ಮಂಗಳೂರು: ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿ, ಐ ಪಾಯಿಂಟ್ ಕನ್ಸಲ್ಟಂಟ್, ಕೋಟ್ ಕ್ರಾಫ್ಟ್ ಟೆಕ್ನಾಲಜಿ, ಕರ್ಣಾಟಕ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮಲೇರಿಯಾ ನಿಯಂತ್ರಣ ತಂತ್ರಾಂಶವನ್ನು ಸಚಿವ ಯು.ಟಿ. ಖಾದರ್ ಶನಿವಾರ ಮನಪಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಮಲೇರಿಯಾ ನಿಯಂತ್ರಣ ತಂತ್ರಾಂಶ ಅಭಿವೃದ್ಧಿಪಡಿಸುವುದರ ಮೂಲಕ ಆರೋಗ್ಯವಂತ ಮಂಗಳೂರು ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದೆ. ಮುಂದಿನ ಮೂರು ವರ್ಷದೊಳಗೆ ನಗರದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಮಾಹಿತಿ ತಂತ್ರಾಂಶ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದೆ. ಜನಸಾಮಾನ್ಯರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಉಭಯ ಕ್ಷೇತ್ರದ ನಿಯಮಗಳಲ್ಲಿ ಬದಲಾವಣೆ ತರುವ ಅವಶ್ಯವಿದೆ ಎಂದು ಅವರು ಹೇಳಿದರು.
ತಂತ್ರಾಂಶ ಕೈಪಿಡಿ ಬಿಡುಗಡೆಗೊಳಿಸಿದ ಶಾಸಕ ಜೆ.ಆರ್. ಲೋಬೋ ಮಾತನಾಡಿ, ನಗರಕ್ಕೆ ಹೊಸದಾಗಿ ಏಳು ಆರೋಗ್ಯ ಕೇಂದ್ರಗಳು ಸೇರ್ಪಡೆಯಾಗಲಿವೆ. ನಗರದಲ್ಲಿ ಸಮರ್ಪಕ ಒಳಚರಂಡಿ ನಿರ್ಮಾಣ ಮಾಡಿದರೆ ಮಲೇರಿಯಾ ನಿಯಂತ್ರಣಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಮೇಯರ್ ಜೆಸಿಂತಾ ವಿಜಯ ಆಲ್ಫೆಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮೊದೀನ್ ಬಾವ, ಸ್ಥಾಯಿಸಮಿತಿ ಅಧ್ಯಕ್ಷರಾದ ಹರಿನಾಥ್, ಕೇಶವ ಮರೋಳಿ,ದೀಪಕ್ ಪೂಜಾರಿ, ಸಚೇತಕ ಎಂ. ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಸುಧಿಧೀರ್ ಶೆಟ್ಟಿ, ಡಾ| ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಮೆಡಿಕಲ್ ರಿಲೀಫ್ ಸೊಸೈಟಿಯ ಡಾ| ಶಾಂತಾರಾಮ ಬಾಳಿಗ, ಐ ಪಾಯಿಂಟ್ ಸಂಸ್ಥೆಯ ನರೇನ್ ಕುಡ್ವಟ್, ಕರ್ಣಾಟಕ ಬ್ಯಾಂಕ್‌ನ ಜನರಲ್ ಮೆನೇಜರ್ ರಘುರಾಮ್, ಕಾರ್ಪೊರೇಶನ್ ಬ್ಯಾಂಕ್‌ನ ಡಿಜಿಎಂ ಬಿ. ಎಂ. ಹೆಗ್ಡೆ, ಮಾಜಿ ಮೇಯರ್ ಮಹಾಬಲ ಮಾರ್ಲ, ಪರಿಸರ ಎಂಜಿನಿಯರ್ ಮನುಕುಮಾರ್ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.
ಕರ್ಣಾಟಕ ಬ್ಯಾಂಕ್ ವತಿಯಿಂದ ನೀಡಲಾದ 50 ಟ್ಯಾಬ್‌ಗಳನ್ನು ಪಾಲಿಕೆಗೆ ಹಸ್ತಾಂತರಿಸಿ ಅವುಗಳನ್ನು ಎಂಪಿಡಬ್ಲ್ಯು ಸಿಬಂದಿಗೆ ನೀಡಲಾಯಿತು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ. ಸಾಲಿಯಾನ್ ಸ್ವಾಗತಿಸಿದರು. ಪರಿಸರ ಎಂಜಿನಿಯರ್ ಮಧು ನಿರೂಪಿಸಿದರು.
Click this button or press Ctrl+G to toggle between Kannada and English