ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹರಿಯಬಹುದಾದ ಹೆಂಡದ ಹೊಳೆಗೆ ಅಣೆಕಟ್ಟೆ ಕಟ್ಟಲು ಅಬಕಾರಿ ಇಲಾಖೆ ಕಸರತ್ತು ಆರಂಭಿಸಿದೆ.
ಮದ್ಯ ಮಾರಾಟ ಮತ್ತು ಸಾಗಣೆ ಮೇಲೆ ಇಲಾಖೆ ಇದೇ ಪ್ರಥಮ ಬಾರಿಗೆ ‘ಎಸ್‌ಎಂಎಸ್ ಅಸ್ತ್ರ’ ಬಳಸಲು ತೀರ್ಮಾನಿಸಿದೆ. ಅಂದರೆ ಪ್ರತಿ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯ, ಅದು ಸಾಗಣೆಯಾಗುವ ರೀತಿ ಮತ್ತು ಮದ್ಯದ ಅಂಗಡಿಗಳು ನಡೆಸುವ ಮಾರಾಟದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯಲಿದೆ.
ಡಿಸ್ಟಿಲರಿಗಳು ಮದ್ಯ ಉತ್ಪಾದಿಸಿ, ಅದನ್ನು ಹಂಚಿಕೆ ಮಾಡುವವರೆಗೂ ನಡೆಯುವ ಚಟುವಟಿಕೆ ತಿಳಿಯಲು ಎಲ್ಲಾ ಡಿಸ್ಟಿಲರಿಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಿದೆ. ಡಿಸ್ಟಿಲರಿಗಳಿಂದ ಪಡೆದ ಮದ್ಯ ಸಾಗಣೆ ವಾಹನ ಎಲ್ಲೆಲ್ಲಿ ಹೋಗುತ್ತಿದೆ. ಎಲ್ಲಿಗೆ ತಲುಪುತ್ತಿದೆ ಎನ್ನುವ ಬಗ್ಗೆ ಡಿಸ್ಟಿಲರಿಗಳಿಂದ ಪ್ರತಿ ಚೆಕ್‌ಪೋಸ್ಟ್‌ಗಳಿಂದ ಎಸ್‌ಎಂಎಸ್ ಮಾಹಿತಿ ಪಡೆಯಲಿದೆ. ಈ ಅಸ್ತ್ರವನ್ನು ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸದೆ ಅಂತಾರಾಜ್ಯ ಮಟ್ಟದಲ್ಲಿ ನಡೆಯುವ ಮದ್ಯ ಆಮದು, ರಫ್ತಿನ ಮೇಲೂ ಪ್ರಯೋಗಿಸಲಿದೆ.
ಜತೆಗೆ ಚುನಾವಣೆಯಲ್ಲಿ ಹಂಚಿಕೆ ಮಾಡಲು ಹೆಚ್ಚು ಖರೀದಿಸದಂತೆ ಮಾಡಲು ಹೋಲಿಕೆ ತಂತ್ರ ಬಳಸಲಿದೆ. ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ಮಾಡುವ ಅಂಗಡಿಗಳ ಮಾಲೀಕರನ್ನು ತನಿಖೆ ಒಳಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಸಾಗಿಸುವವರು ಸುಸ್ತು: ರಾಜ್ಯದಲ್ಲಿ 34 ಪ್ರಾಥಮಿಕ ಡಿಸ್ಟಿಲರಿಗಳಿದ್ದು, 35 ಪ್ರಮುಖ ಡಿಸ್ಟಿಲರಿಗಳಿವೆ. ಇವು ಈತನಕ ಉತ್ಪಾದಿಸುತ್ತಿದ್ದ ಮದ್ಯಕ್ಕೆ ಅಷ್ಟಾಗಿ ಮಿತಿ ಇರುತ್ತಿರಲಿಲ್ಲ. ಆದರೆ ಈಗ ಇಂತಿಷ್ಟೇ ಪ್ರಮಾಣದ ಮದ್ಯ ಉತ್ಪಾದಿಸಬೇಕು. ಅದೂ ನಿಗದಿತ ಸಮಯದಲ್ಲಷ್ಟೇ ಉತ್ಪಾದನಾ ಕಾರ್ಯ ನಡೆಸಬೇಕಿದೆ. ಅಲ್ಲದೆ ಉತ್ಪಾದಿಸಿದ ಮದ್ಯವನ್ನು ಯಾರಿಗೆಲ್ಲಾ ಹಂಚಿಕೆ ಮಾಡಲಾಗುತ್ತಿದೆ ಎಂದು ಇಲಾಖೆಗೆ ಮಾಹಿತಿ ನೀಡಬೇಕಿದೆ. ನಂತರ ಡಿಸ್ಟಿಲರಿಗಳು ನೀಡುವ ಮಾಹಿತಿಯನ್ನು ಶಂಕಿಸಿ ಪ್ರತಿ ಡಿಸ್ಟಿಲರಿಯ ಚಟುವಟಿಕೆ ತಿಳಿಯಲು ಎಲ್ಲಾ ಹಂತದಲ್ಲೂ ಸಿಸಿ ಕ್ಯಾಮೆರಾ ಅಳವಡಿಸುತ್ತಿದೆ.
ಹೀಗಾಗಿ ಡಿಸ್ಟಿಲರಿಗಳು ತಯಾರಿಸಿದ ಮದ್ಯದ ಮಾಹಿತಿ ನೀಡಿ, ಅದನ್ನು ಯಾವ ಸ್ಥಳಕ್ಕೆ ರವಾನಿಸಲಾಗುತ್ತಿದೆ ಎಂದು ತಿಳಿಸಬೇಕಿದೆ. ಈ ಮದ್ಯ ನೆರೆ ರಾಜ್ಯಕ್ಕೆ ಸಾಗಣೆಯಾಗುವಂತಿದ್ದರೆ ಪಾನಿಯ ನಿಗಮದ ಸಿಬ್ಬಂದಿಯೊಬ್ಬರು ಆ ಮದ್ಯ ಸಾಗಣೆ ವಾಹನದ ಬೆನ್ನು ಹತ್ತುತ್ತಾರೆ. ಮದ್ಯ ಇರುವ ವಾಹನ ನಿಗದಿತ ಸ್ಥಳ ಮುಟ್ಟುವವರೆಗೂ ಆ ಸಿಬ್ಬಂದಿ ಇಲಾಖೆಗೆ ವಾಹನದ ಚಲನವಲನದ ಬಗ್ಗೆ ಇಲಾಖೆ ಮೇಲಧಿಕಾರಿಗಳಿಗೆ ಕ್ಷಣಕ್ಷಣದ ಮಾಹಿತಿ ನೀಡುತ್ತಿರುತ್ತಾರೆ. ಜತೆಗೆ ಇಂಥ ವಾಹನಗಳನ್ನು ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲೂ ತಪಾಸಣೆ ನಡೆಸಿ ಖಾತರಿ ಪಡಿಸಲಾಗುತ್ತದೆ.
ಇಲಾಖೆ ಗುರಿಯಂತೆ ಈ ವರ್ಷ ಮಾರ್ಚ್ ಅಂತ್ಯಕ್ಕೆ ಸುಮಾರು 60ಲಕ್ಷ ಕೇಸ್ ಮಾರಾಟವಾಗಬೇಕಿತ್ತು. ಆದರೆ ಈತನಕ 15ಲಕ್ಷ ಕೇಸ್ ಮಾತ್ರ ಮಾರಾಟವಾಗಿದೆ. ಅಂದರೆ ದಿನದ ಸರಾಸರಿ ಮಾರಾಟ 3ಲಕ್ಷ ಕೇಸ್‌ನಷ್ಟಿದೆ. ಮಾರುಕಟ್ಟೆ ಪರಿಸ್ಥಿತಿ ಹೀಗಿರುವಾಗ ಈಗ ಏಕಾಏಕಿ ಮಾರಾಟ ಹೆಚ್ಚಿದರೆ ಅದು ಚುನಾವಣೆ ಉದ್ದೇಶದಲ್ಲಿ ಆಗುತ್ತಿದೆ ಎಂದು ಶಂಕಿಸಿ ಮಾರುಕಟ್ಟೆ ಹೋಲಿಕೆ ಮಾಡಲು ಇಲಾಖೆ ಮುಂದಾಗಿದೆ. ಕಳೆದ ವರ್ಷ ಇದೇವೇಳೆ ಅಂಗಡಿ ಪಡೆದಿದ್ದ ಮದ್ಯದ ಪ್ರಮಾಣ ಎಷ್ಟು? ಈ ವರ್ಷ ಎಷ್ಟು ಪ್ರಮಾಣದ ಬೇಡಿಕೆ ಸಲ್ಲಿಸಿದೆ ಎಂದು ಪರಿಶೀಲಿಸಲಿದೆ. ಹೆಚ್ಚು ಬೇಡಿಕೆ ಸಲ್ಲಿಸಿದರೆ ಅಂಗಡಿಯನ್ನು ತನಿಖೆಗೆ ಒಳಪಡಿಸಲಿದೆ.
ಅಕ್ರಮ ಮದ್ಯ ತಡೆಗೆ ಅನೇಕ ಕಠಿಣ ನಿಯಮ ಜಾರಿ ಮಾಡುತ್ತಿದ್ದೇವೆ. ವಿಶೇಷವಾಗಿ ನೆರೆ ರಾಜ್ಯದ ಮದ್ಯ ಅಕ್ರಮವಾಗಿ ಬರದಂತೆ ತಡೆಯುತ್ತಿದ್ದು, ಇದಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೆ ಇಲಾಖೆಯಲ್ಲಿರುವ ಕಡಿಮೆ ಸಿಬ್ಬಂದಿಯಿಂದ ಹೆಚ್ಚಿನ ಕೆಲಸ ಮಾಡಿಸುವ ಅನಿವಾರ್ಯವಿದೆ.
Click this button or press Ctrl+G to toggle between Kannada and English