ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ.

5:24 PM, Tuesday, October 1st, 2013
Share
1 Star2 Stars3 Stars4 Stars5 Stars
(4 rating, 6 votes)
Loading...

park-loboಮಂಗಳೂರು: ಸಾಮಾಜಿಕ ಕಾರ್ಯಕರ್ತ ಡಾ.ಕೆ.ಆರ್.ಶೆಟ್ಟಿ ಹಾಗೂ ಇತರರಿಂದ ನಗರದ ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಕ್ರಮಗಳು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುವಂತೆ ನೀಡಿರುವ ಮನವಿಗೆ ಸ್ಪಂದಿಸಿದ ಶಾಸಕ ಜೆ.ಆರ್.ಲೋಬೊ ಪಾರ್ಕ್ ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆ ಪಾರ್ಕ್ ಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗೆಗೆ ಹಾಗೂ ಅಭಿವೃದ್ದಿ ಕಾರ್ಯಗಳ ಬಗೆಗೆ ಮಂಗಳವಾರ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಡಾ.ಕೆ.ಆರ್.ಶೆಟ್ಟಿ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಗಳ ಬಗೆಗೆ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಸೂಚಿಸಬೇಕು ಎಂದು ನನಗೆ ಮನವಿ ನೀಡಿದ್ದರು. ಅದರಂತೆ ಇಂದು ಅಧಿಕಾರಿಗಳ ಜತೆ ಪಾರ್ಕ್ ಗೆ ಭೇಟಿ ನೀಡಿದ್ದೇನೆ. ಪಾರ್ಕ್ ಅಭಿವೃದ್ದಿ ಕಾರ್ಯದ ನೀಲ ನಕಾಶೆ ಈಗಾಗಲೇ ತಯಾರಾಗಿದ್ದು, ಅವುಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗಿದೆ. ಇಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸುವ ಪ್ರಸ್ತಾಪವಿದ್ದು, ಅದಕ್ಕಾಗಿ ಹಳೆಯ ಜಿಂಕೆ ವನವನ್ನು ಮೀಸಲಿಡಲಾಗಿದೆ. ಜಿಂಕೆ ವನದ 1.75 ಎಕರೆ ಜಾಗದಲ್ಲಿ 1.25 ಎಕರೆಯನ್ನು ಸಂಗೀತ ಕಾರಂಜಿಗೆ ಮೀಸಲಿಡಲು ಹಾಗೂ ಇನ್ನುಳಿದ 50 ಸೆಂಟ್ಸ್ ಜಾಗವನ್ನು ಮಕ್ಕಳ ಆಟಕ್ಕಾಗಿ ಮೈದಾನ ರೂಪಿಸಲು ಯೋಜನೆ ಈಗಾಗಲೇ ರೂಪುಗೊಂಡಿದೆ ಎಂದರು.

ಪಾರ್ಕ್ ನ ಹೊರಗಡೆ ರಸ್ತೆ ಬದಿಯಲ್ಲಿರುವ ಅಂಗಡಿಗಳನ್ನು ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡ ನಂತರ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಕದ್ರಿ ಪಾರ್ಕ್ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ದಿಗೊಳಿಸಲಾಗುವುದು, ರಸ್ತೆ ಬದಿಗಳಲ್ಲಿ ಪಾದಾಚಾರಿ ರಸ್ತೆಗಳನ್ನು ಕೂಡ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ನೂತನ ಕದ್ರಿ ಪಾರ್ಕ್ ನ್ನು ಮೂಡ, ತೋಟಗಾರಿಕಾ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಸಹಯೋಗದಲ್ಲಿ ನಿರ್ಮಿಸಲಾಗುವುದು. ಅಭಿವೃದ್ದಿ ಕಾಮಗಾರಿಗಳಿಗಾಗಿ ಸುಮಾರು 5 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಅದರಲ್ಲಿ ಸುಮಾರು 2.30 ಕೋಟಿ ರೂಪಾಯಿಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಕಾಮಗಾರಿಯು 12 ರಿಂದ 15 ತಿಂಗಳುಗಳಲ್ಲಿ ಮುಗಿಯುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರ ಜತೆ ಎಂಸಿಸಿ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ವಾಸ್ತುಶಿಲ್ಪಿ ವಸಂತ್ ಪೈ, ಅಧಿಕಾರಿಗಳಾದ ಮಹಮ್ಮದ್ ನಝೀರ್, ರಾಜೇಂದ್ರ ಕಲ್ಬಾವಿ, ಪ್ರವೀಣ್, ಡಾ.ಕೆ.ಆರ್.ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English