ಮಂಗಳೂರು : ಕದ್ರಿ ಪಾರ್ಕ್ ಎದುರುಗಡೆ ಇರುವ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮರವೊಂದಕ್ಕೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಪುತ್ತೂರಿನ ಪ್ರಮೀಳಾ(18) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಈ ದಾರಿಯಲ್ಲಿ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದ ಪೊದೆಯ ಮರದಲ್ಲಿ ಯುವತಿಯ ಶವ ನೇತಾಡುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ದಿನಗಳ ಹಿಂದೆಯೇ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.
ಯುವತಿಯನ್ನು ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಡೊಲ್ಪಾಡಿ ನಿವಾಸಿ ಅಮ್ಮು ಪೂಜಾರಿ ಎಂಬವರ ಮಗಳು ಪ್ರಮೀಳಾ (20) ಎಂದು ಗುರುತಿಸಲಾಗಿದ್ದು, ಇವಳು ಕಾಣಿಯೂರು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಕಳೆದ ಕೆಲ ವರ್ಷಗಳಿಂದ ಮಂಗಳೂರು ನಗರದ ಮಹಿಳೆಯರ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನಗರದ ಕಾಫಿ ಡೇ ಒಂದರಲ್ಲಿ ಉದ್ಯೋಗದಲ್ಲಿದ್ದುದಾಗಿ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಯುವತಿಯ ಮೃತ ದೇಹದ ಬಳಿ ಪತ್ತೆಯಾದ ಮೊಬೈಲ್ ಫೋನ್, ಎಟಿಎಮ್ ಕಾರ್ಡ್ ಮತ್ತು ಕೆಲವು ವಿಸಿಟಿಂಗ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣ್ಣೋತ್ತರ ಪರೀಕ್ಷೆಗಾಗಿ ಶವವನ್ನು ನಗರದ ಸರಕಾರಿ ವೆಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಯಾಗಿ ಕಂಡುಬಂದರು ಕೊಲೆ ಶಂಕೆ ವ್ಯಕ್ತವಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Click this button or press Ctrl+G to toggle between Kannada and English