ಪದೇ ಪದೆ ಕಲಾಪ ಮುಂದೂಡಿಕೆ; ಪ್ರತಿಭಟನೆ ಮಧ್ಯೆ ತೆಲಂಗಾಣ ಬಿಲ್ ಪಾಸ್; 29ನೇ ರಾಜ್ಯ ಉದಯ

12:54 PM, Friday, February 21st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Telangana-Billನವದೆಹಲಿ: ದೇಶಕ್ಕೆ ಇನ್ನೊಂದು ರಾಜ್ಯದ ಸಂತಸ. 29ನೇ ರಾಜ್ಯವಾಗಿ ತೆಲಂಗಾಣ ಉದಯಕ್ಕೆ ಗುರುವಾರ ರಾಜ್ಯಸಭೆ ಸಾಕ್ಷಿಯಾಯಿತು. ಮಂಗಳವಾರವಷ್ಟೇ ಲೋಕಸಭೆಯಲ್ಲಿ ತೆಲಂಗಾಣ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಎರಡು ದಿನಗಳ ಹಗ್ಗಜಗ್ಗಾಟದ ನಡುವೆ ಗುರುವಾರ ರಾತ್ರಿ 08.07 ಗಂಟೆಗೆ ಹೊಸ ರಾಜ್ಯದ ಉದಯವಾಯಿತು.

ಆದರೆ ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೇಕು. ಆಗಷ್ಟೇ ಈ ರಾಜ್ಯ ಉದಯವಾಗಿದೆ ಎಂಬುದು ಅಧಿಕೃತವಾಗುತ್ತದೆ.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಸಮರ ನಡೆದರೂ ಕೂಡ, ಮಸೂದೆಗೆ ಬೆಂಬಲ ನೀಡುತ್ತೇವೆ ಎಂಬ ಬಿಜೆಪಿಯ ಭರವಸೆ ಸರ್ಕಾರದ ಪಾಲಿಗೆ ನೀರಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂಥ ಸಂಭ್ರಮವಾಯಿತು. ಆದರೆ ಸ್ವಪಕ್ಷದವರ ವಿರೋಧ ಮಾತ್ರ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಇರಿಸು ಮುರಿಸು ಉಂಟು ಮಾಡಿತು.

ಗದ್ದಲವೋ ಗದ್ದಲ: ಬೆಳಗ್ಗಿನಿಂದಲೂ ಗದ್ದಲ, ಇನ್ನು 15 ನಿಮಿಷಗಳಲ್ಲೇ ಸರಿಹೋಗುತ್ತೆ, ಮತ್ತೆ ಸೇರುವ ಎಂಬ ಅದಮ್ಯ ವಿಶ್ವಾಸ ಉಪ ಸಭಾಪತಿ ಅವರದ್ದು.

ಉಪಸಭಾಪತಿ ಮಧ್ಯಪ್ರವೇಶ: ಆಗಾಗ ರಾಜ್ಯಸಭೆ ಮುಂದೂಡಲ್ಪಡುತ್ತಿದ್ದರಿಂದ, ಗದ್ದಲಕ್ಕೆ ಇತಿಶ್ರೀ ಹಾಡಲು ಸಭಾಪತಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೇ ಮುಂದಾದರು. ರಾಜ್ಯಸಭೆಯ ಸರ್ವ ಪಕ್ಷಗಳ ನಾಯಕರ ಸಭೆ ಕರೆದ ಅವರು ಗದ್ದಲ ನಿವಾರಣೆಗಾಗಿ ಉಪಾಯ ಕೇಳಿದರು. ಈ ಸಂದರ್ಭದಲ್ಲಿ ತೆಲಂಗಾಣ ಕುರಿತಂತೆ ಸದನದಲ್ಲಿ ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸಿದರು. ಹೀಗಾಗಿ ಸಂಜೆ 4 ಗಂಟೆಗೆ ಕಲಾಪ ಆರಂಭವಾಯಿತು. ಆದರೂ ಗದ್ದಲ ಮುಂದುವರಿದೇ ಇತ್ತು.

ಕೇಂದ್ರಕ್ಕೆ ಮುಜುಗರ ತಂದ ಚಿರಂಜೀವಿ:ಲೋಕಸಭೆಯಾಯಿತು, ರಾಜ್ಯಸಭೆಯಲ್ಲೂ ಕೇಂದ್ರದ ಯುಪಿಎ ಸರ್ಕಾರಕ್ಕೆ ಮುಜುಗರದ ಪ್ರಸಂಗ. ಪ್ರಧಾನಿ ಮನಮೋಹನ್ ಸಿಂಗ್ ಅವರ ಉಪಸ್ಥಿತಿಯಲ್ಲೇ ಕೇಂದ್ರದ ಸಚಿವರೊಬ್ಬರು ತೆಲಂಗಾಣ ರಚನೆಯನ್ನು ತೀವ್ರವಾಗಿ ವಿರೋಧಿಸುವ ಮೂಲಕ ಇಡೀ ಸರ್ಕಾರವೇ ಪ್ರತಿಪಕ್ಷಗಳ ಬಾಯಿಗೆ ಈಡಾಗುವಂತೆ ಮಾಡಿದರು.

ರಾಜ್ಯಸಭೆಯಲ್ಲಿ ಮಸೂದೆ ಸಂಬಂಧ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಅವರು ತೆಲಂಗಾಣ ರಚನೆಯನ್ನು ವಿರೋಧಿಸಿದರು. ನಾವು ಜನರನ್ನು ಪ್ರತಿನಿಧಿಸುತ್ತೇವೆ, ಕೆಲವೊಮ್ಮೆ ಪಕ್ಷ ಮತ್ತು ಸರ್ಕಾರದ ವಿರುದ್ಧವೂ ಮಾತನಾಡಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಸರ್ಕಾರ ಪಕ್ಷದಲ್ಲೇ ಒಪ್ಪಿಗೆ ಪಡೆಯದೇ ತೆಲಂಗಾಣ ರಚನೆಗೆ ಮುಂದಾಗಿದೆ ಎಂದು ಆರೋಪಿಸಿದರು. ಇದರ ಜೊತೆಗೆ ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಆಂಧ್ರ ಪ್ರದೇಶ ಈಗ ತ್ರಿಶಂಕು ಸ್ವರ್ಗ. ಆಂಧ್ರ ವಿಭಜನೆ ವಿರೋಧಿಸಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ರಾಜಿನಾಮೆ ನೀಡಿದ್ದು, ಇದನ್ನು ಇನ್ನೂ ರಾಜ್ಯಪಾಲರು ಸ್ವೀಕರಿಸಿಲ್ಲ. ಅಲ್ಲದೆ ಸದ್ಯದ ವಿದ್ಯಮಾನದ ಬಗ್ಗೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಲ್ಲದೆ ರಾಜಿನಾಮೆ ಸ್ವೀಕಾರದ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಹೇಳದೇ ಇರುವುದರಿಂದ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆಯೂ ರಾಜ್ಯಪಾಲರು ಕಿರಣ್ ಕುಮಾರ್ ರೆಡ್ಡಿ ಅವರಿಗೆ ಸೂಚಿಸಿಲ್ಲ. ಹೀಗಾಗಿ ಮುಂದೆ ಏನಾಗುತ್ತದೆ ಎಂಬ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಮಸೂದೆಗೆ ಒಪ್ಪಿಗೆ ಸಿಗುತ್ತಿದ್ದಂತೆ ತೆಲಂಗಾಣ ಭಾಗದಲ್ಲಿ ಸಂತಸದ ಹೊಳೆಯೇ ಹರಿದಿದೆ. ತೆಲಂಗಾಣ ಭಾಗದಲ್ಲೆಲ್ಲಾ ಜನತೆ ಬಣ್ಣ ಎರಚಿ, ಕುಣಿದು ಕುಪ್ಪಳಿಸಿದರು.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಅಥವಾ ಇಲ್ಲವೋ ಎಂಬಂಥ ಪರಿಸ್ಥಿತಿಗೂ ಹಿರಿಯರ ಮನೆ ಸಾಕ್ಷಿಯಾಯಿತು. ತೆಲಂಗಾಣ ಚರ್ಚೆ ಸಂಬಂಧ ಮಧ್ಯ ಪ್ರವೇಶಿಸಿದ ಪ್ರಧಾನಿ ಅವರ ರಕ್ಷಣೆಗೆ ನಿಂತದ್ದು ಸುಮಾರು 4 ರಿಂದ 5 ಮಂದಿ. ಪ್ರಧಾನಿ ಸುತ್ತುವರಿದು ನಿಂತ ಅವರು, ತೆಲಂಗಾಣ ವಿರೋಧಿ, ಸೀಮಾಂಧ್ರ ಸಂಸದರಿಂದ ರಕ್ಷಣೆ ಒದಗಿಸಿದರು. ಇದಕ್ಕೆ ಕಾರಣ, ಲೋಕಸಭೆಯಲ್ಲಿ ಆದ ಘಟನೆ. ಕೆಳ ಸದನದಲ್ಲಿ ಪೆಪ್ಪರ್ ಸ್ಪ್ರೆ ಮಾಡಿದ್ದ ಸೀಮಾಂಧ್ರ ಸಂಸದರ ಆರ್ಭಟಕ್ಕೆ ಹೆದರಿದ ಸಚಿವರು ಪ್ರಧಾನಿ ರಕ್ಷಣೆಗೆ ನಿಂತುಕೊಳ್ಳಬೇಕಾಯಿತು. ಪ್ರಧಾನಿ ಮಾತನಾಡುತ್ತಿದ್ದರೆ, ಸೀಮಾಂಧ್ರ ಭಾಗದ ಸಂಸದರು ಮಸೂದೆಯ ಪ್ರತಿಯನ್ನು ಚೂರು ಚೂರು ಮಾಡಿದರು. ಇದೂ ಒಂದು ರೀತಿಯ ಅವಮಾನವೇ…

ಮುಂದಿನ 5 ವರ್ಷಗಳ ಕಾಲ ಸೀಮಾಂಧ್ರ ಭಾಗಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲಾಗುತ್ತದೆ. ಆರು ಅಂಶಗಳ ಅಭಿವೃದ್ಧಿ ಮಾರ್ಗಸೂಚಿಯನ್ನು ತಯಾರಿಸಲಿದ್ದೇವೆ. ಕೇವಲ 5 ವರ್ಷ ಸಾಲದು, 10 ವರ್ಷಗಳ ಕಾಲವಾದರೂ ವಿಶೇಷ ರಾಜ್ಯ ಸ್ಥಾನಮಾನ ನೀಡಿ. ಜೊತೆಗೆ ರಾಜಧಾನಿ ಬಗ್ಗೆ ಸ್ಪಷ್ಟನೆ ನೀಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English