ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಮಾ.8ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಲಿದೆ.
ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ 25 ನಗರಗಳ 82 ಕೇಂದ್ರಗಳಲ್ಲಿ ಪ್ರಥಮ ಸುತ್ತಿನ ಚಾಯ್ ಪೆ ಚರ್ಚೆ ಯಶಸ್ವಿಯಾಗಿ ನಡೆದಿದೆ. ಎರಡನೇ ಸಂವಾದದಲ್ಲಿ 150-200 ಮಹಿಳೆಯರು ಭಾಗವಹಿಸಲಿದ್ದು, ಸ್ಥಳೀಯ ಮಹಿಳಾ ನಾಯಕರು, ಸಾಧಕರು, ವಿಶೇಷ ಆಹ್ವಾನಿತರು ಹಾಜರಿರುವರು. ಬೆಳಗಾವಿ ಮತ್ತು ಬೆಂಗಳೂರಲ್ಲಿ ನೇರವಾಗಿ ಮೋದಿ ಸಂವಾದ ನಡೆಸುವರು. ಇದೇ ವೇಳೆ ಮೋದಿ ಅಭಿವೃದ್ಧಿಪರ ವೀಡಿಯೋ ಪ್ರದರ್ಶಿಸಲಾಗುವುದು ಎಂದರು.
ಮಹಿಳೆಯರು ಎದುರಿಸುವ ಸ್ಥಳೀಯ ಸಮಸ್ಯೆಗಳನ್ನು ಹಂಚಿಕೊಳ್ಳುವುದು, ಮಹಿಳಾ ಸಬಲೀಕರಣಕ್ಕೆ ಮೋದಿ ಜತೆ ಪ್ರಶ್ನಿಸಬಹುದು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಬಹುದು ಎಂದರು.
‘ಮದ್ಯ’ ರಾತ್ರಿಗೆ ವಿರೋಧ: ಮನೆ ಮನೆಗೆ ಬಿಜೆಪಿ ಎಂಬ ಕಾರ್ಯಕ್ರಮದಲ್ಲಿ ಸಾಮಾನ್ಯ ಮಹಿಳೆಯರನ್ನು ಸಂಪರ್ಕಿಸುವ ಅಭಿಯಾನ ನಡೆದಿದೆ. ವಿಚಾರ ಮಾಡಿ ಮತದಾನ ಮಾಡುವ ವಾತಾವರಣವನ್ನು ಸಂವಾದ ಮುಖೇನ ನಡೆಸಲಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುತ್ತದೆ. ಮಹಿಳಾ ಪೊಲೀಸ್ ಠಾಣೆ ಹೆಚ್ಚಿಸಬೇಕು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆ, ಬೆಂಗಳೂರಲ್ಲಿ ಹೊಟೇಲ್, ಪಬ್, ಬಾರ್ ಸಮಯ ರಾತ್ರಿ 1 ರವರೆಗೆ ವಿಸ್ತರಿಸಿರುವುದನ್ನು ಟೀಕಿಸಿದರು.
ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಮುಖಂಡರಾದ ಕಸ್ತೂರಿ ಪಂಜ, ಶಾಂತ ಆರ್, ಪುಷ್ಪಲತಾ ಗಟ್ಟಿ, ಶಕೀಲ ಕಾವ ಮತ್ತಿತರರು ಇದ್ದರು.
ಇಲ್ಲಿ ಎಲ್ಲೆಲ್ಲಿ?
ಜಿಲ್ಲೆಯಲ್ಲಿ ಎನ್‌ಐಟಿಕೆ ಹಾಸ್ಟೆಲ್ ಬಳಿ ಸುರತ್ಕಲ್, ಹೊಟೇಲ್ ಮಾತೃಶ್ರೀ ಜ್ಯೋತಿನಗರ, ಕಾವೂರು, ವರ್ಧಮಾನ ಹೊಟೇಲ್ ಯೆಯ್ಯಾಡಿ, ಹೊಟೇಲ್ ಜನತಾ ಗುರುಪುರ, ಶ್ರೀರಾಮ ರೆಸ್ಟೋರೆಂಟ್, ಕಿನ್ನಿಗೋಳಿ, ಶ್ರೀದುರ್ಗಾ ಕ್ಯಾಂಟೀನ್, ಮೂಲ್ಕಿ, ಅನುಗ್ರಹ ಕ್ಯಾಂಟೀನ್, ಗಾಂಧಿನಗರ ಸುಳ್ಯ, ನಮೋ ಟೀಸ್ಟಾಲ್, ಗುರುವಾಯನಕೆರೆ ಬೆಳ್ತಂಗಡಿ, ಹೊಟೇಲ್ ಪದ್ಮಾ ಟೂರಿಸ್ಟ್, ಬಿಸಿರೋಡ್‌ಗಳಲ್ಲಿ ಸಂವಾದ ನೇರ ಪ್ರಸಾರ ಕಾಣಲಿದೆ.
Click this button or press Ctrl+G to toggle between Kannada and English