ಮಂಗಳೂರು: ಕೇಂದ್ರ ಮೈದಾನದಲ್ಲಿ ಫೆ.18ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಮಾತುಕೇಳಲು ಒಂದುವರೆ ಲಕ್ಷಕ್ಕೂ ಮಿಕ್ಕಿ ಜನ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ದಕ್ಷಿಣ ಕನ್ನಡ 1,676 ಬೂತ್ ಮತ್ತು ಉಡುಪಿಯ 1 ಸಾವಿರ ಬೂತ್‌ಳಿಂದಲೂ ಜನ ಸ್ವಯಂ ಪ್ರೇರಿತರಾಗಿ ವಾಹನ ವ್ಯವಸ್ಥೆಯೊಂದಿಗೆ ಆಗಮಿಸಲಿದ್ದಾರೆ. ಇದಕ್ಕೆ ಜಿಲ್ಲಾಡಳಿತ ನೆರವಿನೊಂದಿಗೆ ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾವೇಶ ವೀಕ್ಷಿಸಲು ನಗರದಲ್ಲಿ 4 ಎಲ್‌ಇಡಿ ಅಳವಡಿಸಲಾಗಿದೆ. ಕೇಂದ್ರ ಮೈದಾನದ ಹೊರಗಡೆ ಎರಡು ಎಲ್‌ಇಡಿ ಅಳವಡಿಸಲಾಗಿದೆ.
ಭಾರತ ಗೆಲ್ಲಿಸಿ ಸಮಾವೇಶ ಸಿದ್ಧತೆ ಮತ್ತು ಯಶಸ್ಸಿಗೆ 20 ದಿನಗಳಿಂದ 2 ಸಾವಿರ ಕಾರ್ಯಕರ್ತರು 35 ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ನೆರವಿನೊಂದಿಗೆ ಪಾರ್ಕಿಂಗ್‌ಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ಸಂಚಾರ ಬದಲಿಸಲಾಗಿದೆ.
ಸಮಾವೇಶದಲ್ಲಿ ಮಧ್ಯಾಹ್ನ 2 ಗಂಟೆಗೆ ಶಂಕರ ಶ್ಯಾನುಭೋಗ್ ಅವರಿಂದ ದೇಶಭಕ್ತಿ ಗಾಯನ ನಡೆಯಲಿದೆ. 3 ಗಂಟೆಗೆ ಸರಿಯಾಗಿ ಬಿ.ಎಸ್. ಯಡಿಯೂರಪ್ಪ ಸಹಿತ ರಾಜ್ಯ ನಾಯಕರು ಭಾಷಣ ಮಾಡುವರು. 3.30ಕ್ಕೆ ನರೇಂದ್ರ ಮೋದಿ ಭಾಷಣ ಆರಂಭವಾಗಲಿದೆ.
20 ಸಾವಿರ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳಾ ಮೋರ್ಚಾ ಕಾರ್ಯಕರ್ತರಿಗೆ ವಿಶೇಷ ಆಸನ ವ್ಯವಸ್ಥೆ ಇದೆ.
ಉಚಿತ ಊಟ: ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಭೆಯಲ್ಲಿ ತಂಪು ಪಾನೀಯ ವಿತರಿಸಲಾಗುವುದು ಎಂದರು.
ಉಕ್ಕಿನ ಮಾನವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಉಕ್ಕು ಮತ್ತು ಮಣ್ಣು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಸಮಾವೇಶದಲ್ಲಿ ದಕ್ಷಿಣ ಕನ್ನಡ ವತಿಯಿಂದ ಉಕ್ಕು ಮತ್ತು ಮಣ್ಣನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಹಸ್ತಾಂತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ವಿ.ಸುನೀಲ್ ಕುಮಾರ್, ಮಾಜಿ ಶಾಸಕ ಕೃಷ್ಣ ಜೆ.ಪಾಲೆಮಾರ್, ಮಾಜಿ ಶಾಸಕ ಎನ್.ಯೋಗೀಶ್ ಭಟ್ ಇದ್ದರು. ಪ್ರತಿ ಮನೆಯಿಂದ ಬನ್ನಿ: ನರೇಂದ್ರ ಮೋದಿ ಕನಸಿನ ಭಾರತ ನನಸಾಗಿಸಲು ಕಾರ್ಯಕ್ರಮಕ್ಕೆ ಪ್ರತಿ ಮನೆಯಿಂದ ಒಬ್ಬರಂತೆ ಎಲ್ಲರೂ ಭಾಗವಹಿಸಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ವಿನಂತಿಸಿದ್ದಾರೆ. 60 ವರ್ಷ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಭದ್ರತೆ ಕಾಪಾಡಲು ಸಾಧ್ಯವಾಗಿಲ್ಲ.
ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವ ಆಡುತ್ತಿದೆ. ಇದಕ್ಕೆಲ್ಲ ಒಂದೇ ಉತ್ತರ ನರೇಂದ್ರ ಮೋದಿ ಪ್ರಧಾನಿ ಆಗುವುದು ಎಂದು ಪ್ರಭು ಹೇಳಿದ್ದಾರೆ.
ಅರಸಿನ ಕುಂಕುಮ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಹಿಳೆಯರಿಗೆ ಅರಸಿನ ಕುಂಕುಮ ನೀಡಿ ಮೋದಿ ಸಮಾವೇಶಕ್ಕೆ ಆಹ್ವಾನ ನೀಡುವ ಮೂಲಕ ಸಾಂಸ್ಕೃತಿಕ ಭಾವನೆಯನ್ನು ಮೀಟಿದ್ದಾರೆ. ಸಮಾವೇಶ ಆಹ್ವಾನ ನೀಡುವ ಜತೆಗೆ ಪ್ರತಿ ಮನೆಯಿಂದಲೂ ಭಾರತ ಗೆಲ್ಲಿಸಲು ದೇಣಿಗೆ ಪಡೆಯುವ ಪದ್ಧತಿಗೆ ನಾಂದಿ ಹಾಡಿದ್ದಾರೆ.
Click this button or press Ctrl+G to toggle between Kannada and English