ಬೆಂಗಳೂರು: ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ಹಿರಿಯ ನಟ, ವಸತಿ ಸಚಿವ ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.
ಕಳೆದ ಒಂದು ವಾರದಿಂದ ಅಂಬರೀಷ್ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರು ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಂಬಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ವೈದ್ಯರು ಹಾಗೂ ಅಂಬರೀಷ್ ಅವರ ಪತ್ನಿ ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ ರಜನಿ, ಹೆಚ್ಚಿನ ಚಿಕಿತ್ಸೆಗಾಗಿ ಅಂಬರೀಷ್ ಅವರನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಂಬರೀಷ್ ಅವರನ್ನು ವಿದೇಶಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುವಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅಂಬಿ ಕುಟುಂಬ ಮನವಿ ಮಾಡಿದೆ. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆ ಹಿರಿಯ ವೈದ್ಯ ರಣದೀಪ್ ಗಲೇರಿಯಾ ಅವರು ಇಂದು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ, ಅಂಬರೀಷ್ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ ಅವರು ನೀಡುವ ವರದಿಯ ಆಧಾರದ ಮೇಲೆ ಅಂಬರೀಷ್ ಅವರನ್ನು ವಿಶೇಷ ವಿಮಾನದಲ್ಲಿ ವಿದೇಶಕ್ಕೆ ಕರೆದೊಯ್ಯುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂಬಿಯ ಆತ್ಮೀಯ ಸ್ನೇಹಿತರೂ ಆಗಿರುವ ರಜನಿ ಸಹ ಇತ್ತೀಚಿಗೆ ಸಿಂಗಾಪುರದ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕ್ಷೇಮವಾಗಿ ಹಿಂದಿರುಗಿದ್ದರು.
Click this button or press Ctrl+G to toggle between Kannada and English