ಕುಂಬಳೆ: ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರಕಾರ ನೀಡಿರುವ ಆಶ್ವಾಸನೆಗಳನನು ಹುಸಿಗೊಳಿಸಿ ಜನದ್ರೋಹ ಕಾರ್ಯತಂತ್ರಗಳನ್ನು ಹೆಣೆದು ಜನ ಸಾಮಾನ್ಯರ ಬದುಕನ್ನು ಹತಾಶೆಗೆ ತಳ್ಳುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡಲ ಕಾಂಗ್ರೆಸ್ಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಬೆಲೆಯೇರಿಕೆ ಕ್ರಮಗಳ ವಿರುದ್ದ ಮಂಗಳವಾರ ಕುಂಬಳೆ ಅಂಚೆ ಕಚೇರಿಗೆ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೋದಿ ಜನರನ್ನು ಮರುಳುಗೊಳಿಸುವ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ಕಾರ್ಯಕ್ಷಮತೆಯ ಯಾವುದೇ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡುವಲ್ಲಿ ವಿಫಲವಾಗಿದೆಯೆಂದು ಅವರು ಟೀಕಿಸಿದರು.
ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಗಣೇಶ್ ಭಂಡಾರಿ ಕುತ್ತಿಕ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಮಾತನಾಡಿ,ಜನಸಾಮಾನ್ಯರನ್ನು ಕಲ್ಪನೆಯ ಸೌಧಗಳ ಮೂಲಕ ವಂಚಿಸುತ್ತಿರುವ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದರೂ ಸರಕಾರದ ಲಕ್ಷ್ಯ ಅರ್ಥವಾಗುತ್ತಿಲ್ಲ.ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಕೇಂದ್ರವಾಗಿ ಭಾರತವನ್ನು ಮಾರ್ಪಡಿಸುವ ಅವರ ಹುನ್ನಾರ ತೀವ್ರ ಕಳವಳಕಾರಿ ಎಂದು ತಿಳಿಸಿದರು.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿರುವ ಕಚ್ಚಾ ತೈಲದ ಬೆಲೆಯ ಪ್ರಮಾಣಕ್ಕನುಸಾರ ತೈಲ ಬೆಲೆ ಇಳಿಕೆಯಾಗದೆ ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಖಂಡನಾರ್ಹ.ಈ ಬಗ್ಗೆ ಜನರಿಗೆ ಸರಕಾರ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮಾತನಾಡಿ,ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ತೈಲ ಬೆಲೆಯೇರಿಕೆಯ ವಿರುದ್ದ ಮಿಥ್ಯಾರೋಪಗಳನ್ನು ಮಾಡುವಲ್ಲಿ ಗಮನ ಸೆಳೆದಿದ್ದ ಬಿಜೆಪಿ ಇಂದು ಮಾಡುತ್ತಿರುವ ವಂಚನೆ ಮಾನವೀಯತೆಯ ಪ್ರತೀಕವಲ್ಲ.ಜನರು ತಕ್ಕ ಪಾಠವನ್ನು ನೀಡುವರೆಂದು ತಿಳಿಸಿದರು.
ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಸಾಮಿ ಕುಟ್ಟಿ ,ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಸಿ.ಎಂ.ಅಬ್ದುಲ್ಲ ಕುಂಞಿ,ಮುಖಂಡರಾದ ಲೋಕನಾಥ ಶೆಟ್ಟಿ,ರವಿ ಪೂಜಾರಿ,ನಾಸಿರ್ ಮೊಗ್ರಾಲ್,ಯಾಸಿಂ ಕಡಪ್ಪುರ,ಎನ್ ದಾಸನ್,ಸುಧೀರ್ ಪೈ ಕುಂಬಳೆ,ಲಕ್ಷ್ಮಣ ಪ್ರಭು ಕುಂಬಳೆ,ವಿಶಾಲಾಕ್ಷಿ,ಸುಮಿತ್ರಾ ಕುಲಾಲ್ ದರ್ಭಾರ್‌ಕಟ್ಟೆ,ಸರಸ್ವತಿ ದರ್ಭಾರ್‌ಕಟ್ಟೆ,ಗೀತಾ ಲೋಕನಾಥ ಶೆಟ್ಟಿ,ಜೀವನ್ ಗಟ್ಟಿ,ಭಂಡಾರಿ ಶೆಟ್ಟಿ,ಕೇಶವ ಧರ್ಬಾರ್‌ಕಟ್ಟೆ ಮೊದಲಾದವರು ಮಾತನಾಡಿದರು. ಕೆ.ಕೆ.ಅಶ್ರಫ್ ಸ್ವಾಗತಿಸಿ,ಕೇಶವ ದರ್ಭಾರ್‌ಕಟ್ಟೆ ವಂದಿಸಿದರು.ಕುಂಬಳೆ ಪೇಟೆಯಾದ್ಯಂತ ಸಂಚರಿಸಿದ ಪ್ರತಿಭಟನಾ ಮೆರವಣಿಗೆ ಕುಂಬಳೆ ಪ್ರಧಾನ ಅಂಚೆಕಚೇರಿ ಬಳಿ ಪ್ರತಿಭಟನಾ ಸಭೆ ನಡೆಸಿತು.
Click this button or press Ctrl+G to toggle between Kannada and English