ಮಂಗಳೂರು/ ದಾವಣಗೆರೆ: ವಂಶವಾದ, ಜಾತಿವಾದ, ಸಂಪ್ರದಾಯವಾದ, ಅವಸರವಾದ. ಈ ನಾಲ್ಕೂ ಅಂಶಗಳು ಕಾಂಗ್ರೆಸ್‌ನಲ್ಲಿ ಮೇಳೈಸಿವೆ. ಇದುವೇ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಂಗಳವಾರ ದಾವಣಗೆರೆಯ ಹೈಸ್ಕೂಲ್ ಮೈದಾನದ ಹಾಗೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ಪ್ರತ್ಯೇಕ ಸಮಾವೇಶದಲ್ಲಿ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದು.
ಕಾಂಗ್ರೆಸ್‌ಗೆ ಲೋಕತಂತ್ರದ ಹೆಸರೇ ಗೊತ್ತಿಲ್ಲ. ಲೋಕತಂತ್ರ ಆಧಾರದಲ್ಲಿ ಜನರ ವಿಶ್ವಾಸವನ್ನೂ ಉಳಿಸಿಕೊಂಡಿಲ್ಲ. ಗಾಂಧೀಜಿ ಇದ್ದಾಗ ಕಾಂಗ್ರೆಸ್‌ನಲ್ಲಿ ಯೋಚನೆ ಹಾಗೂ ವಿಚಾರ ಇದ್ದವು. ಯಾವಾಗ ನಕಲಿ ಗಾಂಧಿಗಳು ಬಂದರೋ ಆಗ ವಿಚಾರ ಮರೆತು ಕೇವಲ ಯೋಚನೆಯಲ್ಲೇ ತೊಡಗಿದರು. ಸೋನಿಯಾ ಹಾಗೂ ರಾಹುಲ್ ದಕ್ಷಿಣ ಭಾರತದಲ್ಲಿ ಕೇವಲ ಕರ್ನಾಟಕಕ್ಕೆ ಮಾತ್ರ ಬರುತ್ತಿದ್ದಾರೆ.
ಪಕ್ಕದಲ್ಲೇ ಆಂಧ್ರಪ್ರದೇಶ ಇದ್ದರೂ ಹೋಗುತ್ತಿಲ್ಲ. ಅಧಿಕಾರಕ್ಕೆ ತಂದವರನ್ನೇ ಒಡೆದು ಆಳುತ್ತಿದ್ದಾರೆ. ತಾವೇ ಮಾಡಿದ ಗಾಯಕ್ಕೆ ಮುಲಾಮು ಹಚ್ಚುವ ಕೆಲಸವನ್ನೂ ಮಾಡುತ್ತಿಲ್ಲ. ಸೀಮಾಂಧ್ರ, ತೆಲಂಗಾಣ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದರು.
ಭಾರತ ದೇಶ ಜೇನುಗೂಡು ಇದ್ದಂತೆ. ಅದರಲ್ಲಿರುವ ಮಕರಂದ ಹೀರಬೇಕೆಂಬುದು ಕಾಂಗ್ರೆಸ್ಸಿನ ಯೋಚನೆ. ಆದರೆ, ಈ ದೇಶ ನಮ್ಮ ತಾಯಿ ಇದ್ದಂತೆ ಎಂಬುದು ಬಿಜೆಪಿಯವರಾದ ನಮ್ಮ ಯೋಚನೆ. ಬಡವನ ಬಡತನವೆಂಬುದು ಅವಸ್ಥೆ ಎಂಬುದು ಕಾಂಗ್ರೆಸ್ಸಿನ ಹೇಳಿಕೆ. ಆದರೆ, ಬಡವನೇ ನಮ್ಮ ಪಾಲಿಗೆ ದರಿದ್ರ ನಾರಾಯಣ, ಆತನ ಸೇವೆಯೇ ಶಿವನ ಸೇವೆ ಎಂಬುದು ನಮ್ಮ ಉದ್ದೇಶ. ಬಡವನ ಬಗ್ಗೆ ಮಾತನಾಡದಿದ್ದರೆ ಕಾಂಗ್ರೆಸ್ಸಿಗರಿಗೆ ನಿದ್ದೆ ಬರುವುದಿಲ್ಲ. ಬಡವರ ಏಳಿಗೆ ಬಗ್ಗೆ ಆಲೋಚಿಸದಿದ್ದರೆ ನಮಗೆ ನಿದ್ದೆ ಬರುವುದಿಲ್ಲ. ದುಡ್ಡು ಗಿಡದಲ್ಲಿ ಹುಟ್ಟುವುದಿಲ್ಲವೆಂಬುದು ಕಾಂಗ್ರೆಸ್‌ನವರ ಮಾತು. ಆದರೆ, ರೈತ ಸುರಿಸುವ ಬೆವರಿನಿಂದ, ಆತ ಬೆಳೆದ ಗಿಡ, ಮರ, ಹಣ್ಣು, ಕಾಳು, ಹೂವಿನಿಂದ ದುಡ್ಡು ಬರುತ್ತದೆಂಬುದು ನಮ್ಮ ಮಾತು. ಸಮಾಜ ಒಡೆದು ಆಳುವುದು ಕಾಂಗ್ರೆಸ್ಸಿನ ನೀತಿ. ಆದರೆ, ಸಮಾಜಗಳನ್ನು ಜೋಡಿಸುವುದು ನಮ್ಮ ಧ್ಯೇಯ ಎಂದರು.
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಎಂಬುದು ಅವಳಿ ಸಹೋದರಿಯರಿದ್ದಂತೆ. ಎಲ್ಲಿ ಕಾಂಗ್ರೆಸ್ ಇರುತ್ತದೋ ಅಲ್ಲಿ ಭ್ರಷ್ಟಾಚಾರವಿರುತ್ತದೆ. ಭ್ರಷ್ಟಾಚಾರ ಎಲ್ಲಿರುತ್ತದೋ ಅಲ್ಲಿ ಕಾಂಗ್ರೆಸ್ ಇರುತ್ತದೆ. ದೆಹಲಿಯಿಂದ ಕೇಂದ್ರ ನೀಡುವ ಒಂದು ರುಪಾಯಿ ಅನುದಾನ ಹಳ್ಳಿ ತಲುಪುವಷ್ಟರಲ್ಲಿ 15 ಪೈಸೆ ಆಗಿರುತ್ತದೆಂಬ ಮಾತನ್ನು ಹಿಂದೆ ರಾಜೀವ್ ಗಾಂಧಿ ಹೇಳಿದ್ದರು. ಕಳೆದ ಆರೂವರೆ ದಶಕದಿಂದ ದೇಶವನ್ನಾಳಿದ ಕಾಂಗ್ರೆಸ್ಸಿನ ಯಾವ ಕೈಗಳು ಉಳಿದ 85 ಪೈಸೆ ನುಂಗುತ್ತಿದ್ದವು ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು.
ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುತ್ತಾರೆ. ರಾಜಸ್ಥಾನ, ಹರಿಯಾಣದಲ್ಲಿ ಅವರದೇ ಪಕ್ಷದ ಎಷ್ಟು ಜನ ನಾಯಕರು ಜೈಲು ಪಾಲಾಗಿದ್ದಾರೆ, ಯಾವ ಕಾರಣಕ್ಕಾಗಿ ಆ ಎಲ್ಲರೂ ಜೈಲಿನಲ್ಲಿದ್ದಾರೆ ಎಂಬ ಸಂಗತಿಯನ್ನು ದೇಶವಾಸಿಗಳ ಮುಂದೆ ಬಹಿರಂಗಪಡಿಸಲಿ. ಗಾಳಿಯಲ್ಲಿ ಜನರನ್ನು ಯಾಮಾರಿಸುವ ನಿಮ್ಮ ಪ್ರವೃತ್ತಿಯನ್ನು ಇನ್ನಾದರೂ ತಿದ್ದಿಕೊಳ್ಳುವುದನ್ನು ಕಲಿಯಿರಿ. ರಾಹುಲ್‌ಗೆ ನಿಜವಾಗಲೂ ಬಡವರ ಬಗ್ಗೆ ಚಿಂತೆ, ಕಾಳಜಿ ಇದ್ದರೆ ಮೊದಲು ಬೆಲೆ ಏರಿಕೆಗೆ ಕಡಿವಾಣ ಹಾಕಿ ಎಂದು ಸಲಹೆ ನೀಡಿದರು.
ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಖ್ಯಾತಿ ಹೊಂದಿದ್ದ ದಾವಣಗೆರೆಯ ಜವಳಿ ಮಿಲ್‌ಗಳು ಒಂದೊಂದಾಗಿ ಮುಚ್ಚುತ್ತಿವೆ. ಆದರೆ, ಗುಜರಾತ್‌ನಲ್ಲಿ ಫಾರ್ಮ್, ಫೈಬರ್, ಫ್ಯಾಬ್ರಿಕ್, ಫ್ಯಾಷನ್, ಫಾರಿನ್ ಎಂಬ ಪಂಚ ತತ್ವ ಅಳವಡಿಸಿಕೊಂಡಿದ್ದರಿಂದ ಸಮೃದ್ಧವಾಗಿದೆ. ಹತ್ತಿ ಬೆಳೆಯುವ ಸನಿಹದಲ್ಲೇ ನೂಲು ತಯಾರಿಸಿ, ಎಳೆಗಳಿಂದ ಬಟ್ಟೆ ಸಿದ್ಧಪಡಿಸಲಾಗುತ್ತದೆ. ಬಟ್ಟೆಯಿಂದ ಧಿರಿಸುಗಳನ್ನು ತಯಾರಿಸಿ, ರಫ್ತು ಮಾಡಲಾಗುತ್ತದೆ ಎಂದರು.
ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. 2014ರ ಚುನಾವಣೆಯಲ್ಲಿ ವ್ಯಕ್ತಿಗಾಗಿ ಮತ ನೀಡಬೇಡಿ, ಪಕ್ಷಕ್ಕಾಗಿ ಮತ ನೀಡಬೇಡಿ, ದೇಶಕ್ಕೆ ಮತ ನೀಡಿ, ದೇಶದ, ಜನರ ರಕ್ಷಣೆಗೆ ಮತ ನೀಡಿ, ದೇಶದ ಪ್ರಗತಿಗೆ, ಅಖಂಡತೆಗಾಗಿ ಮತ ನೀಡಿ. 2014ರ ಚುನಾವಣೆ ಯಾರನ್ನೋ ಅಧಿಕಾರಕ್ಕೇರಿಸುವ ಚುನಾವಣೆಯಲ್ಲ. ಹೊಸ ಭರವಸೆ, ಅತ್ಯುತ್ಸಾಹ ತರುವ, ಭಾರತವನ್ನು ಹೊಸ ಎತ್ತರಕ್ಕೇರಿಸುವ ಗುರಿಯಿಂದ ಈ ಬಾರಿ ಚುನಾವಣೆ ಮೈದಾನದಲ್ಲಿ ಇಳಿಯುತ್ತಿದ್ದೇವೆ. ವಂಶಾಡಳಿತದ ಮುಕ್ತಿಗೆ, ಭ್ರಷ್ಟಾಚಾರದ ಮುಕ್ತಿಗೆ, ಬೆಲೆ ಏರಿಕೆಯಿಂದ ಮುಕ್ತಿಗೆ, ಕೆಟ್ಟ ಆಡಳಿತದ ಮುಕ್ತಿಗೆ, ದೇಶದ ರಕ್ಷಣೆಗೆ, ಜನರ ಸುರಕ್ಷೆಗೆ, ವಾಸ್ತವ್ಯಕ್ಕೆ, ಮನೆಗೆ, ಹೊಟ್ಟೆಯ ಹಿಟ್ಟಿಗೆ, ಅನ್ನಕ್ಕೆ, ರೋಗಿಗಳಿಗೆ ಮದ್ದು ಸಿಗಲು, ಬಡವರ ಒಳಿತಿಗೆ, ಶಿಕ್ಷಣ ಸುಧಾರಣೆಗೆ, ಯುವಕರಿಗೆ ಉದ್ಯೋಗ ಸಿಗಲು, ಮಹಿಳೆಯರ ಗೌರವಕ್ಕೆ, ಕೃಷಿಕರ ಕಲ್ಯಾಣಕ್ಕೆ, ಸ್ವಾವಲಂಬಿ, ಶಕ್ತಿ ಶಾಲಿ, ಸಮೃದ್ಧಿ ಶಾಲಿ, ಪ್ರಗತಿಶಾಲಿ ಭಾರತಕ್ಕಾಗಿ. ಏಕತೆ ಅಖಂಡತೆಗಾಗಿ, ಉತ್ತಮ ಆಡಳಿತ, ಪ್ರಗತಿಗೆ ಎಲ್ಲರೂ ಮತ ನೀಡಬೇಕು ಎಂದರು.
ಕಾಂಗ್ರೆಸ್ ದೇಶವನ್ನು ನಾಶ ಮಾಡಿದೆ. ಇದನ್ನು ಸವಾಲ್ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಉತ್ತರ ನೀಡುವುದು ಬಿಡಿ, ಜೈಲಿಗೆ ಅಟ್ಟುವ ಕೆಲಸ ಮಾಡುತ್ತಿದೆ. ಎಲ್ಲ ನಾಯಕರ ಹಿಂದೆ ಸಿಬಿಐ ಛೂ ಬಿಡುತ್ತಿದೆ. ಪ್ರತಿ ದಿನ ಸಿಬಿಐ ತೋರಿಸಿ ಬೆದರುತ್ತಿದ್ದರು. ಬೇರೆಯವರಂತೆ ಸಿಬಿಐಗೆ ಬೆದರುತ್ತಾರೆ ಎಂದು ಭಾವಿಸಿದ್ದರು. ಆದರೆ ಅವರು ರಾಂಗ್ ನಂಬರ್ ಡಯಲ್ ಮಾಡಿದ್ದಾರೆ ‘ಲೇನೆಕೆ ದೇನೆ ಪಡ್‌ಜಾಯೇಂಗೆ’ ಎಂದು ಮೋದಿ ಗುಡುಗಿದರು. ಕರಾವಳಿಯಲ್ಲಿಯೂ ಕೂಡಾ ಬಿಜೆಪಿ ಕಾರ್ಯಕರ್ತರು ದನಿ ಎತ್ತಿದರೆ ಬೇರೆ ಬೇರೆ ಕಾರಣಗಳಿಂದ ಕಠಿಣ ಕಾಯ್ದೆ ದಾಖಲಿಸಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಂಗಳೂರಿಗೂ ನನಗೂ ಅಡಕೆ ಸಂಬಂಧ ಬಹಳ. ಇಲ್ಲಿ ಅಡಕೆ ದರ ಇಳಿದಾಗ ಒಂದು ನಿಯೋಗ ಗುಜರಾತ್‌ಗೆ ಬಂದೇ ಬರುತ್ತಿತ್ತು. ಗುಜರಾತ್‌ನಲ್ಲಿ ಏನಾದರೂ ಮಾಡಿ ಅಡಕೆ ಮಾರಾಟ ಉತ್ತೇಜಿಸಿದರೆ, ನಮ್ಮ ಕೃಷಿಕರು ಬದುಕಬಹುದು ಎಂದು ಮನವಿ ಮಾಡುತ್ತಿದ್ದರು. ಕರಾವಳಿಯವರು ಬೇಡಿಕೆ ಸಲ್ಲಿಸಿದಾಗ ಈಡೇರಿಸದಿದ್ದರೆ ಹೇಗೆ? ನೆರವು ನೀಡುವಷ್ಟು ನೀಡುತ್ತಿದ್ದೇವೆ. ಆದರೆ ಕೇವಲ ನೆರವಿನಿಂದ ಗಾಡಿ ಎಷ್ಟು ದಿನ ಓಡುತ್ತದೆ. ಇದರ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರ ಕೃಷಿ ನೀತಿ ಮಾಡಬೇಕು.
ರೇಲ್ವೆಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಾಗುತ್ತದೆ. ಆದರೆ, ಕೃಷಿಯ ಬಗ್ಗೆ ಯಾವೊಂದು ಸರ್ಕಾರವೂ ಅಂಥ ಪ್ರಯತ್ನ ಮಾಡಿರಲಿಲ್ಲ. ಆದರೆ, ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಕೀರ್ತಿ, ಶ್ರೇಯಸ್ಸು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಮೋದಿ ಬಿಎಸ್‌ವೈ ಆಡಳಿತಾವಧಿಯನ್ನು ಶ್ಲಾಘಿಸಿದ್ದಾರೆ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಹೊಸ ಪರಂಪರೆಗೆ ಮುನ್ನುಡಿ ಬರೆದಿದೆ. ಇದು ಇತರರಿಗೂ ಪ್ರೇರಣೆಯಾಗಿದೆ.. ಕೃಷಿಯಲ್ಲಿ ನಾವು ಅಭಿವೃದ್ಧಿ ಹೊಂದಿದರೆ ದೇಶವನ್ನು ಅಭಿವೃದ್ಧಿ ಹಳಿ ಮೇಲೆ ವೇಗದಲ್ಲಿ ಸಾಗಲು ಸಾಧ್ಯ ಎಂದರು. 3 ಬಾರಿ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದರು ಮೋದಿ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡೆಸುತ್ತಿರುವ ರ್ಯಾಲಿಗಳಲ್ಲಿ ಟಿಕೆಟ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಈ ರ್ಯಾಲಿಗಳಲ್ಲಿ ಸಂಗ್ರಹವಾಗಿರುವ ಹಣಕ್ಕೆ ಸೇವಾ ತೆರಿಗೆ ಕಟ್ಟಬೇಕು ಎಂಬ ವಿಚಿತ್ರ ನೋಟಿಸ್ ಅನ್ನು ಚಂಡೀಗಡದ ಆದಾಯ ತೆರಿಗೆ ಇಲಾಖೆ ಬಿಜೆಪಿಗೆ ನೀಡಿದೆ. ಪ್ರತಿ ರ್ಯಾಲಿಗಳಲ್ಲೂ 10 ಮುಖಬೆಲೆಯ ಟಿಕೆಟ್ ಅನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸೇವಾ ತೆರಿಗೆ ಕಟ್ಟಲೇಬೇಕು ಎಂದು ಲೂಧಿಯಾನದಲ್ಲಿರುವ ಕೇಂದ್ರ ಅಬಕಾರಿ ಗುಪ್ತಚರ ವಿಭಾಗ 6 ದಿನಗಳ ಹಿಂದೆ ನೋಟಿಸ್ ನೀಡಿತ್ತು. ಇದಕ್ಕೆ ತೀಕ್ಷ್ಣವಾಗಿ ಉತ್ತರ ನೀಡಿದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು, ಸೇವಾ ತೆರಿಗೆ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.
ಮೋದಿ ರ್ಯಾಲಿಯಲ್ಲಿ ನಾವೇನು ಮನೋರಂಜನಾ ಕಾರ್ಯಕ್ರಮ ನಡೆಸುತ್ತಿದ್ದೇವೆಯೇ? ಟಿಕೆಟ್ ರೂಪ ಎನ್ನುವುದಕ್ಕಿಂತ ಹೆಚ್ಚಾಗಿ, ಪಕ್ಷದ ನಿಧಿಗಾಗಿ ಹಣ ಸಂಗ್ರಹಿಸುತ್ತಿದ್ದೇವೆ. ಇದು 10 ಕೋಟಿ ಮೀರಿದೆ. ಇದನ್ನು ಯಾವ ಆಧಾರದ ಮೇಲೆ ಸೇವಾ ತೆರಿಗೆ ವ್ಯಾಪ್ತಿಗೆ ಸೇರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮೋದಿ ಜನಪ್ರಿಯತೆಯನ್ನು ಕುಗ್ಗಿಸುವ ಸಲುವಾಗಿ ಯುಪಿಎ ಸರ್ಕಾರವೇ ಆದಾಯ ತೆರಿಗೆ ಇಲಾಖೆ ಮೂಲಕ ನೋಟಿಸ್ ನೀಡಿಸಿದೆ. ಇದರ ಹಿಂದೆ ದುರುದ್ದೇಶವೇ ಅಡಗಿದೆ ಎಂದಿದ್ದಾರೆ.
ನೋಟಿಸ್ ವಾಪಸ್: ಬಿಜೆಪಿ ತೀಕ್ಷ್ಣವಾಗಿ ಟೀಕೆ ಮಾಡಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ನೋಟಿಸ್ ಅನ್ನು ವಾಪಸ್ ಪಡೆದಿದೆ.
ಸಮಾವೇಶದ ಯಶಸ್ಸಿಗೆ ಶ್ರಮಿಸಿದ ಲಿಂಬಾವಳಿ, ದಾವಣಗೆರೆಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶ ಜವಾಬ್ದಾರಿಯನ್ನು ಶಾಸಕ ಅರವಿಂದ ಲಿಂಬಾವಳಿ ವಹಿಸಿದ್ದರು.
ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಸಾಧಿಸಿದೆ. ನಿರೀಕ್ಷೆಗೂ ಮೀರಿದ ಜನ ಈ ಸಮಾವೇಶದಲ್ಲಿ ಸೇರಿದ್ದು, ಬಿಜೆಪಿ ವಲಯದಲ್ಲಿ ಅತ್ಯಂತ ಹರ್ಷ ಮೂಡಿಸಿದೆ. ದಾವಣಗೆರೆಯ ಸಮಾವೇಶದ ಸಿದ್ಧತೆಯ ಜವಾಬ್ದಾರಿ ಹೊತ್ತ ಅರವಿಂದ ಲಿಂಬಾವಳಿ ಅವರು ಕಳೆದ ಒಂದು ವಾರದಿಂದ ದಾವಣಗೆರೆಯಲ್ಲೇ ಇದ್ದು ಸಕಲ ಸಿದ್ಧತೆಯನ್ನು ನಿರ್ವಹಿಸಿದ್ದರು. ಸಮಾವೇಶದ ಯಶಸ್ಸಿಗೆ ಬಿಜೆಪಿ ರಾಜ್ಯ ಘಟಕದಿಂದ ಅತೀವ ಪ್ರಶಂಸೆ ವ್ಯಕ್ತವಾಗಿದೆ. ಸಮಾವೇಷದಲ್ಲಿ 1.5 ಲಕ್ಷ ಜನ ಸೇರಿದ್ದರು.
ಕರಿಮೆಣಸು ಔಷಧ, ಮಸಾಲೆಗೆ ಬಳಕೆಯಾಗುವುದು ನಮಗೆ ಗೊತ್ತಿದೆ. ಕಾಂಗ್ರೆಸ್ ಕಮಾಲ್ ನೋಡಿ. ಅವರು ಸಂಸತ್‌ನಲ್ಲಿ ಅದನ್ನು ಬಳಸಿ ಪೆಪ್ಪರ್ ಸ್ಪ್ರೇ ಮಾಡಿದರು. ಇಡೀ ಸಂಸತ್ ಕೆಮ್ಮುತ್ತಿತ್ತು! ಆಗ ಎಲ್ಲರೂ ಆಪ್ ಪಾರ್ಟಿ ಸೇರಿದರೋ ಎಂಬಂತೆ ಭಾಸವಾಗುತ್ತಿತ್ತು, ಎಲ್ಲರ ಕಣ್ಣಲ್ಲಿ ನೀರು ತುಂಬಿತ್ತು ಎಂದು ಪರೋಕ್ಷವಾಗಿ ಕೇಜ್ರಿವಾಲರ ಕೆಮ್ಮಿಗೆ ಲೇವಡಿ ಮೋದಿ ಮಾಡಿದರು.
ನರೇಂದ್ರ ಮೋದಿ ದಾವಣಗೆರೆಯಲ್ಲಿ ಕನ್ನಡದಲ್ಲೇ ನನ್ನ ಸಹೋದರ, ಸಹೋದರಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದರೆ, ಮಂಗಳೂರಿನಲ್ಲಿ ‘ಕರಾವಳಿ ಕರ್ನಾಟಕದ ಎನ್ನ ಆತ್ಮಿಯ ಬಂಧುಲೆ, ಮೋಕೆದ ನಮಸ್ಕಾರ’ ಎಂದು ತುಳುವಿನಲ್ಲಿ ಭಾಷಣ ಆರಂಭಿಸಿ ನೆರೆದ ಜನರ ಮನ ಗೆಲ್ಲಲು ಯತ್ನಿಸಿದರು.
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 272ಕ್ಕೂ ಹೆಚ್ಚು ಕಮಲಗಳನ್ನು ನೀವು ಕಳಿಸಿಕೊಟ್ಟಲ್ಲಿ, ಅದೇ ಕಮಲದಲ್ಲಿ ಶ್ರೀಲಕ್ಷ್ಮಿಯನ್ನೂ ಕೂಡಿಸಿ ವಾಪಸ್ ಕಳಿಸುವುದು ನನ್ನ ಜವಾಬ್ಧಾರಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭರವಸೆ ನೀಡಿದರು.
Click this button or press Ctrl+G to toggle between Kannada and English