ಬಂಟ್ವಾಳ : ಬುಧವಾರ ಬೆಳಗ್ಗೆ ಬಿಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಎಲ್ಲಾ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಸೌಮ್ಯ ಕೊಲೆ ಪ್ರಕರಣದ ಆರೋಪಿಗೆ ಮರಣ ದಂಡನೆ ನೀಡುವಂತೆ ಒತ್ತಾಯಸಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕ ರಮಾನಾಥ ರೈ ಹಗಲು ಹೊತ್ತಿನಲ್ಲೇ ಇಂತಹ ಕೃತ್ಯದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕವ ಉದ್ದೇಶದಿಂದ ಮತ್ತು ನಾಗರೀಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಎಚ್ಚೆತ್ತುಕೊಳ್ಳುವಂತೆ ಮಾಡಲು ಈ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಮೃತ ಸೌಮ್ಯಳ ಬಡಕುಟುಂಬಕ್ಕೆ ಸರ್ಕಾರವು ಧನ ಸಹಾಯ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು ಎಂದು ಅವರು ಒತ್ತಾಯಿಸಿದರು.
ಅಪರಾಧಿಯ ಪರವಾಗಿ ಯಾವುದೇ ವಕೀಲರು ವಕಾಲತ್ತುವಹಿಸಿಕೊಳ್ಳಬಾರದು ಹಾಗು ಈ ಬಗ್ಗೆ ಶೀಘ್ರದಲ್ಲೇ ವಕೀಲರ ಸಂಘಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು. ಕಾಂಗ್ರೆಸ್ ಮುಖಂಡ ಹರಿಕಷ್ಣ ಬಂಟ್ವಾಳ ಘಟನೆಯನ್ನು ಖಂಡಿಸಿ ಮಾತನಾಡಿ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾಗಟ್ಟಿ, ಎಂ.ಎಸ್.ಮಹಮ್ಮದ್ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಉಪಾಧ್ಯಕ್ಷ ಆನಂದಶಂಭೂರು,ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಬಿ.ಹೆಚ್.ಖಾದರ್, ಪದ್ಮನಾಭ ನರಿಂಗಾನ, ಮೋಹನ್ ಸಿ.ಎಸ್, ಮಾಧವಮಾವೆ, ಪುಷ್ಪಾವತಿ ಮತ್ತಿತರರು ಹಾಜರಿದ್ದರು.
ಆರೋಪಿಯನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣದ ಹಾದಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English