ಹರೀಶ್‌ ಪೂಜಾರಿ ಹತ್ಯೆ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ

1:30 PM, Saturday, November 14th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

Rai Cheque

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಟ್ವಾಳದಲ್ಲಿ ಹರೀಶ್‌ ಪೂಜಾರಿ ಅವರನ್ನು ಹತ್ಯೆ ಮಾಡಿರುವ ಹಾಗೂ ಶಮೀವುಲ್ಲ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ. ರೋಡಿನಲ್ಲಿ ಗುರುವಾರ ಸಂಭವಿಸಿರುವ ಅಹಿತಕಾರಿ ಘಟನೆಗಳು ಹಾಗೂ ಶುಕ್ರವಾರ ನಡೆದಿರುವ ಬಂದ್‌ ಹಿನ್ನೆಲೆಯಲ್ಲಿ ನಗರದ ಸರ್ಕಿಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚುವರಿ ಪೊಲೀಸ್‌ ಬಲ ತರಿಸಲಾಗಿದೆ. ಜಿಲ್ಲೆಯಾದ್ಯಂತ ಬಿಗುಬಂದೋಬಸ್ತು ಕೈಗೊಳ್ಳಲಾಗಿದ್ದು, ಶಾಂತಿ, ಸುವ್ಯವಸ್ಥೆಗೆ ಭಂಗತರುವ ಮತೀಯ ಶಕ್ತಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯ ಜನತೆ ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡದೆ ಸಂಯಮ ಕಾಯ್ದುಕೊಳ್ಳಬೇಕು. ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.
ಬಂಟ್ವಾಳದಲ್ಲಿ ಗುರುವಾರ ರಾತ್ರಿ ನಡೆದಿರುವ ಹರೀಶ್‌ ಪೂಜಾರಿ ಹತ್ಯೆ ಹಾಗೂ ಶಮೀವುಲ್ಲ ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಖಂಡಿಸುತ್ತೇನೆ. ಶುಕ್ರವಾರ ಮುಂಜಾನೆ ಮೃತರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೇನೆ. ಹರೀಶ್‌ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಳ್ಳದ ಅಮಾಯಕ ಯುವಕನಾಗಿದ್ದು, ಆತ ಹಾಗೂ ಸ್ನೇಹಿತ ಶಮೀವುಲ್ಲ ಕ್ರಿಕೆಟ್‌ ಆಟವಾಡಿ ಬರುತ್ತಿದ್ದಾಗ ಹಲ್ಲೆ ಮಾಡಲಾಗಿದೆ. ಮತೀಯ ಸಂಘಟನೆಗಳ ಮೇಲಾಟಕ್ಕೆ ಯುವಕ ಬಲಿಯಾಗಿದ್ದಾನೆ. ಆತನ ತಂದೆ ಕ್ಯಾನ್ಸರ್‌ ಪೀಡಿತರಾಗಿದ್ದು, ತಾಯಿ ಅಶಕ್ತರಾಗಿದ್ದಾರೆ. ಕುಟುಂಬ ದಯನೀಯ ಪರಿಸ್ಥಿತಿಯಲ್ಲಿದೆ. ಈ ಘಟನೆ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಬಯಸುವರಿಗೆ ಅತೀವ ನೋವುಂಟು ಮಾಡಿದೆ ಎಂದು ಸಚಿವರು ವಿವರಿಸಿದರು. ಗಾಯಾಳು ಶಮೀವುಲ್ಲ ಅವರ ಪರಿಸ್ಥಿತಿ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದು, ಆಸ್ಪತ್ರೆಗೆ ಭೇಟಿ ನೀಡಲಿದ್ದೇನೆ ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ನೆಲೆಸಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡಿರಲಿಲ್ಲ. ಗುರುವಾರ ಬಿ.ಸಿ. ರೋಡಿನಲ್ಲಿ ಒಂದು ಮತೀಯ ಸಂಘಟನೆ ತಹಶೀಲ್ದಾರ್‌ ಅವರಿಗೆ ಮನವಿ ಅರ್ಪಿಸಲು ಬಂದಿದ್ದಾಗ ಅವರ ಮೇಲೆ ಇನ್ನೊಂದು ಮತೀಯ ಸಂಘಟನೆಯಿಂದ ಕಲ್ಲುತೂರಾಟ ನಡೆದಿದೆ. ಘಟನೆಯಲ್ಲಿ ಯಾವುದೇ ಮತೀಯ ಸಂಘಟನೆ ತಪ್ಪಿತಸ್ಥರರಾಗಿದ್ದರೂ ಅವರ ಮೇಲೆ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ರೈ ತಿಳಿಸಿದರು.

ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಯಾವುದೇ ದುರುದ್ದೇಶದಿಂದ ಮಾಡಿರುವುದಿಲ್ಲ. ಇಷ್ಟವಿಲ್ಲದಿದ್ದವರು ಇದರಿಂದ ದೂರವುಳಿಯಬಹುದಿತ್ತು. ಅದರ ಬದಲು ಸಂಘರ್ಷದ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಅರಣ್ಯ ಸಚಿವರ ಬಗ್ಗೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮಾಡಿರುವ ಟೀಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ ಕಾಗೋಡು ಅವರು ಸಚಿವರಾಗಿದ್ದಾಗ ಶರಾವತಿ ಸಮಸ್ಯೆಯನ್ನು ಹೇಗೆ ನಿಭಾಯಿಸಿದ್ದಾರೆ. ಅವರ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಹಕ್ಕುಪತ್ರ ನೀಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮನಪಾ ಸಚೇತಕ ಶಶಿಧರ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮನಪಾ ಸದಸ್ಯರಾದ ದೀಪಕ್‌ ಪೂಜಾರಿ, ನವೀನ್‌ ಡಿ’ಸೋಜಾ, ಎ.ಸಿ. ವಿನಯರಾಜ್‌ ಮೊದಲಾದವರು ಉಪಸ್ಥಿತರಿದ್ದರು.

ಹರೀಶ್‌ ಪೂಜಾರಿ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ವತಿಯಿಂದಲೂ ನೆರವು ನೀಡಲಾಗುವುದು ಎಂದು ಸಚಿವ ರಮಾನಾಥ ರೈ ತಿಳಿಸಿದರು. ಘಟನೆ ಬಗ್ಗೆ ವಿಶೇಷ ಪೊಲೀಸ್‌ ತಂಡ ತನಿಖೆ ನಡೆಸುತ್ತಿದ್ದು, ಯಾವ ಸಂಘಟನೆ ಈ ಕೃತ್ಯ ಮಾಡಿದೆ ಎಂದು ಗೊತ್ತಾಗಬೇಕು. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English