ಬೆಂಗಳೂರು: ಚಿತ್ರರಂಗಕ್ಕೆ ಈಗಷ್ಟೆ ಚಿಗುರುತ್ತಿದ್ದ ಯುವ ನಟಿ, ‘ಮನದ ಮರೆಯಲ್ಲಿ’ ಚಿತ್ರದ ನಾಯಕಿ ವಿಂದ್ಯಾ (24) 85 ಮಧುಮೇಹ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರಿಯಕರನ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಆತ್ಮಹತ್ಯೆ ಯತ್ನಕ್ಕೆ ಮೂಲ ಕಾರಣ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಮಾಗಡಿ ರಸ್ತೆ ದಾಸರಹಳ್ಳಿಯಲ್ಲಿರುವ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಮನೆಯಲ್ಲಿದ್ದ 85 ಮಧುಮೇಹ ಮಾತ್ರೆಗಳನ್ನು ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ವಿಂದ್ಯಾರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ತಿಂಗಳಿಂದ ಮಂಜುನಾಥ ಎಂಬಾತನನ್ನು ವಿಂದ್ಯಾ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಪ್ರೀತಿ ಹೆಸರಿನಲ್ಲಿ ಮಂಜುನಾಥ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಾಯಿ ನಾಗಮ್ಮ ಹೇಳಿದ್ದಾರೆ.
ಘಟನೆ ವಿವರ: ತುಮಕೂರು ಜಿಲ್ಲೆ ತಿಪಟೂರು ಮೂಲದ ನಾಗಮ್ಮ ಹಾಗೂ ರಂಗಸ್ವಾಮಿ ದಂಪತಿಯ ಮಗಳು ವಿಂದ್ಯಾ ಬಡ ಕುಟುಂಬದಿಂದ ಬಂದವರು. ತಂದೆ-ತಾಯಿ ಭಾಗಶಃ ದೃಷ್ಟಿ ವಿಕಲಚೇತನರು. ನಾಗಮ್ಮ ಬೌರಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಎಸ್‌ಟಿಡಿ ಬೂತ್ ನಡೆಸುತ್ತಾರೆ. ತಂದೆ ರಂಗಸ್ವಾಮಿ ಟರ್ಫ್ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಶ್ರೀಕಿ ಹಾಗೂ ಅಜಯ್‌ರಾವ್ ನಾಯಕ ನಟರಾಗಿರುವ ‘ಮನದ ಮರೆಯಲ್ಲಿ’ ಚಿತ್ರಕ್ಕೆ ವರ್ಷದ ಹಿಂದೆಯೇ ಆಡಿಷನ್ ನಡೆಯುತ್ತಿತ್ತು. ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದ ವಿಂದ್ಯಾ ಆಡಿಷನ್‌ನಲ್ಲಿ ಭಾಗವಹಿಸಿ ನಾಯಕಿ ಯಾಗಿ ಆಯ್ಕೆಯಾಗಿದ್ದರು. 5 ತಿಂಗಳ ಹಿಂದೆ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿತ್ತು. ಬಳಿಕ ವಿಂಧ್ಯಾ ಬಳಿಕ ಕೆಲವು ಪಾರ್ಟಿಗಳು, ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಈ ನಡುವೆ ಕಾರ್ಯಕ್ರಮ ಆಯೋಜಕ ಮಂಜುನಾಥ ಎಂಬಾತನ ಪರಿಚಯವಾಗಿತ್ತು. ಬಳಿಕ ಇದು ಪ್ರೀತಿಗೆ ತಿರುಗಿ ಮೂರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮಾನಸಿಕವಾಗಿ ಕುಗ್ಗಿ ಹೋಗಿದ್ದಳು: ವಿಂದ್ಯಾ, ಪ್ರಿಯಕರ ಮಂಜುನಾಥ ಹಾಗೂ ಸ್ನೇಹಿತರು ಸೇರಿ 9 ಜನ ಕೆಲ ದಿನಗಳ ಹಿಂದೆ ಶಿಮ್ಲಾ ಸೇರಿದಂತೆ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮಂಜುನಾಥ, ವಿಂದ್ಯಾ ಜತೆ ಸಲುಗೆಯಿಂದ ಇರುತ್ತಿದ್ದ. ಆದರೆ ಪ್ರವಾಸ ಮುಗಿಸಿಕೊಂಡ ಬಂದ ಬಳಿಕ ವಿಂದ್ಯಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎಂದು ತಾಯಿ ನಾಗಮ್ಮ ಹೇಳಿದರು.
ಸಿನಿಮಾ ಮಾಡಬಾರದು: ಪ್ರವಾಸದಿಂದ ಬಂದ ಬಳಿಕ ಮಂಜುನಾಥ ವಿಂದ್ಯಾಳಿಗೆ ಸಿನಿಮಾಗಳನ್ನು ಮಾಡಬಾರದು, ಆಡಿಯೋ ಬಿಡುಗಡೆ, ಚಿತ್ರದ ಪ್ರಮೋಶನ್ ಹೀಗೆ ಎಲ್ಲಿಗೂ ಹೋಗಬಾರದು ಎಂದು ಕಟ್ಟಳೆಗಳನ್ನು ಹೇರುತ್ತಿದ್ದ.
ಈ ಬಗ್ಗೆ ವಿಂದ್ಯಾ ಮೂರು ದಿನಗಳ ಹಿಂದೆಯೇ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ‘ನಾನು ಮತ್ತು ಮಂಜುನಾಥ್ ಪ್ರೀತಿಸಿದ್ದು ನಿಜ. ಆದರೆ, ಬರುಬರುತ್ತ ಆತನ ಸ್ವಭಾವ ಸರಿ ಕಾಣಲಿಲ್ಲ. ಹೀಗಾಗಿ ದೂರವಾಗಿದ್ವಿ. ಮಂಜುನಾಥ್ ಮಾತ್ರ ಪ್ರತಿ ದಿನ ನನಗೆ ಕಾಟ ಕೊಡಲಾರಂಭಿಸಿದ. ಫೋನ್ ಮಾಡಿ ಅಶ್ಲೀಲವಾಗಿ ಬೈಯ್ಯುತ್ತಿದ್ದ. ನನ್ನ ಮೇಲೆ ಅಪಪ್ರಚಾರ ಮಾಡತೊಡಗಿದ. ಒಮ್ಮೆ ಸಿಗರೇಟಿನಿಂದ ಸುಟ್ಟು ಹಿಂಸಿದ್ದ. ಇದರಿಂದ ನಾನು ತುಂಬಾ ನೊಂದಿದ್ದೇನೆ. ಜೀವನ ಸಾಕಾಗಿದೆ. ಅವನ ಹಿಂಸೆ ತಡೆದುಕೊಂಡು ಬದುಕಿರುವುದೇ ಹೆಚ್ಚು’ ಎಂದಿದ್ದಳು. ಮಂಜುನಾಥ್‌ನಿಂದ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದ ಆಕೆ, ‘ಅವನ ಪ್ರೀತಿಯನ್ನು ಒಪ್ಪಿಕೊಂಡು ಅವನ ಜೊತೆ ಹೋದರೆ ನನ್ನ ಕೊಂದೇ ಬಿಡುತ್ತಾನೆ’ ಎಂದು ಆತಂಕ ತೋಡಿಕೊಂಡಿದ್ದಳು.
ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಕನಸು ಕಂಡಿದ್ದ ವಿಂದ್ಯಾಗೆ ಮಂಜುನಾಥನ ಮಾತುಗಳು ಇಷ್ಟವಾಗುತ್ತಿರಲಿಲ್ಲ. ಈ ವಿಚಾರ ಬರ ಬರುತ್ತಾ ಅತಿಯಾಗಿ, ಮಂಜುನಾಥ ಪ್ರತಿದಿನ ಹಗಲು ರಾತ್ರಿ ವಿಂದ್ಯಾಳಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ತಾಯಿ ನಾಗಮ್ಮ ಆರೋಪಿಸಿದ್ದಾರೆ.
ಕೆಟ್ಟ ಪದಗಳಲ್ಲಿ ಬಯ್ಯುವುದು, ಅನುಮಾನ ಪಡುವುದು, ಚಾರಿತ್ರ್ಯಹರಣ ಮಾಡುವುದು ಮಾಡುತ್ತಿದ್ದ. ಇದರಿಂದ ವಿಂದ್ಯಾ ನೊಂದು ಕಣ್ಣೀರಿಡುತ್ತಿದ್ದಳು. ಹೀಗಾಗಿ ಮೊಬೈಲ್ ಫೋನ್‌ನ್ನು ತೆಗೆದಿಟ್ಟುಕೊಂಡಿದ್ದೆ. ಆದರೆ, ನಾವು ಇಲ್ಲದ ವೇಳೆ ಮನೆಗೆ ಬರುತ್ತಿದ್ದ ಮಂಜುನಾಥ ವಿಂದ್ಯಾಳೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆಯನ್ನು ನಡೆಸಿದ್ದ ಎಂದು ನಾಗಮ್ಮ ಆರೋಪಿಸಿದ್ದಾರೆ.
ಆತ್ಮಹತ್ಯೆ ಯತ್ನ: ಮಂಗಳವಾರ ಬೆಳಗ್ಗೆ ಲಗ್ಗೆರೆಯ ಸಂಬಂಧಿಕರ ಮನೆಗೆ ತೆರಳಿದ್ದ ವಿಂದ್ಯಾ 11 ಗಂಟೆ ಸುಮಾರಿಗೆ ಮನೆಗೆ ವಾಪಸಾಗಿದ್ದರು. ಮನೆಯಲ್ಲಿ ಸ್ನೇಹಿತರೊಂದಿಗೆ ಮಾತನಾಡಿದ ವಿಂದ್ಯಾ, ‘ಇದೇ ಕೊನೆ. ನಾನಿನ್ನು ಬದುಕುವುದಿಲ್ಲ. ನನಗೆ ಜೀವನ ಬೇಸರವಾಗಿದೆ. ನಾನು ನೊಂದಿದ್ದೇನೆ’ ಎಂದು ಹೇಳಿ ಫೋನ್ ಇಟ್ಟಿದ್ದರು. ಬಳಿಕ ಕೊಠಡಿಗೆ ತೆರಳಿ 85 ಮಧುಮೇಹ ಮಾತ್ರೆಗಳನ್ನು ಸೇವಿಸಿ ಮಲಗಿದ್ದಳು. ಕೆಲ ಹೊತ್ತಿನ ಬಳಿಕ ಸೇವಿಸಿದ್ದ ಮಾತ್ರೆಗಳ ಕವರ್ ಹಿಡಿದುಕೊಂಡು ತಾಯಿ ಬಳಿ ಬಂದು ಕುಳಿತಿದ್ದಳು. ವಿಂದ್ಯಾಳ ವರ್ತನೆ ಹಾಗೂ ಖಾಲಿಯಾಗಿರುವ ಮಾತ್ರೆಗಳನ್ನು ಗಮನಿಸಿ ಗಾಬರಿಗೊಂಡ ತಾಯಿ ನಾಗಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ಬಂದ ಸಂಬಂಧಿಕರು ವಿಂದ್ಯಾಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಂದ್ಯಾಳ ಆರೋಗ್ಯದ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಗ ಮಂಜುನಾಥ, ವಿಂದ್ಯಾಳಿಗೆ ‘ಮತ್ತು’ ಬರಿಸುವ ಪಾನೀಯ ಕುಡಿಸಿ ಸಭ್ಯವಲ್ಲದ ಫೋಟೋ ತೆಗೆದುಕೊಂಡಿದ್ದ. ಈ ವಿಚಾರವನ್ನು ಇತ್ತೀಚೆಗೆ ವಿಂದ್ಯಾ ನನ್ನ ಮುಂದೆ ಹೇಳಿದ್ದಾಳೆ ಎಂದು ತಾಯಿ ನಾಗಮ್ಮ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಪ್ರವಾಸ ಹೋಗುವ ವಿಚಾರವನ್ನು ಆಕೆ ತಿಳಿಸಿರಲಿಲ್ಲ. ಕಿರುಕುಳ ಹೆಚ್ಚಾದಾಗ ಈ ವಿಚಾರ ಹೇಳಿದ್ದಳು. ಹಲ್ಲೆ ಮಾಡಿದ್ದಲ್ಲದೇ, ಕೈಗೆ ಸಿಗರೇಟಿನಿಂದ ಸುಟ್ಟಿದ್ದಾನೆ ಎಂದು ಹೇಳಿದ್ದಳು ನಾಗಮ್ಮ ತಿಳಿಸಿದ್ದಾರೆ.
ಪ್ರವಾಸಕ್ಕೆ ಹೋದಾಗ ಮಂಜುನಾಥ, ವಿಂದ್ಯಾಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಸಿನಿಮಾ ಸಂಬಂಧ ಕಾರ್ಯಕ್ರಮಗಳಿಗೆ ಹೋಗುವಾಗ ತನ್ನನ್ನು ಕರೆದುಕೊಂಡು ಹೋಗು ಎಂದು ಪೀಡಿಸುತ್ತಿದ್ದ. ಅಲ್ಲದೇ ಬೈಕ್ ತೆಗೆದುಕೊಳ್ಳಲು ವಿಂದ್ಯಾಳಿಂದ 15 ಸಾವಿರ ಹಣ ಪಡೆದಿದ್ದ. ಜತೆಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ನೊಂದು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆಡಿಷನ್‌ನಲ್ಲಿ ಆಯ್ಕೆಯಾಗಿದ್ದ ವಿಂದ್ಯಾ ಶೂಟಿಂಗ್ ಸ್ಪಾಟ್‌ಗಳಿಗೆ ಸರಿಯಾದ ಸಮಯಕ್ಕೆ ಬರುತ್ತಿದ್ದರು. ಶೂಟಿಂಗ್ ವೇಳೆ ತುಂಬ ಸಹಕರಿಸುತ್ತಿದ್ದರು. ಸಿನಿಮಾ ಇನ್ನೇನು ಬಿಡುಗಡೆಯಾಗಬೇಕು. ಈ ಹಂತದಲ್ಲಿ ಪ್ರಿಯಕರನಿಂದ ಕಿರುಕುಳಕ್ಕೊಳಗಾಗಿ ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Click this button or press Ctrl+G to toggle between Kannada and English