ವಿಭಜನೆ ಜತೆಗೆ ಆಂಧ್ರಕ್ಕೆ ಕೇಂದ್ರಾಡಳಿತದ ನೆರಳು

3:38 PM, Saturday, February 22nd, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Jairam-Rameshನವದೆಹಲಿ: ಒಂದು ಕಡೆ ಆಂಧ್ರ ವಿಭಜನೆ ಪ್ರಕ್ರಿಯೆ ಆರಂಭವಾಗಿದ್ದರೆ, ಇನ್ನೊಂದೆಡೆ  ರಾಷ್ಟ್ರಪತಿ ಆಳ್ವಿಕೆಗೆ ಕ್ಷಣಗಣನೆ ಆರಂಭವಾಗಿದೆ.

ತೆಲಂಗಾಣ ಮಸೂದೆಗೆ ರಾಜ್ಯಸಭೆಯಿಂದಲೂ ಅನುಮೋದನೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಂಧ್ರವಿಭಜನೆ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದೆ. ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಹಂಚಿಕೆಗೆ ಸಂಬಂಧಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ.

ಇವುಗಳಲ್ಲಿ ಒಂದು ಸಮಿತಿ ಅಖಿಲ ಭಾರತ ಸೇವೆಗಳ ಅಡಿ ಬರುವ ಅಧಿಕಾರಿಗಳನ್ನು ಹಂಚಿಕೆ ಮಾಡಿದರೆ ಇನ್ನೊಂದು ಸಮಿತಿ ರಾಜ್ಯಮಟ್ಟದ ಅಧಿಕಾರಿಗಳ ವರ್ಗಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಜೈರಾಂ ರಮೇಶ್ ಮಾಹಿತಿ ನೀಡಿದ್ದಾರೆ. ಸಂಯುಕ್ತ ಆಂಧ್ರದಲ್ಲಿ ಸುಮಾರು 84 ಸಾವಿರ ರಾಜ್ಯ ಸರ್ಕಾರಿ ನೌಕರರಿದ್ದಾರೆ.

ಅಂಕಿತದ ಬಳಿಕ ನೋಟಿಫಿಕೇಷನ್: ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದಿರುವ ಆಂಧ್ರಪ್ರದೇಶ ಪುನರ್ ವಿಂಗಡಣೆ ಮಸೂದೆ- 2014 ಅನ್ನು ಶೀಘ್ರದಲ್ಲೇ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗುವುದು. ಒಪ್ಪಿಗೆ ಮುದ್ರೆ ಬಿದ್ದ ಕೂಡಲೇ ರಾಜ್ಯ ವಿಭಜನೆ ಕುರಿತು ನೋಟಿಫಿಕೇಷನ್ ಹೊರಡಿಸಲಾಗುವುದು.

ಛತ್ತೀಸ್‌ಗಡ, ಜಾರ್ಖಂಡ್ ಮತ್ತು ಉತ್ತರಾಖಂಡದ ವಿಚಾರದಲ್ಲಿ ಹೊಸ ರಾಜ್ಯ ರಚನೆಯ ಕೆಲಸ ಕಾರ್ಯಗಳು(ಅಪಾಯಿಂಟೆಡ್ ಡೇ) ನೋಟಿಫಿಕೇಷನ್ ಹೊರಬಿದ್ದ ಮೂರು ತಿಂಗಳ ಬಳಿಕ ಆರಂಭವಾಗಿತ್ತು.

ಸಂವಿಧಾನಾತ್ಮಕ: ಆಂಧ್ರವಿಭಜನೆ ಅಸಾಂವಿಧಾನಿಕ ಎನ್ನುವ ಆರೋಪವನ್ನು ಕೇಂದ್ರ ಸಚಿವ ಜೈರಾಮ್ ರಮೇಶ್ ತಿರಸ್ಕರಿಸಿದ್ದಾರೆ. ಸಂವಿಧಾನದ 3 ಮತ್ತು 4ನೇ ಅನುಚ್ಛೇದವು ರಾಜ್ಯವಿಭಜನೆ ಅಧಿಕಾರವನ್ನು ಕೇಂದ್ರ ಮತ್ತು ಸಂಸತ್ತಿಗೆ ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.

ಯಾವ ಪಕ್ಷವೂ ಸರ್ಕಾರ ರಚಿಸಲ್ಲ: ಆಂಧ್ರವಿಭಜನೆ ವಿರೋಧಿಸಿ ಕಿರಣ್ ಕುಮಾರ್ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಅತಂತ್ರ ಸ್ಥಿತಿಯಲ್ಲಿರುವ ಆಂಧ್ರದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ! ಹೀಗೆಂದು ಸ್ವತಃ ರಾಜ್ಯಪಾಲರೇ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲೂ ಆಂಧ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ. ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ವೇಳೆ ಕಿರಣ್ ಕುಮಾರ್ ರೆಡ್ಡಿ ಅವರು ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ವರೆಗೆ ಪ್ರಭಾರಿಯಾಗಿ ಮುಂದುವರಿಯಲೂ ನಿರಾಕರಿಸಿದ್ದರು. ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ರಾಜ್ಯಪಾಲರಿಗೆ ಸ್ಪಷ್ಟವಾಗಿ ಸೂಚಿಸಿದ್ದರು.

ಆಂಧ್ರ ವಿಭಜನೆಯ ಬಳಿಕ ಸೀಮಾಂಧ್ರಕ್ಕೆ ಹೊಸ ರಾಜಧಾನಿ ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ಹೇಳಿಕೊಂಡಿರುವಂತೆ ತೆಲಂಗಾಣ ರಾಜ್ಯ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ 45 ದಿನಗಳೊಳಗೆ ಸೀಮಾಂಧ್ರಕ್ಕೆ ಹೊಸ ರಾಜಧಾನಿ ಆಯ್ಕೆ ಮಾಡಬೇಕು. 10 ವರ್ಷದವರೆಗೆ ಹೈದರಾಬಾದ್ ಎರಡೂ ರಾಜ್ಯಗಳ ಪಾಲಿಗೆ ಜಂಟಿ ರಾಜಧಾನಿಯಾಗಲಿದೆ ನಿಜ. ಆದರೂ ರಾಯಲಸೀಮಾದ ಜನ ಆದಷ್ಟು ಶೀಘ್ರ ಹೊಸ ರಾಜಧಾನಿ ಆಯ್ಕೆಮಾಡುವಂತೆ ಒತ್ತಡ ಹೇರಬಹುದು. ಸದ್ಯ ವಿಶಾಖಪಟ್ಟಣ, ವಿಜಯವಾಡ, ಕರ್ನೂಲು ಮತ್ತು ತಿರುಪತಿ ಸೀಮಾಂಧ್ರದ ರಾಜಧಾನಿಗಾಗಿ ಪೈಪೋಟಿಯಲ್ಲಿವೆ. ಇವುಗಳಲ್ಲಿ ವಿಶಾಖಪಟ್ಟಣ ಮತ್ತು ವಿಜಯವಾಡದ ಕುರಿತು ಬಹುತೇಕರ ಒಲವಿದೆ.

ಬಾಂಬ್ ಸ್ಫೋಟದ ಬೆದರಿಕೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಿಂದ ಬರುವ ಅಥವಾ ಹೋಗುವ ವಿಮಾನವೊಂದರಲ್ಲಿ ಸ್ಫೋಟಕಗಳ ಸಾಗಣೆ ಮಾಡಲಾಗುತ್ತದೆ. ಅವುಗಳನ್ನು ವಿಮಾನ ಸ್ಫೋಟಕ್ಕೆ ಬಳಸಲಾಗುವುದು ಎಂದು ಏರ್‌ಪೋರ್ಟ್‌ಗೆ ಬಂದ ಅನಾಮಧೇಯ ಪತ್ರವೊಂದರಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English