ಎಂಆರ್‌ಪಿಎಲ್ ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಜೋಕಟ್ಟೆ ನಾಗರಿಕರ ಪ್ರತಿಭಟನೆ

8:46 PM, Friday, October 10th, 2014
Share
1 Star2 Stars3 Stars4 Stars5 Stars
(4 rating, 5 votes)
Loading...

Jokatte Protest

ಮಂಗಳೂರು: ಎಂಆರ್‌ಪಿಎಲ್ ಕಂಪೆನಿಯ ಸರ್ವಾಧಿಕಾರಿ ಧೋರಣೆ ವಿರುದ್ಧ, ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅ1o ರಂದು ಪ್ರತಿಭಟನೆ ನಡೆಸಿತು.

ಕ್ಲಾಕ್ ಟವರ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಎಂಆರ್‌ಪಿಎಲ್ ಕಂಪೆನಿಯ ಮೂರನೇ ಹಂತದ ಸ್ಥಾವರ ಸ್ಥಾಪನೆಯಾದ ನಂತರ ಗಂಭೀರ ಸಮಸ್ಯೆಗಳು ಆರಂಭವಾಗಿದೆ. ಎಂಆರ್‌ಪಿಎಲ್ ನಮ್ಮ ಭೂಮಿ ಕಿತ್ತುಕೊಂಡು ನಮಗೆ ಕೇವಲ ಕಣ್ಣೀರನ್ನು ಮಾತ್ರ ನೀಡಿದೆ. ಉದ್ಯೋಗ ಕೊಡುವುದೆಂಬುದು ಕೇವಲ ಭರವಸೆಯಾಗಿಯೇ ಉಳಿದು ಹೋಗಿದೆ. ಜೋಕಟ್ಟೆ ಭಾಗದಲ್ಲಿ ಕೋಕ್ ಮತ್ತು ಸಲ್ಫರ್ ಉತ್ಪಾದನೆ ಮಾಡುತ್ತಿರುವುದು ಜನರ ಬದುಕಿಗೆ ಆತಂಕ ತಂದೊಡ್ಡಿದೆ. ಈ ಘಟಕದಿಂದ ಹೊರಸೂಸುವ ದುರ್ಗಂಧ, ಹಾರುಬೂದಿ, ನೀರು, ತ್ಯಾಜ್ಯಗಳು ಜೋಕಟ್ಟೆ, ಕೆಂಜಾರು, ಮರವೂರು, ಕಳವಾರು ತೂಕೂರು ಗ್ರಾಮದ ಜನತೆಯ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಹೋರಾಟ ಸಮಿತಿಯ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.

ಕಂಪೆನಿಯು ಹಲವು ವಿನಾಶಕಾರಿ ಉತ್ಪನ್ನಗಳನ್ನು ಹೊರಹಾಕುವುದರಿಂದ ಇಲ್ಲಿನ ಜನತೆ ತಲೆಸುತ್ತು, ವಾಕರಿಕೆ, ಚರ್ಮ ಸಂಬಂಧಿ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ದೂರಿದರು.

ಕೂಡಲೇ ಈ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ .ಪರಿಸರ ನಾಶಕ ಎಂಆರ್‌ಪಿಎಲ್ ಕಂಪೆನಿಗೆ ಧಿಕ್ಕಾರ, ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಕಂಪೆನಿಗೆ ಧಿಕ್ಕಾರ ಫಲಕ ಹಿಡಿದುಕೊಂಡು ಮಹಿಳೆಯರು, ಮಕ್ಕಳು ಘೋಷಣೆ ಕೂಗಿದರು.

Jokatte Protest

Jokatte Protest

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English