ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

5:08 PM, Saturday, February 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

High-courtನವದೆಹಲಿ: ಅಂತೂ ಇಂತೂ ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡುವ ತೆಲಂಗಾಣ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ ಜಂಟಿ ರಾಜಧಾನಿ ಮಾಡುವುದಾಗಿ ಹೇಳಿದೆ.

ಕರಡು ಮಸೂದೆಯ ಬಹುತೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಸೀಮಾಂಧ್ರ ಭಾಗದ ನಾಯಕರ ಒತ್ತಡಕ್ಕೆ ಮಣಿದಿಲ್ಲ. ಬದಲಾಗಿ ಇದನ್ನು ಮುಂದಿನ 10 ವರ್ಷಗಳ ಕಾಲ ಜಂಟಿ ರಾಜಧಾನಿಯಾಗಿ ಉಳಿಸಿಕೊಳ್ಳಲು ನಿರ್ಧರಿಸಿದೆ.  ಕೇಂದ್ರ ಸಚಿವ ಸಂಪುಟ ಮಸೂದೆಗೆ ಒಪ್ಪಿಗೆ ನೀಡಿರುವುದರಿಂದ ಮುಂದಿನ ವಾರವೇ ಇದು ಸಂಸತ್‌ನಲ್ಲಿ ಮಂಡನೆಯಾಗಲಿದೆ. ಫೆ.12 ರಂದು ರಾಜ್ಯಸಭೆಯಲ್ಲಿ ಇದನ್ನು ಮಂಡಿಸಲಾಗುತ್ತದೆ.

ಇದೇ ವೇಳೆ ಆಂಧ್ರ ಪ್ರದೇಶ ಇಬ್ಭಾಗಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಅವರು, ಹೈಕಮಾಂಡ್ ಯಾವ ಶಿಸ್ತುಕ್ರಮದ ನಿರ್ಧಾರ ತೆಗೆದುಕೊಂಡರೂ ಎದುರಿಸಲು ಸಿದ್ಧ ಎಂದಿದ್ದಾರೆ. ಅಖಂಡ ಆಂಧ್ರಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಕಿರಣ್‌ಕುಮಾರ್ ರೆಡ್ಡಿ ಅವರಿಂದ ರಾಜಿನಾಮೆ ಪಡೆಯಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ಸಿಎಂ ಸ್ಥಾನದಿಂದ ವಜಾ ಮಾಡಿದರೂ, ಅಖಂಡ ಆಂಧ್ರ ಒತ್ತಾಯ ಕೈ ಬಿಡುವುದಿಲ್ಲ ಎಂದರು.

ಅಖಂಡ ಆಂಧ್ರಕ್ಕಾಗಿ ಒತ್ತಾಯಿಸಿದ ಕಿರಣ್‌ಕುಮಾರ್ ರೆಡ್ಡಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ರಾಷ್ಟ್ರಪತಿ ಭೇಟಿ ಮಾಡಿದ್ದ ರೆಡ್ಡಿ ನೇತೃತ್ವದ ನಿಯೋಗ ಆಂಧ್ರ ವಿಭಜನೆ ಬೇಡ ಎಂದು ಒತ್ತಾಯಿಸಿತ್ತು. ಇದು ಕಾಂಗ್ರೆಸ್‌ಗೆ ಇರಿಸು ಮುರಿಸು ಉಂಟು ಮಾಡಿತ್ತು.  ಆದರೆ ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್, ತೆಲಂಗಾಣ ರಾಜ್ಯ ರಚನೆ ಮಾಡಿಯೇ ಸಿದ್ಧ ಎಂದು ಘೋಷಿಸಿತ್ತು. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿತ್ತು.

ಆಂಧ್ರ ಪ್ರದೇಶ ವಿಭಜನೆ ವಿರೋಧಿಸಿ ಸಲ್ಲಿಸಲಾಗಿದ್ದ 9 ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಎಸ್.ಎ. ಬೊಬ್ಡೆ ಅವರಿದ್ದ ದ್ವಿಸದಸ್ಯ ಪೀಠ ಈ ಎಲ್ಲಾ ಅರ್ಜಿಗಳನ್ನು ವಜಾ ಮಾಡಿ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದಿದೆ.  ಇದಕ್ಕೂ ಮುನ್ನ 2013ರ ನವೆಂಬರ್ 18 ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಅಂದು ಸಹ ರಾಜ್ಯ ವಿಭಜನೆಯಂಥ ವಿಚಾರದಲ್ಲಿ ತಲೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಂದಿನ ನಿರ್ಧಾರವೇ ಇಂದು ಸಹ ಪಾಲಿಸಬೇಕಾಗುತ್ತದೆ ಎಂದು ಶುಕ್ರವಾರ ನಡೆದ ವಿಚಾರಣೆ ವೇಳೆ ಅಭಿಪ್ರಾಯ ಪಟ್ಟಿತು.

ತೆಲಂಗಾಣ ಗದ್ದಲದಿಂದಾಗಿ ಶುಕ್ರವಾರ ಕೂಡ ಉಭಯ ಸದನಗಳ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ ಆರಂಭವಾದ ಮೊದಲ ವಾರವೇ ಸಂಪೂರ್ಣ ತೆಲಂಗಾಣಕ್ಕೆ ಆಹುತಿಯಾಯಿತು.  ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ಆಂಧ್ರ ಪ್ರದೇಶದ ಸಂಸದರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ತಾವು ಕೊಟ್ಟ ಅವಿಶ್ವಾಸ ನಿರ್ಣಯ ನೋಟಿಸ್ ಬಗ್ಗೆ ಸ್ಪೀಕರ್ ಮೀರಾಕುಮಾರ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿಕು. ಅತ್ತ ರಾಜ್ಯಸಭೆಯಲ್ಲೂ ಇದೇ ಸ್ಥಿತಿ ಮರುಕಳಿಸಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English