶೆಯ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೋ ಆ ದೇವರೇ ಬಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English