ಬೆಂಗಳೂರು: ಅನಾರೋಗ್ಯಕ್ಕೀಡಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ನಟ ಮತ್ತು ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ವೆಂಟಿಲೇಟರ್ ತೆಗೆಯುವ ಸಾಧ್ಯತೆ ಇದೆ.
ಪ್ರಸ್ತುತ ಅಂಬರೀಶ್ ಅವರಿಗೆ ಕೃತಕ ಉಸಿರಾಟವನ್ನು ಮುಂದುವರೆಸಲಾಗಿದ್ದು, ದೇಶದಲ್ಲಿ ಶೇಖರಣೆಯಾಗಿದ್ದ ನೀರಿನ ಅಂಶವನ್ನು ಹೊರತೆಗೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರತಿ ಗಂಟೆಗೊಮ್ಮೆ ವೈದ್ಯರು ಅಂಬರೀಶ್ ಅವರ ಆರೋಗ್ಯ ವಿಚಾರಣೆ ಮಾಡುತ್ತಿದ್ದು, ಅಂಬಿ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸಿದ್ದಾರೆ. ಅಂಬರೀಶ್ ಅವರ ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದೆ. ಕಿಡ್ನಿ ಕೂಡ ಸುಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಗಣ್ಯರ ಸಂಖ್ಯೆ ಮುಂದುವರೆದಿದ್ದು, ಇಂದು ಚಿತ್ರನಿರ್ಮಾಪಕ ರಾಮು ಮತ್ತು ನಟಿ ಮಾಲಾಶ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಂಬರೀಶ್ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ ಧಾರ್ಮಿಕ ಮುಖಂಡರೂ ಕೂಡ ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದ್ದಾರೆ. ಈ ನಡುವೆ ಆಸ್ಪತ್ರೆಯ ಮುಂಭಾಗದಲ್ಲಿ ರಜನಿಕಾಂತ್ ಅಭಿಮಾನಿಗಳ ಸಂಘದ ಸದಸ್ಯರು ಅಂಬರೀಶ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪೂಜೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಹಾರೈಸಿದರು.
ಒಟ್ಟಾರೆ ನಾಲ್ಕನೇ ದಿನವೂ ಅಂಬರೀಶ್ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ರಾಜ್ಯಾದ್ಯಂತ ಅವರ ಅಭಿಮಾನಿಗಳು ಶೀಘ್ರ ಚೇತರಿಕೆಗಾಗಿ ಹಾರೈಸುತ್ತಿದ್ದಾರೆ.
Click this button or press Ctrl+G to toggle between Kannada and English