ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ಪ್ರತಿಭಟನೆ

4:01 PM, Friday, November 1st, 2013
Share
1 Star2 Stars3 Stars4 Stars5 Stars
(4 rating, 6 votes)
Loading...

sowjanya

ಬಂಟ್ವಾಳ:  ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಹಾಗೂ ಜಿಲ್ಲೆಯಲ್ಲಿ ನಡೆದ ಇತರ ಅಸಹಜ ಸಾವಿನ ಪ್ರಕರಣಗಳ ಸಿಬಿಐ ತನಿಖೆ ಆಗಲಿ ಎಂದು ಅ. 31ರಂದು ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಸಿದ್ದಕಟ್ಟೆಯ ಭಾರತಿ, ಅಡ್ಯಾರ್‌ನ ಅಕ್ಷತಾ, ಮೂಡಬಿದಿರೆಯ ಸುಚರಿತ ಸಹಿತ ಎಲ್ಲ ಅಸಹಜ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಮಾಯಕ ಮಹಿಳೆಯರ ಸಾವಿನ ವಿಚಾರವಾಗಿ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಸುವುದಾಗಿ ಅವರು ನುಡಿದರು. ಅತ್ಯಾಚಾರಿ, ಕೊಲೆಗಡುಕರಿಗೆ ರಕ್ಷಣೆ ನೀಡುತ್ತಿರುವ ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳಿಗೆ ಸಭೆಯಲ್ಲಿ ಧಿಕ್ಕಾರ ಕೂಗಲಾಯಿತು.

ಜಿಲ್ಲಾ ಪೊಲೀಸ್‌ ಅಧಿಕಾರಿ, ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸ್‌ ಅಧಿಕಾರಿಗಳು ವಿಷಯ ಮುಚ್ಚಿಹಾಕುವಲ್ಲಿ ಆಸಕ್ತಿ ತೋರಿಸಿದ್ದರು ಎಂದು ಸಭೆ ಉದ್ದೇಶಿಸಿ ಮಾತನಾಡಿದವರು ಹೇಳಿದರು.

ನ್ಯಾಯದ ಪರ ಹೋರಾಟ, ಪ್ರತಿಭಟನೆ ಮಾಡಲು ಭಯಬೇಡ. ಪ್ರಕರಣ ಸಿಬಿಐ ತನಿಖೆ ಮಾಡಿದರೆ ಮಾತ್ರ ಸತ್ಯ ಬೆಳಕಿಗೆ ಬಂದೀತು. ಅತ್ಯಾಚಾರಿಗಳನ್ನು ಬೆಂಬಲಿಸುವ ಕೆಲವೊಂದು ಶಾಸಕ, ಜನ ಪ್ರತಿನಿಧಿಗಳು ಪ್ರಕರಣದ ಕುರಿತು ಮೌನವಾಗಿದ್ದಾರೆ ಎಂದು ನೇರ ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಜತೆ ಕಾರ್ಯದರ್ಶಿ ಸೀತಾರಾಮ ಬೇರಿಂಜಿ ಮಾತನಾಡಿ, ಅತ್ಯಾಚಾರಿ, ಕೊಲೆಗಡುಕರಿಗೆ ರಕ್ಷಣೆ ನೀಡುವ ರಾಜ್ಯ ಮುಖ್ಯಮಂತ್ರಿಗೆ ದಿಕ್ಕಾರ, ನ್ಯಾಯ ಕೊಡಿ ಇಲ್ಲವೇ ಅಧಿಕಾರ ಬಿಡಿ ಎಂದು ಹೇಳಿದರು.

ಜಿಲ್ಲೆಯ ಜನ ಪ್ರತಿನಿಧಿಗಳು ಗಾಢ ನಿದ್ರೆಯಲ್ಲಿದ್ದಾರೆ. ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಿ, ಅಮಾಯಕ ಅಬಲೆಯ ಸಾವಿಗೆ ನ್ಯಾಯ ಸಿಗುವಂತಾಗಲಿ, ಅತ್ಯಾಚಾರಿ ಕೊಲೆಗಡುಕರಿಗೆ ರಕ್ಷಣೆ ನೀಡುವ ಮುಖ್ಯಮಂತಿಗೆ ಧಿಕ್ಕಾರ ಎಂದು ಘೋಷಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ಚಂದಪ್ಪ ಅಂಚನ್‌, ದ.ಕ. ಜಿಲ್ಲಾ ಟೂರಿಸ್ಟ್‌ ಕಾರು ಮತ್ತು ವ್ಯಾನ್‌ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ. ಸಾಮಾಜಿಕ ಕಾರ್ಯಕರ್ತ ಹೊನ್ನಪ್ಪ ಕುಂದರ್‌, ಸಿಪಿಐ ತಾಲೂಕು ಕಾರ್ಯದರ್ಶಿ ಶೇಖರ್‌, ವಿದ್ಯಾರ್ಥಿನಿ ಅಶ್ವಿ‌ಜ ಸಭೆ ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್‌ ಮೂಲಕ ಮನವಿಯನ್ನು ರಾಜ್ಯ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಮೊದಲು ಕೈಕಂಬ, ಪೊಳಲಿ ದ್ವಾರದ ಬಳಿಯಿಂದ ಮೆರವಣಿಗೆಯಲ್ಲಿ ಬಂದಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಂಟ್ವಾಳ ತಾಲೂಕು ರಿಕ್ಷಾ ಚಾಲಕರ ಸಂಘಟನೆ, ಬಿಎಂಎಸ್‌ ರಿಕ್ಷಾ ಚಾಲಕರ ಸಂಘ, ಸಣ್ಣ ಮತ್ತು ದೊಡ್ಡ ಗೂಡ್ಸ್‌ ಟೆಂಪೋ ಚಾಲಕರ ಸಂಘ, ದ. ಕ. ಜಿಲ್ಲಾ ಟೂರಿಸ್ಟ್‌ ಕಾರು ಮತ್ತು ವ್ಯಾನ್‌ ಚಾಲಕ ಸಂಘ ಸಹಿತ ಇತರ ಸಂಘಟನೆಯ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English