ಮಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾದರೂ ಇನ್ನೂ ನಮ್ಮ ರೈತರಿಗೆ ತಮ್ಮ ಜಮೀನುಗಳ ಪಹಣಿ (ಆರ್.ಟಿ.ಸಿ.) ಸಮರ್ಪಕವಾಗಿ ಸಿಕ್ಕಿಲ್ಲ, ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕಂದಾಯ ಅದಾಲತ್‌ಗಳನ್ನು ಮಾಡುವ ಮೂಲಕ ರೈತರ ಮನೆಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದ್ದಾರೆ.
ಅವರು ಇಂದು ಬೆಳ್ತಂಗಡಿಯಲ್ಲಿ ರೂ.10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ 1.62ಕೋಟಿ ರೈತರಿಗೆ ಆರ.ಟಿ.ಸಿ. ನೀಡ ಬೇಕಿದ್ದು, ಈಗಾಗಲೇ 7711 ಕಂದಾಯ ಅದಾಲತ್‌ಗಳ ಮೂಲಕ 7,94,000 ರೈತರ ಮನೆ ಬಾಗಿಲಿಗೆ ಆರ.ಟಿ.ಸಿ. ಗಳನ್ನು ವಿತರಿಸಲಾಗಿದೆ, ಇದೇ ರೀತಿ ಪೋಡಿ ಕೆಲಸ ಬಾಕಿ ಇದ್ದು, ಪೋಡಿ ಕೆಲಸ ನಿರ್ವಹಿಸಲು ಸರ್ವೇಯರ್‌ಗಳ ಕೊರತೆ ಇತ್ತು ,ಸರ್ಕಾರ ಪೋಡಿ ಕೆಲಸ ನಿರಂತರವಾಗಿ ನಡೆದು ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 1769 ಸರ್ವೇಯರ್‌ಗಳನ್ನು ನೇಮಕ ಮಾಡಿಕೊಂಡು, ಅವರಿಗೆ ಸೂಕ್ತ ತರಬೇತಿ ನೀಡುತ್ತಿದ್ದು, ನಿಗದಿತ ಕಾಲ ಮಿತಿಯಲ್ಲಿ ರಾಜ್ಯದಲ್ಲಿ ಪೋಡಿ ಕಾರ್ಯ ಪೂರ್ಣಮಾಡಲು ಸಂಕಲ್ಪಿಸಿದೆ. ಈ ನಿಟ್ಟಿನಲ್ಲಿ ಇನ್ನೂ 720 ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವರು ಈ ಸಂಧರ್ಭದಲ್ಲಿ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು 3705 ಪಿಂಚಿಣಿ ಅದಾಲತ್‌ಗಳ ಮೂಲಕ 1,39,000 ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ವಿತರಿಸಲಾಗಿದೆ, ಪ್ರತಿ ವರ್ಷ ರಾಜ್ಯ ಸರ್ಕಾರ ರೂ.1,800 ಕೋಟಿಗಳನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ವೆಚ್ಚ ಮಾಡುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರಕಲಿ ಎಂಬುದೇ ಉದ್ದೇಶಅಂತ್ಯೋದಯದಿಂದ ಸರ್ವೋದಯವೇ ಸರ್ಕಾರದ ಗುರಿ ಎಂದು ಸಚಿವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಕೆ.ವಸಂತ ಬಂಗೇರ ಅವರು ಮಾತನಾಡಿ ರಾಜೀವಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ವಯ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ 5000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ತಾಲೂಕಿನ ನಕ್ಸಲ್ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಹೆಚ್ಚುವರಿ ರೂ.5 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಸಚಿವರಲ್ಲಿ ವಿನಂತಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ,ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ಪಾಲೇದು,ಪಟ್ಟಣ ಪಂಚಾಯತ್ ಅಧ್ಯಕ್ಷ ಮುಸ್ತರ್ ಜನ್ ಮೆಹಬೂಬ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English