ನವದೆಹಲಿ: ವಿವಾದಿತ ತೆಲಂಗಾಣ ಬಗೆಗಿನ ರಾಜಕೀಯ ಸಮರ ತೀವ್ರಗೊಂಡಿದೆ. ಆಂಧ್ರ ವಿಭಜನೆ ವಿರೋಧಿಸಿ ವೈಎಸ್ಸಾರ್ ಕಾಂಗ್ರೆಸ್ ನಾಯಕ ಜಗನ್ಮೋಹನ್‌ರೆಡ್ಡಿ ಸೋಮವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸಿ, ಸಾವಿರಾರು ಬೆಂಬಲಿಗರೊಂದಿಗೆ ಬಂಧನಕ್ಕೊಳಗಾಗಿದ್ದಾರೆ. ಇದೇ ವೇಳೆ, ಆಂಧ್ರ ವಿಭಜನೆ ತಡೆಯಲು ಬಿಜೆಪಿ ಸಹಕರಿಸಿದರೆ ನಮ್ಮ ಪಕ್ಷ ಮೋದಿಗೆ ಬೆಂಬಲ ನೀಡಲಿದೆ ಎಂದೂ ಜಗನ್ ಘೋಷಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಲೋಕಸಭೆಯಲ್ಲಿ ಮಂಗಳವಾರ ತೆಲಂಗಾಣ ಮಸೂದೆ ಅಂಗೀಕಾರವಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶದ ಐವರು ಸಂಸದರು ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಭೇಟಿಯಾಗಿದ್ದಾರೆ. ಪ್ರತ್ಯೇಕ ತೆಲಂಗಾಣ ರಚನೆಯನ್ನು ವಿರೋಧಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಡ್ವಾಣಿ, ಈ ಬೇಡಿಕೆಯನ್ನು ಪ್ರಧಾನಿ ಸಿಂಗ್ ಹಾಗೂ ಸೋನಿಯಾ ಮುಂದಿಡುವಂತೆ ಸಲಹೆ ನೀಡಿದ್ದಾರೆ.
ಸೋನಿಯಾ ವಿರುದ್ಧ ಜಗನ್ ಕೆಂಡಕಾರಿದ್ದಾರೆ. ರಾಹುಲ್‌ರನ್ನು ಪ್ರಧಾನಿ ಮಾಡಬೇಕೆಂಬ ಉದ್ದೇಶದಿಂದ ರಾಜ್ಯವನ್ನು ವಿಭಜಿಸಲಾಗುತ್ತಿದೆ. ಸೋನಿಯಾ ರಾಜ್ಯಕ್ಕೆ ಮಾಡಿದ ಅನ್ಯಾಯ ಬ್ರಿಟಿಷರು ಕೂಡ ಮಾಡಿಲಿಕ್ಕಿಲ್ಲ ಎಂದಿದ್ದಾರೆ ಜಗನ್. ತೆಲಂಗಾಣ ವಿರೋಧಿ ಹೋರಾಟದಲ್ಲಿ ಬಿಜೆಪಿ ನಮ್ಮ ಜತೆ ಕೈಜೋಡಿಸಿದರೆ ಮೋದಿಗೆ ಬೆಂಬಲ ನೀಡಲು ಸಿದ್ಧ ಎಂದಿದ್ದಾರೆ.
ಸೀಮಾಂಧ್ರ ನಾಯಕರ ಕೂಗಿಗೆ ಕಿವಿಗೊಡದ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ತೆಲಂಗಾಣ ಪರ ಚರ್ಚೆಗೆ ಸಿದ್ಧತೆ ನಡೆಸಿದೆ. ಜತೆಗೆ, ಕಾಂಗ್ರೆಸ್ ತನ್ನ ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಿದ್ದು, ಇಡೀ ವಾರ ಸದನದಲ್ಲಿ ಹಾಜರಿರುವಂತೆ ಆದೇಶಿಸಿದೆ. ಸರ್ಕಾರದ ನಿರ್ಧಾರಗಳ ಪರವಾಗಿ ಮತ ಚಲಾಯಿಸುವಂತೆಯೂ ಆದೇಶಿಸಿದೆ. ಅಗತ್ಯಬಿದ್ದರೆ ಚರ್ಚೆಯಿಲ್ಲದೇ ತೆಲಂಗಾಣ ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಮಸೂದೆ ಅಂಗೀಕಾರಕ್ಕೆ ಸಹಕರಿಸುವಂತೆ ಮತ್ತೊಮ್ಮೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಮನವಿ ಮಾಡಿದ್ದಾರೆ.
ಸಂಸತ್ ಭವನ ಪ್ರವೇಶಿಸುವ ಮುನ್ನ ಸಂಸದರನ್ನು ತಪಾಸಣೆಗೊಳಪಡಿಸಬೇಕು ಎಂಬ ಒತ್ತಾಯವನ್ನು ಸಂಸದೀಯ ಸಮಿತಿ ತಿರಸ್ಕರಿಸಿದೆ. ಪೆಪ್ಪರ್‌ಸ್ಪ್ರೇ ವಿವಾದದ ಹಿನ್ನೆಲೆಯಲ್ಲಿ ಸಂಸದರ ತಪಾಸಣೆಗೆ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಚರ್ಚಿಸಲು ಸಂಸತ್ ಭವನದ ಭದ್ರತೆಗೆ ಸಂಬಂಧಿಸಿದ 10 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು ಸೋಮವಾರ ತುರ್ತು ಸಭೆ ನಡೆಸಿತು. ಆದರೆ ಸಭೆಯಲ್ಲಿ ಭಿನ್ನಾಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ತಪಾಸಣೆ ಒತ್ತಾಯವನ್ನು ತಿರಸ್ಕರಿಸಲಾಯಿತು. ಈ ನಡುವೆ, ಆಂಧ್ರ ವಿಭಜನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
Click this button or press Ctrl+G to toggle between Kannada and English